Saturday, May 4, 2024
Homeರಾಜ್ಯಉಪ ಮುಖ್ಯಮಂತ್ರಿ ಪಟ್ಟಕ್ಕೆ ಸಿದ್ದು ಆಪ್ತರ ಪಟ್ಟು

ಉಪ ಮುಖ್ಯಮಂತ್ರಿ ಪಟ್ಟಕ್ಕೆ ಸಿದ್ದು ಆಪ್ತರ ಪಟ್ಟು

ಬೆಂಗಳೂರು,ಜ.5- ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿ, ಜಾತಿ ಜನಗಣತಿ ವರದಿ ಬಿಡುಗಡೆ, ಒಳಮೀಸಲಾತಿ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ನಿನ್ನೆ ನಡೆದ ಸಿದ್ದರಾಮಯ್ಯನವರ ಆಪ್ತ ಸಚಿವರ ಬಣದ ರಹಸ್ಯ ಸಭೆಯಲ್ಲಿ ಗಂಭೀರ ಚರ್ಚೆಗಳಾಗಿವೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಮನೆಯಲ್ಲಿ ನಡೆದ ರಹಸ್ಯ ಭೋಜನಾ ಕೂಟದಲ್ಲಿ ರಾಜಕೀಯ ಕುರಿತು ಚರ್ಚೆಗಳಾಗಿದ್ದು, ರಾಜ್ಯ ರಾಜಕಾರಣದಲ್ಲಿ ಸ್ಪೋಟಕ ಬೆಳವಣಿಗೆಗೆ ಕಾರಣವಾಗಿದೆ. ನಿನ್ನೆ ರಾತ್ರಿ 9 ಗಂಟೆಯಿಂದ 11 ಗಂಟೆಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಎಚ್.ಸಿ.ಮಹದೇವಪ್ಪ, ಪರಮೇಶ್ವರ್, ಕೆ.ಎನ್.ರಾಜಣ್ಣ, ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು.

ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವುದರಿಂದ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರ ಪ್ರಭಾವ ತಗ್ಗಲಿದೆ ಎಂಬ ಲೆಕ್ಕಾಚಾರವಿದೆ. ಇದಕ್ಕಾಗಿಯೇ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಆರಂಭದಲ್ಲಿ ಒಂದಿಷ್ಟು ರಾಜಿ ಮಾಡಿಕೊಂಡರಾದರೂ ಸರ್ಕಾರದಲ್ಲಿ ಒಂದೇ ಉಪಮುಖ್ಯಮಂತ್ರಿ ಹುದ್ದೆ ಇರಬೇಕು ಎಂಬ ಷರತ್ತು ವಿಧಿಸಿದ್ದರು. ಅದು ಈವರೆಗೂ ಜಾರಿಯಲ್ಲಿದೆ.

ಈ ತಂತ್ರಗಾರಿಕೆಗೆ ಪ್ರತಿತಂತ್ರ ರೂಪಿಸಲು ಸಿದ್ದರಾಮಯ್ಯ ಅವರ ಅಗೋಚರವಾದ ಬಣ ಸದಾ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಲೇ ಇದೆ. ಸಿದ್ದರಾಮಯ್ಯ ಅವರ ಪರಮಾತ್ಮ ಎಂದೇ ಗುರುತಿಸಿಕೊಂಡಿರುವ ಕೆ.ಎನ್.ರಾಜಣ್ಣ ಮೊಟ್ಟ ಮೊದಲ ಬಾರಿಗೆ ಜಾತಿವಾರು 3 ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಯಾಗಬೇಕು ಎಂಬ ಹೇಳಿಕೆ ನೀಡಿದ್ದರು. ಅದು ಸುದೀರ್ಘ ಕಾಲದ ಚರ್ಚೆಗೆ ಗ್ರಾಸವಾಗಿತ್ತು. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್ ಸೇರಿದಂತೆ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಅನೇಕ ಸಚಿವರು ರಾಜಣ್ಣ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು.

15 ಮಂದಿ ಭಾರತೀಯರಿದ್ದ ಹಡಗು ಸೊಮಾಲಿಯಾ ಕರಾವಳಿಯಲ್ಲಿ ಅಪಹರಣ

ಹೈಕಮಾಂಡ್ ಮಟ್ಟದಲ್ಲೂ ಇದು ಚರ್ಚೆಗೊಳಗಾಯಿತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೆಚ್ಚುವರಿಯಾದ ತ್ರಾಸ ತೆಗೆದುಕೊಳ್ಳಲು ಇಷ್ಟವಿಲ್ಲದೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯನ್ನು ಅಲ್ಲಿಗೇ ಬಿಟ್ಟು ನಿಗಮ ಮಂಡಳಿಗಳ ನೇಮಕಾತಿಯತ್ತ ಗಮನ ಹರಿಸಿತ್ತು. ಆದರೆ ಅದೂ ಕೂಡ ಕಾರ್ಯಗತವಾಗಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡುತ್ತಿದ್ದ ಬೆನ್ನಲ್ಲೇ ತುಮಕೂರಿನಲ್ಲಿ ಮಾತನಾಡಿದ್ದ ಕೆ.ಎನ್.ರಾಜಣ್ಣ, ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದ ಪರಮೇಶ್ವರ್, ಸತೀಶ್ ಜಾರಕಿಹೊಳಿಯವರು ಮತ್ತೆ ಉಪಮುಖ್ಯಮಂತ್ರಿ ಹುದ್ದೆಯ ಕುರಿತು ಕೆಣಕಿದ್ದರು. ಅಷ್ಟಕ್ಕೇ ಸುಮ್ಮನಾಗದೆ ನಿನ್ನೆ ರಹಸ್ಯ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಲಾ ಒಂದೊಂದು ರೀತಿ ಭಿನ್ನ ಹೇಳಿಕೆ ನೀಡಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ಸಮುದಾಯಗಳು ನೀಡಿರುವ ಪತ್ರಕ್ಕೆ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್‍ರಂತಹ ಸರ್ಕಾರದ ಪ್ರತಿನಿಧಿಗಳು ಸಹಿ ಹಾಕಿದ್ದಾರೆ.

ಸಿದ್ದರಾಮಯ್ಯನವರ ಬಣ ವರದಿಯನ್ನು ಸ್ವೀಕರಿಸಿ ಬಹಿರಂಗಪಡಿಸಲೇಬೇಕು ಎಂಬ ಹಠಕ್ಕೆ ಬಿದ್ದಿದೆ. ಆದರೆ ಕೆಲವು ಸಮುದಾಯಗಳು ವರದಿ ಅವೈಜ್ಞಾನಿಕವಾಗಿದೆ. ಬಿಡುಗಡೆ ಮಾಡಬಾರದು ಎಂಬ ಪಟ್ಟು ಹಿಡಿದಿದ್ದು, ಇದಕ್ಕಾಗಿ ರಾಜಕೀಯ ಬಣ ಕ್ರೂಢೀಕರಣಕ್ಕೆ ಮುಂದಾಗಿವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಂತೆ ನಡೆದುಕೊಳ್ಳಬೇಕು ಎಂಬುದು ಪಕ್ಷದ ಕೆಲವರ ವಾದ. ಕೆಪಿಸಿಸಿ ಅಧ್ಯಕ್ಷರೇ ಇದಕ್ಕೆ ವಿರೋಧ ವ್ಯಕ್ತಪಡಿಸುವುದಾದರೆ ಸಮಾಜದಲ್ಲಿ ತಪ್ಪು ಸಂದೇಶ ಹೋಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಅಡ್ಡಪರಿಣಾಮಗಳಾಗುತ್ತವೆ ಎಂದು ನಿನ್ನೆ ನಡೆದ ಸಭೆಯಲ್ಲಿ ವಿಶ್ಲೇಷಿಸಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ದಲಿತರು, ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲಾ ಸಮುದಾಯಗಳು ಕಾಂಗ್ರೆಸ್ ಕೈ ಹಿಡಿದಿದ್ದರಿಂದಾಗಿಯೇ ಸ್ಪಷ್ಟ ಬಹುಮತ ಬಂದಿದೆ. ಆದರೆ ಅಧಿಕಾರ ಹಂಚಿಕೆ ವಿಷಯ ಬಂದಾಗ ಸಮುದಾಯವನ್ನು ಕಡೆಗಣಿಸಿರುವುದು ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಸಭೆಯಲ್ಲಿ ನಾಯಕರು ತಮ್ಮ ಅಸಮಾಧಾನವನ್ನು ಹೊರಹಾಕಿದರು ಎಂದು ಹೇಳಲಾಗಿದೆ.

ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಅದಾನಿ

ನಿಗಮ ಮಂಡಳಿಗಳಲ್ಲಿ ಆದ್ಯತೆ ನೀಡುವುದಷ್ಟೇ ಅಲ್ಲ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲೇಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ನಾಯಕರು ಚರ್ಚೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಗೆ ನಿಯೋಗ ತೆರಳಿ ಹೈಕಮಾಂಡ್ ನಾಯಕರ ಮುಂದೆ ತಮ್ಮ ಹಕ್ಕು ಪ್ರತಿಪಾದನೆ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ.

ಇದರ ಜೊತೆಯಲ್ಲಿ ಲೋಕಸಭೆ ಚುನಾವಣೆ ತಯಾರಿ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಇನ್ನೂ ಕೆಲವು ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News