ಬೆಂಗಳ0ೂರು,ಮೇ 20- ದೆಹಲಿಯಿಂದ ನಗರಕ್ಕೆ ಮಾದಕ ವಸ್ತುವನ್ನು ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ಬಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಎಂಟು ಮಂದಿಯನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿ 35 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಪಡಿಸಿ ಕೊಂಡಿದ್ದಾರೆ.
ಬಂಧಿತರ ಪೈಕಿ ಮೂವರು ವಿದೇಶಿಗರು, ಮೂವರು ಹೊರರಾಜ್ಯದವರು ಹಾಗೂ ರಾಜ್ಯದ ಇನ್ನಿಬ್ಬರು ಸೇರಿದ್ದಾರೆ.ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ನಂತರ ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಗಳಾದ ಸೆನೆಗಲೀಸ್‌ನ ಡ್ಯಾನ್ಫಾಗೆರಾಲ್‌್ಡ ಅಲಿಯಾಸ್ ಡೇವಿಡ್, ಟಾಂಜೇನಿಯಾದ ಮ್ಯಾಗ್ರೆತ್ ಲಿಜಿನಿಕೋ ಚಾಲೆ ಮತ್ತು ಆರೋಗ್ಯ ಚಿಕಿತ್ಸೆ ವೀಸಾದಡಿ ಬಂದಿದ್ದ ಒಬಿಯಾನುಜು ರೀಟಾ ಒಕೆಕೆ ಅಲಿಯಾಸ್ ಸಾನಿಯಾ ಹಾಗೂ ದೆಹಲಿಯ ರೀನಾ, ದೆಬಾಶಿಶ್ ಅಲಿಯಾಸ್ ದೇಬು, ಧೀರಜ್ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮೊಹಮದ್ ಮನ್ಸೂರು, ಬಂಟ್ವಾಳದ ಅಬ್ದುಲ್ ಸಾಮೇದ್ ಬಂಧಿತರು.
ಆನಂದನಗರದ ಉನ್ನತಿಲೇಔಟ್ ಮುಖ್ಯರಸ್ತೆಯ ಅಪಾರ್ಟ್‌ಮೆಂಟ್‌ವೊಂದರ ಮುಂಭಾಗ ಕಾರಿನಲ್ಲಿ ಮಹಿಳೆ ಸೇರಿದಂತೆ ಮೂವರು ಕುಳಿತು ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಈ ಆಧಾರದ ಮೇಲೆ ಸ್ಥಳಕ್ಕೆ ದಾವಿಸಿದ ಪೊಲೀಸರು ಮಹಿಳೆ ಹಾಗೂ ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದೆಹಲಿಯ ಅಪರಿಚಿತ ವ್ಯಕ್ತಿಯಿಂದ ಮಾದಕ ವಸ್ತು ಎಂಡಿಎಂಎ ಖರೀದಿಸಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ಹೇಳಿದ್ದಾರೆ.
ಆರೋಪಿಗಳಿಂದ 4ಕೆಜಿ ಎಂಡಿಎಂಎ, ಕೃತ್ಯಕ್ಕೆ ಬಳಸಿದ ಕಾರು, 4 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಮೂವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ನಗರದ ದೊಡ್ಡಕನ್ನಹಳ್ಳಿಯ ಚೂಡಸಂದ್ರದಲ್ಲಿರುವ ಆರೋಪಿಯೊಬ್ಬನ ವಾಸದ ಮನೆಯಲ್ಲಿ ಮಾದಕ ವಸ್ತು ಇಟ್ಟಿರುವುದಾಗಿ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ 10 ಕೆಜಿ 120 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು, ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ವಿದೇಶದ ವ್ಯಕ್ತಿ ಹಾಗೂ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಹಾಗೂ ದೆಹಲಿ ಮೂಲದ ವ್ಯಕ್ತಿಯೊಬ್ಬನನ್ನು ಹರಿಯಾಣ ಹಾಗೂ ದೆಹಲಿಯಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಆ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿಯೂ ಭಾಗಿಯಾಗಿರುವುದಾಗಿ ತಿಳಿಸಿದ ಮೇರೆಗೆ ತನಿಖೆ ಮುಂದುವರೆಸಿದ ಪೊಲೀಸರು ಹೆಣ್ಣೂರಿನ ಆಸ್ಪತ್ರೆಯೊಂದರ ಬಳಿ ಮತ್ತೊಬ್ಬನನ್ನು ಬಂಧಿಸಿ ಆತನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 3ಕೆಜಿ 200 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ 8 ಮಂದಿ ಆರೋಪಿಗಳಿಂದ 35 ಕೋಟಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಭೈರ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
