ಬೆಂಗಳೂರು,ಮೇ24- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ತಮ ಮೊದಲ ಬೆಂಗಳೂರು ಭೇಟಿ ಸಂದರ್ಭದಲ್ಲಿ ರಾಜ್ಯದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ, ಪಕ್ಷದ ಸಂಘಟನಾತಕ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಈ ನಿರ್ಣಾಯಕ ಸಭೆಯಲ್ಲಿ, ಸಂಘಟನೆಯಲ್ಲಿ ಶಿಸ್ತು ಮತ್ತು ಬದ್ಧತೆ ಅತ್ಯಗತ್ಯತೆಯನು ಪ್ರತಿಪಾದಿಸಿರುವ ಅವರು, ರಾಜ್ಯ ಘಟಕದ ನಾಯಕರಿಗೆ ಪಕ್ಷದ ತಳಮಟ್ಟದ ಬಲವರ್ಧನೆಗೆ ಒತ್ತು ನೀಡಲು ಸೂಚಿಸಿದ್ದಾರೆ.
ಪಕ್ಷದ ಚೌಕಟ್ಟಿನೊಳಗೆ ಪ್ರತಿಯೊಬ್ಬ ಕಾರ್ಯಕರ್ತರೂ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕವಾಗಿ ಪಕ್ಷದ ಘನತೆಗೆ ಧಕ್ಕೆಯಾಗುವ ಯಾವುದೇ ಹೇಳಿಕೆ ಅಥವಾ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಕೇವಲ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವುದರ ಬದಲು, ಪ್ರತಿಯೊಬ್ಬ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನಾತಕ ಚಟುವಟಿಕೆಗಳನ್ನು ವಿಸ್ತರಿಸಲು ನಾಯಕರಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಲಾಗಿದ್ದು, ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಾಯಕರ ನಡುವೆ ಉತ್ತಮ ಸಮನ್ವಯತೆಯನ್ನು ಕಾಪಾಡಿಕೊಂಡು, ಪಕ್ಷದ ಸಿದ್ಧಾಂತಗಳನ್ನು ತಳಮಟ್ಟದವರೆಗೆ ಕೊಂಡೊಯ್ಯಲು ಒತ್ತು ನೀಡಬೇಕು ಎಂದು ಅವರು ಆಶಿಸಿದ್ದಾರೆ.
ಈ ಭೇಟಿಯು ರಾಜ್ಯ ಬಿಜೆಪಿಯಲ್ಲಿ ಹೊಸ ಹುರುಪು ತುಂಬಿದ್ದು, ಮುಂದಿನ ಸಾಂಸ್ಥಿಕ ಚುನಾವಣೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ದೃಷ್ಟಿಯಿಂದ ಈ ಸೂಚನೆಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭೇಟಿಯ ಮಹತ್ವವೇನು?:
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಸಿಕ್ಕ ಜಯದ ಬಳಿಕ, ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವವನ್ನು ಗಟ್ಟಿಗೊಳಿಸುವುದು ಪಕ್ಷದ ಹೈಕಮಾಂಡ್‌ನ ಮುಖ್ಯ ಗುರಿಯಾಗಿದೆ. ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಅಂತಿಮ ರೂಪುರೇಷೆ ಸಿದ್ದಪಡಿಸಿದ್ದಾರೆ.
ನಿತಿನ್ ನಬಿನ್ ಅವರ ಈ ಭೇಟಿಯು ಪಕ್ಷದ ಸಂಘಟನೆಗೆ ಹೊಸ ಹುರುಪು ತುಂಬುವ ನಿರೀಕ್ಷೆಯಿದೆ. ವಿಶೇಷವಾಗಿ ಹಿರಿಯ ನಾಯಕ ಯಡಿಯೂರಪ್ಪ ಅವರೊಂದಿಗಿನ ಅವರ ಉಪಾಹಾರ ಸಭೆಯು, ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರ ನಡುವಿನ ಸಮನ್ವಯದ ಸಂಕೇತವಾಗಿದೆ ಎಂದು ಪಕ್ಷದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.
