ಬೆಂಗಳೂರು,ಮೇ.25- ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ಎಚ್ಚೆತ್ತುಕೊಂಡಿರುವ ಪ್ರಮುಖ ಮೂರು ರಾಜಕೀಯ ಪಕ್ಷಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಂಚ ಪಾಲಿಕೆಗಳ ಚುನಾವಣೆಗೆ ಸದ್ದಿಲ್ಲದೆ ತಯಾರಿ ಆರಂಭಿಸಿವೆ.
ಸುಪ್ರೀಂ ಆದೇಶದಂತೆ ಆ.31 ರೊಳಗೆ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸಲೇ ಬೇಕಿದೆ. ಈ ಕುರಿತಂತೆ ಯಾವುದೇ ಮೇಲನವಿ ಸಲ್ಲಿಸಬಾರದು ಎಂದು ನ್ಯಾಯಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವುದರಿಂದ ಆಡಳಿತಾರಾಢ ಕಾಂಗ್ರೆಸ್ ಪಕ್ಷ ಚುನಾವಣೆಗೆ ತಯಾರಾಗುವಂತೆ ತಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸೂಚನೆ ನೀಡಿದೆ.
ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ ಪಕ್ಷದ ಮುಖಂಡರುಗಳಿಗೆ ಇನ್ನು ನಮಗೆ ಯಾವುದೇ ಪರ್ಯಾಯ ಮಾರ್ಗವಿಲ್ಲ. ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸಲೇಬೇಕಿದೆ. ಹೀಗಾಗಿ ಈ ಕೂಡಲೆ ಚುನಾವಣಾ ಸಿದ್ದತೆ ಮಾಡಿಕೊಳ್ಳುವಂತೆ ಆದೇಶಿಸಿದ್ದಾರೆ.
ಮಾತ್ರವಲ್ಲ, ಇಂದು ಅಥವಾ ನಾಳೆ ಒಳಗೆ ಚುನಾವಣಾ ಸಿದ್ದತೆಗಾಗಿ ಆಯಾ ಕ್ಷೇತ್ರಗಳ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲು ತೀರ್ಮಾನಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ಈ ಸಂಜೆಗೆ ತಿಳಿಸಿವೆ.
ಬಿಜೆಪಿ ಕೂಡ ಸಿದ್ದತೆ; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಮುಂದೆ ನಮ ಸರ್ಕಾರ ಬರುತ್ತದೆ ಎಂಬ ಭ್ರಮೆಯಲ್ಲಿ ಇರಬೇಡಿ ಕೂಡಲೇ ಚುನಾವಣಾ ಸಿದ್ದತೆ ಮಾಡಿಕೊಳ್ಳಿ ರಾಜ್ಯ ಚುನಾವಣೆಗೂ ಮುನ್ನ ಆ.31 ರೊಳಗೆ ನಡೆಯಲಿರುವ ಜಿಬಿಎ ಚುನಾವಣೆಯಲ್ಲಿ ತಮ ಪಕ್ಷದ ತಾಕತ್ತು ತೋರಿಸುವಂತೆ ಸೂಚನೆ ನೀಡಿರುವುದರಿಂದ ಕೇಸರಿ ಪಾಳಯ ಕೂಡ ಪಂಚ ಪಾಲಿಕೆಗಳ ಚುನಾವಣೆಗೆ ಸಿದ್ದತೆ ನಡೆಸಿದೆ.
ಐದು ಪಾಲಿಕೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸುವಂತೆ ನೋಡಿಕೊಳ್ಳಿ ಎಂದು ನಬಿನ್ ಸೂಚನೆ ನೀಡಿರುವುದರಿಂದ ಗೆಲ್ಲಬಹುದಾದ ಆರ್ಹ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ನಗರದ ನಾಗರೀಕರು ಯಾವುದೇ ಗ್ಯಾರಂಟಿಗಳಿಗೆ ಮಣೆ ಹಾಕುವುದಿಲ್ಲ. ಅವರಿಗೆ ಬೇಕಾಗಿರುವುದು ದಕ್ಷ ಆಡಳಿತ ಹೀಗಾಗಿ ಐದು ಪಾಲಿಕೆಗಳಲ್ಲೂ ಬಿಜೆಪಿ ಪಕ್ಷ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂಬ ಆಂತರಿಕ ಸಮೀಕ್ಷೆ ಆಧಾರದ ಮೇಲೆ ಆ ಪಕ್ಷದ ಮುಖಂಡರು ಪಾಲಿಕೆ ಚುನಾವಣೆಗಳ ಗೆಲುವಿಗಾಗಿ ತಂತ್ರ ಎಣೆಯುತ್ತಿದ್ದಾರೆ.
ಜೆಡಿಎಸ್ ಮುಂದು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ ಮತ್ತು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಜೆಡಿಎಸ್ ಪಕ್ಷ ಈಗಾಗಲೇ ಕೋರ್ ಕಮಿಟಿ ಸಭೆಯಲ್ಲಿ ಪಂಚ ಪಾಲಿಕೆಗಳನ್ನು ಗೆಲ್ಲುವ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದೆ.
ಪಂಚ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಒಂದು ವೇಳೆ ಮೈತ್ರಿಯಾದರೆ ತಮಗೆ ಸಿಗುವ ಸ್ಥಾನಗಳಲ್ಲಿ ಗೆಲ್ಲುವುದು ಹೇಗೆ ಎಂಬ ಬಗ್ಗೆ ಚಿಂತನ ಮಂಥನ ನಡೆಸಿದೆ. ಒಂದು ವೇಳೆ ಮೈತ್ರಿ ವಿಫಲವಾದರೆ ಐದು ಪಾಲಿಕೆಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ.
ಜುಲೈನಲ್ಲಿ ಚುನಾವಣೆ ಸಾಧ್ಯತೆ: ಆ. 31 ರೊಳಗೆ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿರುವ ರಾಜ್ಯ ಚುನಾವಣಾ ಆಯೋಗ ಈಗಾಗಲೇ ಎಲ್ಲ ಸಿದ್ದತೆ ಮಾಡಿಕೊಂಡಿರುವುದರಿಂದ ಜುಲೈ ತಿಂಗಳಿನಲ್ಲೇ ಚುನಾವಣೆ ನಡೆಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಹೀಗಾಗಿ ಆ.31ರೊಳಗೆ ಜಿಬಿಎ ಚುನಾವಣೆ ನಡೆಯುವುದು ಬಹುತೇಕ ಖಚಿತ ಎಂದು ಮೂರು ಪಕ್ಷಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಎರಡು ಪಾಲಿಕೆಗಳ ರಚನೆ ಸಾಧ್ಯವೇ; ಆ.31 ರೊಳಗೆ ಪಂಚ ಪಾಲಿಕೆಗಳಿಗೆ ಚುನಾವಣೆ ನಡೆಸುವ ಮುನ್ನವೇ ಅಧಿವೇಶನದಲ್ಲಿ ಪಂಚ ಪಾಲಿಕೆಗಳನ್ನು ರದ್ದುಗೊಳಿಸಿ ಕೇವಲ ಎರಡು ಇಲ್ಲವೇ ಮೂರು ಪಾಲಿಕೆ ರಚನೆ ಮಾಡಲು ಅನುಮೋದನೆ ಪಡೆದು ಸುಗ್ರಿವಾಜ್ಞೆ ಹೊರಡಿಸಲು ಸರ್ಕಾರ ಚಿಂತನೆ ನಡೆಸಿತ್ತು ಎಂದು ತಿಳಿದುಬಂದಿದೆ.
ಒಂದು ವೇಳೆ ಅಧಿವೇಶನದಲ್ಲಿ ಎರಡು ಇಲ್ಲವೇ ಮೂರು ಪಾಲಿಕೆಗಳ ರಚನೆಗೆ ಸುಗ್ರಿವಾಜ್ಞೆ ರಚಿಸಿದರೂ ಅದಕ್ಕೆ ರಾಜ್ಯಪಾಲರ ಅಂಕಿತ ಬೀಳುವುದು ಕಷ್ಟ ಸಾಧ್ಯವಿರುವುದರಿಂದ ಅಂತಹ ಪ್ರಯತ್ನಕ್ಕೆ ಕೈ ಹಾಕದಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.
