Homeರಾಷ್ಟ್ರೀಯAI-171 ವಿಮಾನ ದುರಂತ : ಕುರ್ಚಿಯ ಮೇಲಿತ್ತು ಪೈಲಟ್‌ ಮೃತದೇಹ

AI-171 ವಿಮಾನ ದುರಂತ : ಕುರ್ಚಿಯ ಮೇಲಿತ್ತು ಪೈಲಟ್‌ ಮೃತದೇಹ

AI-171 Plane Crash: Pilot's body found on chair

ಅಹಮದಾಬಾದ್‌,ಮೇ.20- ಕಳೆದ ವರ್ಷದ ಜೂನ್‌ನಲ್ಲಿ ಸಂಭವಿಸಿದ್ದ ಎಐ-171 ವಿಮಾನ ದುರಂತದಲ್ಲಿ ತಮ್ಮ ಕುಟುಂಬದ ಮೂವರನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು, ವಿಮಾನದ ಮುಖ್ಯ ಪೈಲಟ್‌ ಕ್ಯಾಪ್ಟನ್‌ ಸುಮೀತ್‌ ಸಭರ್‌ವಾಲ್‌‍ ಅವರ ಮೃತದೇಹವನ್ನು ಅಹಮದಾಬಾದ್‌ ಶವಾಗಾರದಲ್ಲಿ ನೋಡಿದ್ದಾಗಿ ಹಾಗೂ ಅದು ಕುಳಿತ ಸ್ಥಿತಿಯಲ್ಲಿ ಕೈಗಳು ಇನ್ನೂ ವಿಮಾನದ ನಿಯಂತ್ರಣ ಸಾಧನವನ್ನು ಹಿಡಿದಂತಿದ್ದವು ಎಂದು ಹೇಳಿಕೆ ನೀಡಿದ್ದಾರೆ.

ಗುಜರಾತ್‌ನ ಖೇಡಾ ಜಿಲ್ಲೆಯ ನಿವಾಸಿ ರೋಮಿನ್‌ ವೋಹ್ರಾ ಅವರ ಈ ಹೇಳಿಕೆ, ವಿಮಾನ ದುರಂತಕ್ಕೆ ಕಾರಣವಾದ ಸಂದರ್ಭಗಳು ಮತ್ತು ಅಂತಿಮ ಕ್ಷಣಗಳಲ್ಲಿ ಕಾಕ್‌ಪಿಟ್‌ನಲ್ಲಿ ಏನು ನಡೆದಿತ್ತು ಎಂಬುದರ ಕುರಿತು ಚರ್ಚೆಗಳು ಮುಂದುವರಿದಿರುವ ವೇಳೆಯಲ್ಲೇ ಹೊರಬಂದಿದೆ.
ಈ ಹೇಳಿಕೆಯನ್ನು ಆಧರಿಸಿ, 100ಕ್ಕೂ ಹೆಚ್ಚು ಮೃತರ ಕುಟುಂಬಗಳನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಂಡಿರುವ ಅಮೆರಿಕ ಮೂಲದ ಕಾನೂನು ಸಂಸ್ಥೆಯೊಬ್ಬ ಅಧಿಕಾರಿ, ಈ ದುರಂತದ ಬಗ್ಗೆ ಯಾವುದೇ ಒಬ್ಬ ವ್ಯಕ್ತಿಯನ್ನು ಹೊಣೆಗಾರನನ್ನಾಗಿ ಮಾಡುವ ಮೊದಲು ನಿಜವಾದ ಸ್ವತಂತ್ರ ತಜ್ಞರಿಂದತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ಎಐ-171 ವಿಮಾನವು ಕಳೆದ ವರ್ಷದ ಜೂನ್‌ 12ರಂದು ಅಹಮದಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದ ಹಾಸ್ಟೆಲ್‌ ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಮತ್ತು ನೆಲದಲ್ಲಿದ್ದ 19 ಮಂದಿ ಮೃತಪಟ್ಟಿದ್ದರು. ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದರು.

ರೋಮಿನ್‌ ವೋಹ್ರಾ ಅವರು ತಮ ಸಹೋದರ, ಸಹೋದರಿಯ ಮಗಳು ಮತ್ತು ಅತ್ತೆಯನ್ನು ಈ ದುರಂತದಲ್ಲಿ ಕಳೆದುಕೊಂಡಿದ್ದರು. ಕುಟುಂಬ ಸದಸ್ಯರ ಗುರುತು ಪತ್ತೆ ಮಾಡಲು ಜೂನ್‌ 13ರಂದು ಅಹಮದಾಬಾದ್‌ ಸಿವಿಲ್‌ ಆಸ್ಪತ್ರೆಯ ಶವಾಗಾರಕ್ಕೆ ತೆರಳಿದ್ದಾಗ ಪೈಲಟ್‌ನ ಮೃತದೇಹವನ್ನು ಕಂಡಿದ್ದಾಗಿ ಅವರು ತಿಳಿಸಿದ್ದಾರೆ.

ನಾನು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದ ಹಾಗೂ ಕೆಲವು ಪರಿಚಯಗಳಿದ್ದ ಕಾರಣ ಶವಾಗಾರಕ್ಕೆ ಒಳಹೋಗಲು ಅನುಮತಿ ದೊರಕಿತ್ತುಎಂದು ಅವರು ಹೇಳಿದ್ದಾರೆ.
ಅವರ ಪ್ರಕಾರ, ಕ್ಯಾಪ್ಟನ್‌ ಸಭರ್‌ವಾಲ್‌‍ ಅವರ ಮೃತದೇಹವನ್ನು ಪ್ರತ್ಯೇಕವಾಗಿ ಒಂದು ಮೇಜಿನ ಮೇಲೆ ಇಡಲಾಗಿತ್ತು.

ಮೃತದೇಹವು ಕುಳಿತಿರುವ ಸ್ಥಿತಿಯಲ್ಲೇ ಗಟ್ಟಿಯಾಗಿತ್ತು. ಅವರು ಇನ್ನೂ ತಮ್ಮ ಆಸನದಲ್ಲೇ ಕುಳಿತಿರುವಂತೆ ಕಾಣುತ್ತಿತ್ತು. ಕೈಗಳು ನಿಯಂತ್ರಣ ಸಾಧನವನ್ನು ಹಿಡಿದಿದ್ದವು ಹಾಗೂ ಕಾಲುಗಳು ಕುಳಿತಿರುವ ವ್ಯಕ್ತಿಯಂತೆ ಮಡಚಿಕೊಂಡಿದ್ದವು ಎಂದು ಅವರು ಹೇಳಿದ್ದಾರೆ.ಆದರೆ ಈ ಹೇಳಿಕೆಗಳು ವೈಯಕ್ತಿಕ ಸಾಕ್ಷ್ಯಾಧಾರಗಳಾಗಿದ್ದು, ಅಧಿಕೃತ ತನಿಖಾ ವರದಿಯಿಂದ ದೃಢೀಕರಿಸಲ್ಪಟ್ಟಿಲ್ಲ.

ಈ ನಡುವೆ, ಅಮೆರಿಕ ಮೂಲದ ಚಿಯೊನುಮಾ ಲಾ ಸಂಸ್ಥೆ, ಕೊನೆಯ ಕ್ಷಣದವರೆಗೂ ನಿಯಂತ್ರಣ ಸಾಧನ ಹಿಡಿದಿದ್ದ ಪೈಲಟ್‌ ಬಗ್ಗೆ ಊಹಾಪೋಹಗಳ ಆಧಾರದಲ್ಲಿ ತೀರ್ಪು ನೀಡಬಾರದು ಎಂದು ಹೇಳಿದೆ.

ಕಳೆದ ವರ್ಷದ ಜುಲೈನಲ್ಲಿ ಬಿಡುಗಡೆಗೊಂಡ ಪ್ರಾಥಮಿಕ ತನಿಖಾ ವರದಿಯಲ್ಲಿ, ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ ಇಂಧನ ನಿಯಂತ್ರಣ ಸ್ವಿಚ್‌ಗಳು ಸ್ಥಗಿತಗೊಂಡಿದ್ದವು ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ತಿಳಿಸಿತ್ತು. ಕಾಕ್‌ಪಿಟ್‌‍ ಧ್ವನಿ ದಾಖಲೆ ಪ್ರಕಾರ, ಒಬ್ಬ ಪೈಲಟ್‌ ಇನ್ನೊಬ್ಬರನ್ನು ಸ್ವಿಚ್‌ ಏಕೆ ಸ್ಥಗಿತಗೊಳಿಸಿದೆ? ಎಂದು ಪ್ರಶ್ನಿಸಿದ್ದು, ಮತ್ತೊಬ್ಬ ಪೈಲಟ್‌ ನಾನು ಹಾಗೆ ಮಾಡಿಲ್ಲ ಎಂದು ಉತ್ತರಿಸಿರುವುದಾಗಿ ವರದಿ ತಿಳಿಸಿತ್ತು.

RELATED ARTICLES

Latest News