ರಾಯಗಢ,ಜು.9-ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾದ ಪ್ರವಾಹದ ಪರಿಣಾಮ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಎಲ್ )ನ ಪಾತಾಳಗಂಗಾ ಎಲ್‌ಪಿಜಿ ಬಾಟಲಿಂಗ್ ಘಟಕದಿಂದ ಸುಮಾರು 3,000 ಅನಿಲ ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ಪಾತಾಳಗಂಗಾ ನದಿಯಲ್ಲಿ ತೇಲುತ್ತಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ನಿರಂತರ ಧಾರಾಕಾರ ಮಳೆಯಿಂದ ಘಟಕದ ರಕ್ಷಣಾ ಗೋಡೆ ಕುಸಿದಿದ್ದು, ಪ್ರವಾಹದ ನೀರು ನೇರವಾಗಿ ಘಟಕದೊಳಗೆ ನುಗ್ಗಿದೆ. ಇದರ ಪರಿಣಾಮ, ಸಂಗ್ರಹಿಸಲಾಗಿದ್ದ ಸಾವಿರಾರು ಎಲ್‌ಪಿಜಿ ಸಿಲಿಂಡರ್‌ಗಳು ನೀರಿನಲ್ಲಿ ಕೊಚ್ಚಿಹೋಗಿ ಪಾತಾಳಗಂಗಾ ನದಿ ಹಾಗೂ ಖಾರಪಾಡಾ ಕ್ರೀಕ್ ಪ್ರದೇಶಗಳಿಗೆ ತೇಲಿ ಹೋಗಿವೆ.
ನದಿಯಲ್ಲಿ ಸಾವಿರಾರು ಸಿಲಿಂಡರ್‌ಗಳು ತೇಲುತ್ತಿರುವ ದೃಶ್ಯವನ್ನು ಸೇತುವೆಯ ಮೇಲಿದ್ದ ಸಾರ್ವಜನಿಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಅಧಿಕಾರಿಗಳು ತಿಳಿಸಿರುವಂತೆ, ನೀರಿನಲ್ಲಿ ಕೊಚ್ಚಿಹೋದ ಕೆಲವು ಸಿಲಿಂಡರ್‌ಗಳಲ್ಲಿ ಅನಿಲ ತುಂಬಿರುವ ಸಾಧ್ಯತೆಯೂ ಇದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ನದಿಯಲ್ಲಿ ಅಥವಾ ಅದರ ತೀರದಲ್ಲಿ ತೇಲಿ ಬಂದ ಸಿಲಿಂಡರ್‌ಗಳು ಕಂಡುಬಂದರೆ ಅವುಗಳನ್ನು ಸ್ವತಃ ಬಳಸಲು ಅಥವಾ ಸ್ಥಳಾಂತರಿಸಲು ಯತ್ನಿಸದೆ, ತಕ್ಷಣವೇ ಸಂಬಂಧಿತ ಅಧಿಕಾರಿಗಳು ಅಥವಾ ಎಚ್‌ಪಿಸಿಎಲ್‌ಗೆ ಮಾಹಿತಿ ನೀಡಿ ಹಸ್ತಾಂತರಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
