ಬೆಂಗಳೂರು, ಮೇ 28- ಹಲವು ದಿನಗಳಿಂದ ಗೊಂದಲಕಾರಿಯಾಗಿದ್ದ ನಾಯಕತ್ವ ಬದಲಾವಣೆಗೆ ಅಧಿಕೃತವಾಗಿ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದಾಗಿ ಘೋಷಿದ್ದಾರೆ. ಜೊತೆಯಲ್ಲೇ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದೂ ಪ್ರಕಟಿಸಿದ್ದಾರೆ.
ಸಚಿವರ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿ, ತಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಉಪಾಹಾರ ಕೂಟ ಮುಗಿಸಿ ಹೊರ ಬಂದ ಸಚಿವರ ಪೈಕಿ ಬಹುತೇಕರು ಮಾಹಿತಿ ನೀಡಿದ್ದು, ಇಂದು ಮಧ್ಯಾಹ್ನ 2.30ಕ್ಕೆ ಸಿದ್ದರಾಮಯ್ಯ ಅವರು ರಾಜ್ಯಪಾಲರ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರಿಗೆ ತಮ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ ಎಂದು ಸ್ಪಷ್ಟ ಪಡಿಸಿದರು.
ಸಚಿವರನ್ನು ಉದ್ದೇಶಿಸಿ ಮಾತನಾಡುವಾಗ ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗ ಮಾಡುವ ಭಾವೋದ್ವೇಗದಲ್ಲಿ ಕಣ್ಣೀರು ಹಾಕಿದ್ದರು ಎಂದು ತಿಳಿದು ಬಂದಿದೆ. ರಾಜೀನಾಮೆ ನೀಡಿದ ನಂತರ ಡಿ.ಕೆ.ಶಿವಕುಮಾರ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಬಳಿಕ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಉಪಾಹಾರ ಕೂಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ದೆಹಲಿಯಲ್ಲಿ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ ವೇಳೆ ರಾಜೀನಾಮೆ ನೀಡುವಂತೆ ಸಲಹೆ ನೀಡಲಾಗಿದೆ. ಅದರಂತೆ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ಲೋಕಭವನಕ್ಕೆ ತೆರಳಿ ತಮ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಘೋಷಿಸಿರುವುದಾಗಿಯೂ ಖಚಿತ ಪಡಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್ ಅವರು ಮಾತನಾಡಿ, ಮುಖ್ಯಮಂತ್ರಿ ಎಲ್ಲಾ ಸಚಿವರಿಗೂ ಧನ್ಯವಾದ ಹೇಳಿದರು. ಅರ್ಥಪೂರ್ಣ ಹಾಗೂ ಅದ್ಭುತವಾಗಿ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ. ಎಲ್ಲರೂ ಮುಂದಿನ ಭವಿಷ್ಯಕ್ಕಾಗಿ ಸಜ್ಜಾಗುವಂತೆ ಕರೆ ನೀಡಿದ್ದಾರೆ ಹಾಗೂ ಪಕ್ಷದ ಜೊತೆಗೆ ತಾವೂ ಎಲ್ಲಾ ರೀತಿಯ ಹೋರಾಟಕ್ಕೆ ಕೈಜೋಡಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಿದ್ದರಾಮಯ್ಯ ಅವರು ಮಧ್ಯಾಹ್ನ ರಾಜ್ಯಪಾಲರ ಕಾರ್ಯದರ್ಶಿಯವರಿಗೆ ರಾಜೀನಾಮೆ ನೀಡಲಿದ್ದಾರೆ. ನಮನ್ನು ಧನ್ಯವಾದ ಹೇಳಲು ಕರೆದಿದ್ದರು ಎಂದು ತಿಳಿಸಿದರು.
ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಅದು ಇನ್ನೂ ತೀರ್ಮಾನವಾಗಿಲ್ಲ ಎಂದರು. ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಘೋಷಿಸಿದ್ದಾರೆ ಎಂಬುದಕ್ಕೆ ನೀವು ಹಾಗೇ ಎಂದುಕೊಳ್ಳಿ ಎಂದು ಹೇಳಿ ತೆರಳಿದರು.
ಇದಕ್ಕೂ ಮುನ್ನ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು. ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅಗ ಎಲ್ಲವೂ ಬಹಿರಂಗವಾಗುತ್ತದೆ ಎಂದರು.
ಸಿದ್ದರಾಮಯ್ಯ ಕಣ್ಣೀರು:
ಸಚಿವರ ಉಪಾಹಾರ ಕೂಟ ಸಭೆಯಲ್ಲಿ ರಾಜೀನಾಮೆ ಪ್ರಕಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಹಂತದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದರು ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರ ಕಣ್ಣೀರು ಕಂಡು ಬಹಳಷ್ಟು ಸಚಿವರು ಗದ್ಗದಿತರಾದರು ಎಂದು ತಿಳಿದು ಬಂದಿದೆ. ಉಪಾಹಾರ ಕೂಟ ಮುಗಿಸಿ ಹೊರ ಬಂದವರ ಪೈಕಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಾಧ್ಯಮಗಳ ಕ್ಯಾಮೆರಾಗಳ ಎದುರು ಮಾತನಾಡಲಾಗದೇ ಬಿಕ್ಕಿಬಿಕ್ಕಿ ಅತ್ತು ಕಣ್ಣೀರು ಸುರಿಸಿದರು.
ಇಂದು ಬೆಳಗ್ಗೆ ಉಪಾಹಾರ ಕೂಟಕ್ಕೂ ಮುನ್ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ, ಅಪ್ಪಿಕೊಳ್ಳುವ ಮೂಲಕ ವಿದಾಯದ ಭಾವೋದ್ವೇಗದ ಸನ್ನಿವೇಶವನ್ನು ಸೃಷ್ಟಿಸಿದರು. ಈ ಫೋಟೋವನ್ನು ಪೋಸ್ಟ್ ಮಾಡಿದ ಕಾಂಗ್ರೆಸ್ ಪಕ್ಷ ಅಂದೂ, ಇಂದು, ಎಂದೆಂದೂ ಒಗ್ಗಟ್ಟೇ ನಮ ಶಕ್ತಿ. ಎಂದೆಂದಿಗೂ ಜನ ಸೇವೆಯೇ ನಮ ಬದ್ಧತೆ ಎಂದು ಹೇಳಿಕೊಂಡಿತ್ತು.ಹಲವು ದಿನಗಳಿಂದ ಗೊಂದಲದ ಗೂಡಾಗಿದ್ದ ನಾಯಕತ್ವ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ.
