Homeಬೆಂಗಳೂರುಬೆಂಗಳೂರಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ 42 ಕಲ್ಯಾಣಿಗಳ ನಿರ್ಮಾಣ

ಬೆಂಗಳೂರಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ 42 ಕಲ್ಯಾಣಿಗಳ ನಿರ್ಮಾಣ

ಬೆಂಗಳೂರು, ಸೆ.13 – ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ವ್ಯಾಪಕ ಸಿದ್ಧತೆ ಕೈಗೊಳ್ಳಲಾಗಿದೆ.

ಪರಿಸರ ಸ್ನೇಹಿ ಹಾಗೂ ಸುಗಮ ವಿಸರ್ಜನೆಗೆ ಒಟ್ಟು 42 ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳು ಹಾಗೂ 659 ಮೊಬೈಲ್‌ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅಗತ್ಯ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 122 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲಸೌಕರ್ಯ ಮತ್ತು ಆಡಳಿತಾತ್ಮಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ವಿಸರ್ಜನಾ ಸ್ಥಳಗಳಲ್ಲಿ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುವ ಜೊತೆಗೆ ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ನೀಡಲು ನೋಡಲ್‌ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ.

ಐದು ನಗರ ಪಾಲಿಕೆಯಲ್ಲಿ ಮೊಬೈಲ್‌ ಟ್ಯಾಂಕ್‌ ವ್ಯವಸ್ಥೆ :
ಪಶ್ಚಿಮ ನಗರ ಪಾಲಿಕೆ 161 ಮೊಬೈಲ್‌ ಟ್ಯಾಂಕ್‌. ದಕ್ಷಿಣ ನಗರ ಪಾಲಿಕೆಯಲ್ಲಿ 159, ಕೇಂದ್ರದಲ್ಲಿ 146, ಉತ್ತರದಲ್ಲಿ 113 ಹಾಗೂ ಪೂರ್ವದಲ್ಲಿ 80 ಮೊಬೈಲ್‌ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ.ವಿಸರ್ಜನೆಗಾಗಿ ಕಲ್ಯಾಣಿಗಳ ವ್ಯವಸ್ಥೆಯಲ್ಲೂ ವ್ಯಾಪಕ ಸಿದ್ಧತೆ ನಡೆದಿದೆ.ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗರಿಷ್ಠ 14 ಕಲ್ಯಾಣಿಗಳನ್ನು ಗುರುತಿಸಲಾಗಿದ್ದು, ಉತ್ತರದಲ್ಲಿ 12, ಪಶ್ಚಿಮದಲ್ಲಿ 9, ದಕ್ಷಿಣದಲ್ಲಿ 6 ಹಾಗೂ ಕೇಂದ್ರ ನಗರ ಪಾಲಿಕೆಯಲ್ಲಿ ಒಂದು ಕಲ್ಯಾಣಿ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 42 ವಿಸರ್ಜನಾ ಕಲ್ಯಾಣಿಗಳು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿವೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವ ಪ್ರಕ್ರಿಯೆ ಸುಗಮಗೊಳಿಸಲು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗರಿಷ್ಠ 30 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದಕ್ಷಿಣದಲ್ಲಿ 29, ಕೇಂದ್ರದಲ್ಲಿ 24, ಪಶ್ಚಿಮದಲ್ಲಿ 22 ಹಾಗೂ ಪೂರ್ವ ನಗರ ಪಾಲಿಕೆಯಲ್ಲಿ 17 ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಸಾರ್ವಜನಿಕರು ತಮ್ಮ ಸಮೀಪದ ಗಣೇಶ ವಿಸರ್ಜನಾ ಸ್ಥಳ, ಮೊಬೈಲ್‌ ಟ್ಯಾಂಕ್‌, ಏಕಗವಾಕ್ಷಿ ಕೇಂದ್ರ ಹಾಗೂ ಇತರ ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆಯುವ ವ್ಯವಸ್ಥೆಯನ್ನೂ ಜಿಬಿಎ ಮಾಡಿದೆ. ಇದಕ್ಕಾಗಿ ವಿಶೇಷ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಅಥವಾ ಜಿಬಿಎ ವೆಬ್‌ಸೈಟ್‌ನಲ್ಲಿ ಗಣೇಶ ವಿಸರ್ಜನೆಗೆ ಸಂಬಂಧಿಸಿದ ವಿಶೇಷ ಲಿಂಕ್‌ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

RELATED ARTICLES
spot_img

Latest News