Homeಬೆಂಗಳೂರುಸಿಲಿಕಾನ್‌ ಸಿಟಿಯಲ್ಲಿ ಗಣೇಶ ಹಬ್ಬದ ಖರೀದಿ ಜೋರು

ಸಿಲಿಕಾನ್‌ ಸಿಟಿಯಲ್ಲಿ ಗಣೇಶ ಹಬ್ಬದ ಖರೀದಿ ಜೋರು

ಬೆಂಗಳೂರು, ಸೆ.13- ಸಿಲಿಕಾನ್‌ ಸಿಟಿಯಲ್ಲಿ ಗಣೇಶ ಹಬ್ಬದ ಖರೀದಿ ಜೋರಾಗಿದೆ. ಬೆಳ್ಳಂಬೆಳಗ್ಗೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡುಬಂದಿದ್ದು, ವಿಶೇಷವಾಗಿ ಕೆಆರ್‌ ಮಾರ್ಕೆಟ್‌ನಲ್ಲಿ ಹಬ್ಬದ ಸಾಮಗ್ರಿಗಳ ಖರೀದಿಗೆ ಗ್ರಾಹಕರು ಮಂದಿ ಮುಗಿಬಿದ್ದಿದ್ದಾರೆ.

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮನೆಗಳ ಅಲಂಕಾರ, ಪೂಜೆ ಹಾಗೂ ಗಣೇಶನ ಪ್ರತಿಷ್ಠಾಪನೆಗೆ ಅಗತ್ಯವಿರುವ ಹೂವು, ತೋರಣ, ಮಾವಿನ ಎಲೆ, ಬಾಳೆ ದಿಂಡು ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಖರೀದಿ ಭರದಿಂದ ಸಾಗುತ್ತಿದೆ. ಕೆಆರ್‌ ಮಾರ್ಕೆಟ್‌ನ ಹೂವಿನ ಮಾರುಕಟ್ಟೆಯಲ್ಲಿ ಗ್ರಾಹಕರ ದಂಡು ಹೆಚ್ಚಾಗಿದ್ದು, ವ್ಯಾಪಾರ ವಹಿವಾಟು ಚುರುಕುಗೊಂಡಿದೆ.ಆದರೆ, ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೂವು ಹಾಗೂ ಹಬ್ಬದ ಅಲಂಕಾರಿಕ ಸಾಮಗ್ರಿಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಗಣೇಶನ ಪೂಜೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಸೇವಂತಿ, ಗುಲಾಬಿ, ಮಲ್ಲಿಗೆ, ಕನಕಾಂಬರ ಸೇರಿದಂತೆ ಹಲವು ಹೂವುಗಳ ಬೆಲೆ ಏರಿಕೆಯಾಗಿದೆ.
ಪ್ರಸ್ತುತ ಕೆಆರ್‌ ಮಾರ್ಕೆಟ್‌ನಲ್ಲಿ ಸೇವಂತಿ ಹೂವು ಪ್ರತಿ ಕೆಜಿಗೆ ಸುಮಾರು 350 ರೂಪಾಯಿಗೆ ಮಾರಾಟವಾಗುತ್ತಿದೆ. ಬಟನ್‌ ಗುಲಾಬಿ ಕೂಡ ಕೆಜಿಗೆ 350 ರೂಪಾಯಿಗೆ ತಲುಪಿದೆ. ವಿವಿಧ ಹೂವುಗಳ ಮಿಶ್ರಣವು ಗುಣಮಟ್ಟಕ್ಕೆ ಅನುಗುಣವಾಗಿ ಕೆಜಿಗೆ 300ರಿಂದ 400 ರೂಪಾಯಿವರೆಗೆ ಮಾರಾಟವಾಗುತ್ತಿದೆ.

ಗಣೇಶ ಪೂಜೆ ಮತ್ತು ಮನೆ ಅಲಂಕಾರಕ್ಕೆ ಪ್ರಮುಖವಾಗಿ ಬಳಸುವ ತಾವರೆ ಹೂವು ಜೋಡಿಗೆ 50 ರೂಪಾಯಿ ದರದಲ್ಲಿ ಲಭ್ಯವಿದೆ. ಕನಕಾಂಬರ ಮತ್ತು ಮಲ್ಲಿಗೆ ಹೂವಿನ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಕನಕಾಂಬರದ ಒಂದು ಮೊಳಕ್ಕೆ 50 ರೂಪಾಯಿ ಹಾಗೂ ಕೆಜಿಗೆ ಸುಮಾರು 2,000 ರೂಪಾಯಿ ದರವಿದೆ.

ಮಲ್ಲಿಗೆಯ ಒಂದು ಮೊಳಕ್ಕೆ 50 ರೂಪಾಯಿ ಹಾಗೂ ಕೆಜಿಗೆ ಸುಮಾರು 1,000 ರೂಪಾಯಿ ಬೆಲೆ ಇದೆ.ಹಬ್ಬದ ಅಲಂಕಾರಕ್ಕೆ ಅಗತ್ಯವಾದ ತೋರಣಗಳಿಗೂ ಬೇಡಿಕೆ ಹೆಚ್ಚಾಗಿದೆ. ತುಳಸಿ ತೋರಣ ಒಂದು ಮೊಳಕ್ಕೆ 60 ರೂಪಾಯಿ ದರದಲ್ಲಿದ್ದು, ಮಾವಿನ ಎಲೆ ಒಂದು ಕಟ್ಟಿಗೆ 10ರಿಂದ 30 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಹಬ್ಬದ ದಿನ ಸಮೀಪಿಸುತ್ತಿದ್ದಂತೆ ಹೂವು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ.

RELATED ARTICLES
spot_img

Latest News