ಬೆಂಗಳೂರು, ಮೇ. 20 ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿ ಸುಮಾರು 8 ತಿಂಗಳು ಕಳೆದಿದ್ದರೂ, ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇದುವರೆಗೆ ಕೇವಲ ಒಂದೇ ಒಂದು ಸಭೆ ಮಾಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಜಿಬಿಎ ರಚನೆಯ ನಂತರ ಮೊದಲ ಬಾರಿಗೆ ಕಳೆದ ಸೆ.10ರಂದು ಜಿಬಿಎ ಕೇಂದ್ರ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿತ್ತು. ಆದರೆ ಅದರ ನಂತರದಿಂದ ಇಂದಿನವರೆಗೆ ಮತ್ತೊಂದು ಸಭೆ ನಡೆದಿಲ್ಲ. ಸುಮಾರು ಏಳು ತಿಂಗಳು ಕಳೆದರೂ ಸಭೆ ಕರೆದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ನಡುವೆ ಸಭೆ ನಡೆಸುವಂತೆ ಜಿಬಿಎ ಅಧಿಕಾರಿಗಳು ಎರಡು ಬಾರಿ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರೂ, ಸಭೆಗೆ ಸಮಯ ನಿಗದಿಯಾಗಿಲ್ಲ ಎನ್ನಲಾಗಿದೆ.ಜಿಬಿಎ ಕಾಯ್ದೆ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಬೇಕು.
ಸಭೆಯಲ್ಲಿ ಬೆಂಗಳೂರಿನ ಎಲ್ಲಾ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿ ನಗರಾಭಿವೃದ್ಧಿ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕಿದೆ.
ನಗರದ ಸಮಗ್ರ ಅಭಿವೃದ್ಧಿ ಯೋಜನೆಗಳು, ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳ ಕಾರ್ಯವೈಖರಿ, ಮೂಲಭೂತ ಸೌಕರ್ಯಗಳ ಸ್ಥಿತಿ, ಸಂಚಾರ, ಮಳೆ ಹಾನಿ, ರಸ್ತೆ, ನೀರು ಹಾಗೂ ತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೆ ಮತ್ತು ಸಮನ್ವಯ ಸಭೆಯಲ್ಲಿ ನಡೆಯಬೇಕಾಗಿತ್ತು. ಆದರೆ ಸಭೆ ನಡೆಯದೇ ಇರುವುದರಿಂದ ಆಡಳಿತಾತ್ಮಕ ನಿರ್ಲಕ್ಷ್ಯದ ಆರೋಪಗಳು ಕೇಳಿಬರುತ್ತಿವೆ.
ಜಿಬಿಎ ಪ್ರಾಧಿಕಾರ ರಚನೆ ಕೇವಲ ಹೆಸರಿಗೆ ಮಾತ್ರವೇನಾ? ಐದು ನಗರಪಾಲಿಕೆಗಳನ್ನು ರಚಿಸಿ ಸರ್ಕಾರ ಕೈಕಟ್ಟಿ ಕುಳಿತಿದೆಯಾ? ಎಂದು ವಿಪಕ್ಷಗಳು ಪ್ರಶ್ನೆ ಎತ್ತಿವೆ.ಸಭೆ ನಡೆಯದಿರುವುದಕ್ಕೆ ಮುಖ್ಯಮಂತ್ರಿ ಮಟ್ಟದಲ್ಲಿ ಇಚ್ಛಾಶಕ್ತಿ ಕೊರತೆಯೇ ಕಾರಣವೇ ಅಥವಾ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ ಎಂಬ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ನಗರದ ವೇಗವಾಗಿ ಬೆಳೆಯುತ್ತಿರುವ ಸಮಸ್ಯೆಗಳ ನಡುವೆ ಜಿಬಿಎಂತಹ ಮಹತ್ವದ ಪ್ರಾಧಿಕಾರದ ಸಭೆಗಳೇ ನಡೆಯದಿರುವುದು ಸರ್ಕಾರದ ಆಡಳಿತ ವೈಖರಿಯ ಮೇಲೆಯೇ ಅನುಮಾನ ಹುಟ್ಟಿಸುತ್ತಿದೆ ಎಂದು ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
