Homeರಾಜ್ಯಪೆಟ್ರೋಲ್‌-ಡಿಸೇಲ್‌ ಬೆಲೆ ನಿರಂತರ ಏರಿಕೆ : ಕೇಂದ್ರ ಸರ್ಕಾರದ ವಿರುದ್ಧ ಸಿಎಂ-ಡಿಸಿಎಂ ವಾಗ್ದಾಳಿ

ಪೆಟ್ರೋಲ್‌-ಡಿಸೇಲ್‌ ಬೆಲೆ ನಿರಂತರ ಏರಿಕೆ : ಕೇಂದ್ರ ಸರ್ಕಾರದ ವಿರುದ್ಧ ಸಿಎಂ-ಡಿಸಿಎಂ ವಾಗ್ದಾಳಿ

Continuous increase in petrol-diesel prices: CM-DCM attack on central government

ಬೆಂಗಳೂರು, ಮೇ 25- ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೇ ಈ ತಿಂಗಳ ಅಂತ್ಯದಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮೋದಿ ಅವರು ಅಧಿಕಾರಕ್ಕೆ ಬಂದರೆ ಅಚ್ಛೇದಿನ್‌
ಬರುತ್ತದೆ ಎಂದು ಹೇಳಿ ದೇಶದ ಜನರಿಗೆ ಟೋಪಿ ಹಾಕುವ ಕೆಲಸ ಮಾಡಲಾಗಿದೆ. ಗುಜರಾತ್‌ ಮಾದರಿಯಲ್ಲಿ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿ ಈಗ ಕಷ್ಟದ ದಿನಗಳನ್ನು ತಂದಿಟ್ಟಿದ್ದಾರೆ ಎಂದು ಕಿಡಿ ಕಾರಿದರು.

ಯುಪಿಎ ಸರ್ಕಾರದಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಳವಾದಾಗ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ ಮಾತುಗಳನ್ನು ಸರಿಸಿಕೊಳ್ಳಬೇಕಿದೆ. ಈಗ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು 4 ಬಾರಿ ಹೆಚ್ಚಿಸಿದ್ದಾರೆ ಎಂದು ಹೇಳಿದರು.2014 ಮತ್ತು 2026ರ ನಡುವೆ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಮತ್ತು ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌‍ ಬೆಲೆ ಏರಿಳಿತಗಳ ಅಂಕಿಅಂಶಗಳನ್ನು ನೀಡಿದರು.

ತೈಲ ಬೆಲೆ ಈ ಮಟ್ಟಿಗೆ ಹೆಚ್ಚಳವಾಗಲು ಯಾರು ಕಾರಣ? ಅಡುಗೆ ಅನಿಲದ ಬೆಲೆ 412 ರೂ.ನಿಂದ 915.50 ರೂ. ಹೆಚ್ಚಾಗಿದೆ. ಅಂದರೆ ಸುಮಾರು 503 ರೂ. ಏರಿಕೆಗೆ ಹೊಣೆ ಯಾರು? ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ದುಬಾರಿಯಾಗಿದ್ದರೂ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌‍ ಬೆಲೆಯನ್ನು ನಿಯಂತ್ರಣದಲ್ಲಿಡಲಾಗಿತ್ತು. ಈಗ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಪದೇ ಪದೇ ಬೆಲೆ ಹೆಚ್ಚಳ ಮಾಡಿ ಜನರನ್ನು ಲೂಟಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೈಲ ಬೆಲೆ ಹೆಚ್ಚಳದಿಂದ ಹೋಟೆಲ್‌ಗಳ ತಿಂಡಿ, ಊಟದ ಬೆಲೆ ಹೆಚ್ಚಾಗುತ್ತದೆ. ರೈತರು, ಜನಸಾಮಾನ್ಯರು ಕಷ್ಟಕ್ಕೆ ಸಿಲುಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ. ನಾವು ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಒಂದು ವೇಳೆ ಗ್ಯಾರಂಟಿಗಳು ಇಲ್ಲದೇ ಇದ್ದರೆ ಜನರ ಬದುಕು ಏನಾಗುತ್ತಿತ್ತು ಎಂದು ನೆನಸಿಕೊಂಡರೆ ಭಯವಾಗುತ್ತದೆ. ಆದಾಯ ಪಾತಾಳಕ್ಕಿಳಿಯುತ್ತಿದೆ. ಖರ್ಚು ಹೆಚ್ಚಾಗುತ್ತಿದೆ ಎಂದು ಹೇಳಿದರು.

ಆರ್ಧಕರ್ದ ಹೋಟೆಲ್‌ಗಳು ಮುಚ್ಚಿಹೋಗಿವೆ. ದುಬಾರಿ ಸಿಲಿಂಡರ್‌ ಖರೀದಿ ಮಾಡಲಾಗದೇ, ಸೌದೆ ಒಲೆಯನ್ನು ಬಳಸಲಾಗದೇ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಎಲ್ಲರ ಬದುಕಿಗೂ ದೊಡ್ಡ ಶಾಪವಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಪ್ರತಿ ದಿನ ಜನರಿಂದ ಸಾವಿರ ಕೋಟಿ ರೂ.ಗಳನ್ನು ಲೂಟಿ ಮಾಡುತ್ತಿದೆ. ಬೇರೆ ಯಾವ ದೇಶದಲ್ಲೂ ಇಲ್ಲದಷ್ಟು ಬೆಲೆ ಏರಿಕೆ ಮಾಡಿ, ಜನರಿಂದ ಪಿಕ್‌ಪ್ಯಾಕೆಟ್‌ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯ ನಾಯಕರು ಮೊದಲು ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಲಿ ಎಂದು ಹೇಳುತ್ತಾರೆ. ಅವರು ನಿರಂತರವಾಗಿ ಹೆಚ್ಚಿಸುತ್ತಲೇ ಇದ್ದಾರೆ. ಮೊದಲು ಕೇಂದ್ರ ಸರ್ಕಾರದ ಮೇಲೆ ಬಿಜೆಪಿ ನಾಯಕರು ಒತ್ತಡ ಹಾಕಿ ಬೆಲೆ ಕಡಿಮೆ ಮಾಡಿಸಲಿ ಎಂದು ಸವಾಲು ಹಾಕಿದರು.

ಪ್ರಧಾನಿ ಮಂತ್ರಿ ಮೋದಿಯವರು ಅಡುಗೆ ಎಣ್ಣೆ ಕಡಿಮೆ ಮಾಡಿ ಎನ್ನುತ್ತಿದ್ದಾರೆ. ಮದುವೆ ಮಾಡುವವರು ಒಂದು ತಾಳಿ ಖರೀದಿಸುವುದು ಬೇಡ ಎನ್ನುವ ಮೋದಿ ಅವರ ಉಪದೇಶವನ್ನು ಜನ ಸಮಾನ್ಯರೇ ಅರ್ಥೈಸಿಕೊಳ್ಳಬೇಕು. ಬೆಲೆ ಏರಿಕೆಯಿಂದ ಸಿಟ್ಟಿಗೆದ್ದ ಜನ ಮೋದಿ ಸರ್ಕಾರವನ್ನು ಕಿತ್ತೊಗೆಯುತ್ತಾರೆ. ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಬಿಜೆಪಿಯವರು, ಈಗ ಕಡಿಮೆ ಊಟ ಮಾಡಿ ಎಂದು ಸಲಹೆ ನೀಡುವ ಮಟ್ಟಿಗೆ ಬಂದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಜನರಿಗೆ ತೊಂದರೆಯಾಗಲಿ ಎಂಬ ಕಾರಣಕ್ಕಾಗಿಯೇ ಬಿಜೆಪಿಯವರು ಬೆಲೆ ಏರಿಕೆ ಮಾಡುತ್ತಿದ್ದಾರೆ. ಮೋದಿ ಕರೆ ನೀಡಿದಾಗ ಒಂದು ದಿನದ ಮಟ್ಟಿಗೆ ಬಿಜೆಪಿ ನಾಯಕರು ಮೆಟ್ರೋದಲ್ಲಿ ಓಡಾಡಿ ಭಾರೀ ಪ್ರಚಾರ ಪಡೆದುಕೊಂಡರು. ಈಗ ಮತ್ತೆ ಖಾಸಗಿ ವಾಹನಗಳನ್ನೇ ಬಳಸುತ್ತಿದ್ದಾರೆ.

ಬಿಜೆಪಿಯವರು ಧರ್ಮ, ಜಾತಿ ಹೆಸರಿನಲ್ಲಿ ಜನರ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ನಾವು ಹೊಟ್ಟೆಗೆ ಅನ್ನ ನೀಡುವ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುಜೇವಾಲ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ದತ್ತ, ವಿಧಾನ ಪರಿಷತ್‌ ಸದಸ್ಯ ರಮೇಶ್‌ ಬಾಬು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News