ಬೆಂಗಳೂರು,ಮೇ.24-ಹಣ ವರ್ಗಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮಹಿಳೆಯೊಬ್ಬರನ್ನು ಡಿಜಿಟಲ್ ಆರೆಸ್ಟ್ ಮಾಡಿದ್ದ ಸೈಬರ್ ವಂಚಕರ ತಂಡ ಸುಮಾರು 24 ಕೋಟಿ ರೂ. ದೋಚಿರುವ ಅಘಾತಕಾರಿ ಸಂಗತಿ ನಗರದಲ್ಲಿ ನಡೆದಿದೆ. ಇಷ್ಟೊಂದು ದೊಡ್ಡ ಮೊತ್ತದ ಸೈಬರ್ ವಂಚನೆ ಬೆಂಗಳೂರಿನಲ್ಲಿ ನಡೆದಿರುವುದು ಜನರನ್ನು ಹಾಗೂ ಪೊಲೀಸರನ್ನು ಬೆಚ್ಚಿ ಬೀಳಿಸಿದೆ. ಶಿವಾಜಿನಗರದ ನಿವಾಸಿಯಾದ ಲಕ್ಷ್ಮೀ ರಾಮಮೂರ್ತಿ ಎಂಬುವವರು ತಮ ಆಸ್ತಿಗಳನ್ನು ಮಾರಿದ ಹಿನ್ನೆಲೆಯಲ್ಲಿ ಅವರು ಕೋಟ್ಯಾಂತರ ರೂ.ಗಳನ್ನು ಬ್ಯಾಂಕ್‌ನಲ್ಲಿ ಇರಿಸಿದ್ದರು.
ಇದರ ಮಾಹಿತಿ ಅರಿತ ಸೈಬರ್ ವಂಚಕರು ಅವರಿಗೆ ಕಳೆದ ಜನವರಿಯಲ್ಲಿ ದೂರವಾಣಿ ಕರೆ ಮಾಡಿ ನೀವು ಅಕ್ರಮವಾಗಿ ಹಣ ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ ಎಂದು ಇಡಿ ಅಧಿಕಾರಿಗಳ ಹೆಸರಿನಲ್ಲಿ ಬೆದರಿಸಿದ್ದಾರೆ. ನಂತರ ನಿಮನ್ನು ಬಂಧಿಸುತ್ತೇವೆ ಎಂದು ಅವರಲ್ಲಿ ಭಯ ಹುಟ್ಟಿಸಿ ಜನವರಿಯಿಂದ ಮೇ ವರೆಗೆ ಡಿಜಿಟಲ್ ಆರೆಸ್ಟ್ ಮಾಡಿ ಹಂತ ಹಂತವಾಗಿ 24 ಕೋಟಿ ರೂ.ಗಳನ್ನು ಸೈಬರ್ ವಂಚಕರು ದೋಚಿದ್ದಾರೆ. ಇಷ್ಟಕ್ಕೆ ಮುಗಿಯದೇ ಸೈಬರ್ ವಂಚಕರು ಇನ್ನಷ್ಟು ಹಣ ಕೇಳಿದ್ದಾಗ ವೃದ್ಧ ಮಹಿಳೆ ತಮ ಬಳಿಯಿದ್ದ 1.30 ಕೆಜಿ ಚಿನ್ನದ ಒಡವೆಗಳನ್ನು ಕಂಟೋನೆಂಟ್ ಬ್ರಾಂಚ್‌ನ ಐಸಿಐಸಿಐ ಬ್ಯಾಂಕ್‌ಗೆ ತಂದಾಗ ಅನುಮಾನಗೊಂಡ ಮ್ಯಾನೇಜರ್ ಅವರನ್ನು ವಿಚಾರಿಸಿದ್ದಾರೆ. ನಂತರ ಅವರ ಮುಖದಲ್ಲಿದ್ದ ಭೀತಿಯನ್ನು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೋಲೀಸ್ ತಂಡ ಅಲ್ಲಿಗೆ ಬಂದು ವಿಚಾರಿಸಿದ್ದಾಗ ಆತಂಕದಲ್ಲಿದ್ದದ್ದನ್ನು ನೋಡಿ ಅವರನ್ನು ಸಮಾಧಾನ ಪಡಿಸಿ ಅವರ ಬಗ್ಗೆ ವಿಚಾರಿಸಿದ್ದಾಗ ಡಿಜಿಟಲ್ ಆರೆಸ್ಟ್ ಆಗಿರುವ ಬಗ್ಗೆ ಹೇಳಿದ್ದಾಗ ಒಮೆ ಅಧಿಕಾರಿಗಳು ಕೂಡ ದಿಗ್ಭ್ರಮೆಗೊಂಡಿದ್ದಾರೆ. ನಂತರ ಮಹಿಳೆಯ ಮಕ್ಕಳ ಬಗ್ಗೆ ವಿಚಾರಿಸಿದ್ದಾಗ ಅವರು ವಿದೇಶದಲ್ಲಿರುವುದು ಗೊತ್ತಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಸೈಬರ್ ವಂಚಕರಿಗೆ ಬ್ಯಾಂಕ್ ಅಕೌಂಟ್ ಮೂಲಕ ವರ್ಗಾವಣೆ ಮಾಡಿದ್ದ ಮಾಹಿತಿಯನ್ನು ಕಲೆ ಹಾಕಿ ಪರಿಶೀಲಿಸಿದಾಗ ಅಲ್ಲಿ ಕೇವಲ 60 ಲಕ್ಷ ಇರುವುದು ಗೊತ್ತಾಗಿದೆ. ಪ್ರಸ್ತುತ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರ ತಂಡ ಮುಂಬೈ, ಅಲಹಾಬಾದ್, ದೆಹಲಿ ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ.
ಸೈಬರ್ ವಂಚಕರು ತಿಳಿಸಿದ್ದ ಸುಮಾರು 22 ಚಾಲ್ತಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆಯೆಂದು ಗೊತ್ತಾಗಿದೆ. ಪ್ರಸ್ತುತ ಗೌರವ ಕುಮಾರ್, ಓಂ ಪ್ರಕಾಶ್, ರಜಪೂತ್ ಸೇರಿದಂತೆ ಐವರನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹಲವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರು ದೋಚಿರುವ ಕೋಟ್ಯಾಂತರ ರೂಪಾಯಿ ಹಣವನ್ನು ಪತ್ತೆಹಚ್ಚಲು ವ್ಯಾಪಕ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆಯೆಂದು ಹೇಳಿದ್ದಾರೆ.
