Tuesday, April 21, 2026
Homeರಾಜ್ಯಬಿಟ್‌ಕಾಯಿನ್‌ ಹಗರಣ : ಇ.ಡಿ., ಎಸ್‌‍ಐಟಿ ಜಂಟಿ ತನಿಖೆ

ಬಿಟ್‌ಕಾಯಿನ್‌ ಹಗರಣ : ಇ.ಡಿ., ಎಸ್‌‍ಐಟಿ ಜಂಟಿ ತನಿಖೆ

Bitcoin scam: ED, SIT joint investigation

ಬೆಂಗಳೂರು, ಏ.21- ಬಿಟ್‌ಕಾಯಿನ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಎಸ್‌‍ಐಟಿ ಅಧಿಕಾರಿಗಳ ತನಿಖೆ ಎರಡೂ ಒಟ್ಟೊಟ್ಟಿಗೆ ನಡೆಯಲಿವೆೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಎಸ್‌‍ಐಟಿ ತನಿಖೆಗೆ ಆದೇಶಿಸಲಾಗಿತ್ತು. ಅದು ಪ್ರಗತಿಯಲ್ಲಿದೆ. ಈಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅವರಿಗೆ ಮಾಹಿತಿ ಸಿಗಬಹುದು. ಆ ಮಾಹಿತಿ ಹಾಗೂ ಎಸ್‌‍ಐಟಿ ಅಧಿಕಾರಿಗಳ ತನಿಖೆ ಒಟ್ಟಿಗೆ ನಡೆಯಲಿದೆ ಎಂದರು.ಕಾಂಗ್ರೆಸ್‌‍ ಶಾಸಕ ಎನ್‌.ಎ.ಹ್ಯಾರಿಸ್‌‍ ಮತ್ತು ಅವರ ಪುತ್ರರ ಮೇಲೆ ಬಿಟ್‌ಕಾಯಿನ್‌ ಹಗರಣಕ್ಕೆ ಸಂಬಂಧಪಟ್ಟಂತೆ ತನಿಖೆಯಾಗಿದ್ದರೆ, ಯಾರೆಲ್ಲಾ ಭಾಗಿಯಾಗಿದ್ದರು ಹಾಗೂ ಸಂಪರ್ಕದಲ್ಲಿದ್ದರು ಎಂಬ ವಿಚಾರಗಳೂ ತನಿಖೆಯಿಂದ ಹೊರಬರಲಿವೆ ಎಂದರು.

ಈ ಹಿಂದೆ ಬಿಟ್‌ಕಾಯಿನ್‌ ಹಗರಣದಲ್ಲಿ ಪ್ರಭಾವಿ ನಾಯಕರ ಪಾತ್ರವಿದೆ ಎಂದು ಕಾಂಗ್ರೆಸ್‌‍ ಆರೋಪ ಮಾಡಿತ್ತು. ರಾಜಕಾರಣಕ್ಕಾಗಿ ಸಾಕಷ್ಟು ಆರೋಪ ಮಾಡುತ್ತೇವೆ. ಆದರೆ ಅಂತಹ ಟೀಕೆಗಳಿಗೂ ಮತ್ತು ತನಿಖೆಯಲ್ಲಿ ಕಂಡು ಬರುವ ವಿಚಾರಗಳಿಗೂ ವ್ಯತ್ಯಾಸಗಳಿರುತ್ತವೆ. ಆರೋಪಗಳಲ್ಲಿ ಉಲ್ಲೇಖಿಸಿದ ವಿಷಯಗಳು ತನಿಖೆಯಲ್ಲಿ ಕಂಡು ಬಂದರೆ ಆಗ ಸರಿಹೋಗುತ್ತದೆ ಎಂದರು.

ಬಿಜೆಪಿ, ಕಾಂಗ್ರೆಸ್‌‍ ಯಾವುದೇ ನಾಯಕರ ವಿಚಾರಗಳು ತನಿಖೆಯಲ್ಲಿ ಹೊರ ಬರಬೇಕು. ಎಸ್‌‍ಐಟಿ ವಿಚಾರಣೆ ವಿಳಂಬವಾಗಿದೆ ಎಂದು ಹೇಳುತ್ತಿರುವ ಬಿಜೆಪಿಯವರು ಇಡಿ ತನಿಖೆಯಲ್ಲಿ ಏನು ಕಂಡು ಬಂದಿದೆ ಎಂದು ತಿಳಿಸಲಿ ಎಂದರು.ಸಹಜವಾಗಿ ಯಾವುದೇ ದಾಳಿಯಾದಾಗ ರಾಜಕೀಯ ಪ್ರೇರಿತ ಎಂದು ನಾವು ಹೇಳುತ್ತೇವೆ. ಆದರೆ ಅದು ಸತ್ಯಾಂಶ ಆಧರಿತವಾಗಿರಬೇಕು ಎಂದರು.

ಮುಸ್ಲಿಂ ನಾಯಕರನ್ನು ಗುರಿಯಾಗಿಸಿ ಕಾಂಗ್ರೆಸ್‌‍ನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಲ್ಪಸಂಖ್ಯಾತ ನಾಯಕರು ರಾಹುಲ್‌ಗಾಂಧಿ ಅವರಿಗೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಕಾಂಗ್ರೆಸ್‌‍ ಪಕ್ಷದಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದೇವೆ. ರಾಜ್ಯಸಭೆ, ವಿಧಾನಪರಿಷತ್‌ ಸೇರಿದಂತೆ ಹಲವು ಅವಕಾಶಗಳನ್ನು ನೀಡಲಾಗಿದೆ.
ಅಲ್ಪಸಂಖ್ಯಾತ ನಾಯಕರ ಪತ್ರವನ್ನು ರಾಹುಲ್‌ಗಾಂಧಿ ಅವರು ಪರಿಶೀಲನೆ ನಡೆಸಿರುತ್ತಾರೆ. ಅಗತ್ಯ ಸಲಹೆ ಸೂಚನೆ ನೀಡುತ್ತಾರೆ. ಇದು ಕಾಂಗ್ರೆಸ್‌‍ ಒಳಗಿನ ಆಂತರಿಕ ವಿಚಾರ. ನಾವು ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿಲ್ಲ ಎಂಬ ಅಸಮಾಧಾನಗಳಿವೆ. ಹಾಲಿ ಶಾಸಕರು ಮೃತಪಟ್ಟಾಗ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡುವುದು ಸಹಜವಾದ ಬೆಳವಣಿಗೆ. ಅದರಂತೆ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್‌ ಮಲ್ಲಿಕಾರ್ಜುನ್‌ಗೆ ಟಿಕೆಟ್‌ ನೀಡಲಾಗಿದೆ. ಯಾವುದೇ ಅಸಮಾಧಾನಗಳಿದ್ದರೂ ಅದನ್ನು ವರಿಷ್ಠರು ಗಮನಿಸುತ್ತಾರೆ ಮತ್ತು ಬಗೆಹರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಸಿಆರ್‌ಇ ಇನ್‌ಸ್ಪೆಕ್ಟರ್‌ಗೆ ಮೇಲಾಧಿಕಾರಿಗಳ ಕಿರುಕುಳ ಆರೋಪ ಮತ್ತು ಮಂಗಳೂರು ನಗರ ಪೊಲೀಸ್‌‍ ಕಮಿಷನರ್‌ ವಿರುದ್ಧ ಡಿಜಿಪಿಗೆ ಎಸ್ಪಿ ಪತ್ರ ಬರೆದಿರುವ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದೇ. ಮಾಧ್ಯಮಗಳಲ್ಲಿ ವರದಿ ಅಗಿರುವುದನ್ನು ಗಮನಿಸಿದ್ದೇನೆ. ಡಿಸಿಆರ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌‍ ಎಂಬುವರು ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಎಸ್ಪಿ ಕಾಶಿನಾಥ್‌ ಪತ್ರ ಬರೆದಿದ್ದಾರೆ.

ಈ ಎರಡು ಪ್ರಕರಣಗಳ ಕುರಿತು ಡಿಜಿಪಿಯವರನ್ನು ವರದಿ ಕೇಳಿದ್ದೇನೆ. ವರದಿ ಬಳಿಕ ಸತ್ಯಾಸತ್ಯತೆಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

RELATED ARTICLES

Latest News