Sunday, May 12, 2024
Homeಬೆಂಗಳೂರುಗೌರವಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿ : ಪೊಲೀಸ್ ಆಯುಕ್ತ

ಗೌರವಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿ : ಪೊಲೀಸ್ ಆಯುಕ್ತ

ಬೆಂಗಳೂರು,ಜ.5- ಪೊಲೀಸ್ ಠಾಣೆಗಳು ನ್ಯಾಯದೇಗುಲವಿದ್ದಂತೆ ಅವುಗಳ ಗೌರವಕ್ಕೆ ಚ್ಯುತಿ ಬರದಂತೆ ನಾವು ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಬೇಕು, ಜನಪರ ಕಾಳಜಿ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಮೂಲಕ ಆದರ್ಶಪ್ರಾಯ ರಾಗಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಥಣಿಸಂದ್ರದ ಸಿಎಆರ್ ಕವಾತು ಮೈದಾನದಲ್ಲಿ ಇಂದು ಮಾಸಿಕ ಕವಾಯತು ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಾ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 2024ರ ಶುಭಾಷಯ ಸಂದೇಶ ನೀಡಿ, ನಾನು ಆಯುಕ್ತನಾಗಿ ಕಳೆದ 7 ತಿಂಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಅಧಿಕಾರಿಗಳ ಕರ್ತವ್ಯ, ಸಮಯಪ್ರಜ್ಞೆ ಮತ್ತು ಜವಾಬ್ದಾರಿಗಳನ್ನು ಗಮನಿಸಿ ಸ್ವತಃ ನನ್ನ ಅನುಭವವನ್ನು ಸಂದೇಶ ಪತ್ರದಲ್ಲಿ ಹಂಚಿಕೊಂಡಿದ್ದೇನೆ ಎಂದರು.

ನಗರ ಪೊಲೀಸ್ ಘಟಕ 61ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ 2023ರ ವಿಧಾನಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಿ ಶ್ಲಾಘನೆಗೆ ಪಾತ್ರರಾಗಿದ್ದೀರಿ, ಈ ವರ್ಷ ಲೋಕಸಭಾ ಚುನಾವಣೆ ಬರಲಿದೆ. ಈ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಹೇಳಿದರು.

15 ಮಂದಿ ಭಾರತೀಯರಿದ್ದ ಹಡಗು ಸೊಮಾಲಿಯಾ ಕರಾವಳಿಯಲ್ಲಿ ಅಪಹರಣ

ಮಾದಕವಸ್ತು ಸಾಗಾಣೆ ವಿರುದ್ಧ ನಮ್ಮ ಹೋರಾಟ ನಿರಂತರವಾಗಿದೆ. ಸೈಬರ್ ಅಪರಾಧಗಳು, ಮಹಿಳೆಯರು, ದೀನದಲಿತರ ರಕ್ಷಣೆ ಇತ್ಯಾದಿ ವಿಷಯಗಳಾದ ಠಾಣೆಗಳ ಭೌತಿಕ ಹಾಗೂ ಕಡತ ನಿರ್ವಹಣೆ, ಗಣಕೀಕೃತ ವ್ಯವಸ್ಥೆ ,ಸಮಯಪ್ರಜ್ಞೆ, ವಿವೇಚನೆಯುಕ್ತ ವರ್ತನೆಗಳಿಂದ ಬೆಂಗಳೂರು ನಗರ ಪೊಲೀಸರು ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ.

ನಮ್ಮಲ್ಲಿ ಅನೇಕ ದೋಷಗಳಿವೆ. ಮುಖ್ಯವಾಗಿ ಪೊಲೀಸ್ ಠಾಣೆಗಳಲ್ಲಿ ದೀನ ದಲಿತರ, ಅಮಾಯಕರಿಗೆ ರಕ್ಷಣೆ ಒದಗಿಸದೆ ಕೇವಲ ಬಲಾಢ್ಯರು, ಹಣವಂತರಿಗೆ ಮಣೆ ಹಾಕುತ್ತಾರೆ ಎಂಬ ಆರೋಪಗಳು ಇವೆ. ಭ್ರಷ್ಟಾಚಾರ, ಆರೋಪಿಗಳೊಂದಿಗೆ ಪೊಲೀಸರ ಶಾಮೀಲು, ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರವೃತ್ತಿ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುವಂತಾಗಿದೆ ಎಂದು ಇದೇ ಸಂದರ್ಭದಲ್ಲಿ ಆಯುಕ್ತರು ವಿಷಾದ ವ್ಯಕ್ತಪಡಿಸಿದರು.

2024ರಲ್ಲಿ ನಾವು ಈ ಎಲ್ಲ ದೋಷ ಮತ್ತು ಆರೋಪಗಳನ್ನು ಹಿಮ್ಮೆಟ್ಟಿಸಿ ನ್ಯಾಯಸಮ್ಮತ ಕರ್ತವ್ಯ, ಜನಪರ ಕಾಳಜಿ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದು ಬೆಂಗಳೂರಿನ ಪ್ರಜ್ಞಾವಂತ ನಾಗರಿಕರಿಗೆ ಉತ್ತಮ ಸೇವೆ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕೆಂದು ತಿಳಿಸಿದರು. ಕಳೆದ ವರ್ಷ ಉತ್ತಮವಾಗಿ ಕೆಲಸ ಮಾಡಿದ್ದೀರಿ. ಈ ವರ್ಷವು ಸಹ ಜವಾಬ್ದಾರಿಯುತವಾಗಿ ಕೆಲಸ ಮಾಡಿ ನಗರದ ಜನರ ಮನ್ನಣೆ ಗಳಿಸಬೇಕೆಂದು ದಯಾನಂದ್ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ವಿವಿಧ ಶ್ರೇಣಿಯ 112 ಪೊಲೀಸ್ ಅಧಿಕಾರಿ ಹಾಗು ಸಿಬ್ಬಂದಿಗಳಿಗೆ ಪ್ರಸಶನಾ ಪತ್ರ ನೀಡಿ ಅಭಿನಂದಿಸಿದರು.

RELATED ARTICLES

Latest News