Homeರಾಜಕೀಯಸಿದ್ದರಾಮಯ್ಯ ಅವರ ಪರ ಬೆಂಬಲಿಗರು ಧ್ವನಿ ಎತ್ತಲಿಲ್ಲ ಎಂಬುದು ಅಪ್ರಸ್ತುತ : ಸತೀಶ್‌ ಜಾರಕಿಹೊಳಿ

ಸಿದ್ದರಾಮಯ್ಯ ಅವರ ಪರ ಬೆಂಬಲಿಗರು ಧ್ವನಿ ಎತ್ತಲಿಲ್ಲ ಎಂಬುದು ಅಪ್ರಸ್ತುತ : ಸತೀಶ್‌ ಜಾರಕಿಹೊಳಿ

It is irrelevant that Siddaramaiah's supporters did not raise their voices in favor of him

ಬೆಂಗಳೂರು, ಮೇ 29- ದೆಹಲಿಯಲ್ಲಾಗಿದ್ದ ಒಪ್ಪಂದದಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬೆಂಬಲಿಗರು ಸಿದ್ದರಾಮಯ್ಯ ಅವರ ಪರವಾಗಿ ಧ್ವನಿ ಎತ್ತಲಿಲ್ಲ ಎಂಬುದು ಅಪ್ರಸ್ತುತ ಎಂದು ಮಾಜಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ಗಾಂಧಿ ಹೇಳಿದರೆ ರಾಜೀನಾಮೆ ನೀಡುವುದಾಗಿ ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಹೇಳುತ್ತಾ ಬಂದರು. ದೆಹಲಿಯ ಸಭೆಯಲ್ಲಿ ರಾಹುಲ್‌ಗಾಂಧಿ ಸೂಚನೆ ಕೊಟ್ಟ ಬಳಿಕ ಸಿದ್ದರಾಮಯ್ಯ ಅದರಂತೆ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಪ್ತರು ಸಿದ್ದರಾಮಯ್ಯ ಅವರ ಪರವಾಗಿ ಹೈಕಮಾಂಡ್‌ ನಾಯಕರ ಬಳಿ ವಾದಿಸಬೇಕಿತ್ತು ಎಂಬುದು ಅಪ್ರಸ್ತುತ.

ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಾಗ ಯಾರೊಂದಿಗೂ ಚರ್ಚೆ ನಡೆಸಲಿಲ್ಲ, ಯಾರನ್ನೂ ಕೇಳಲಿಲ್ಲ. ದೆಹಲಿಯಲ್ಲಿ ಒಪ್ಪಂದವಾಗಿದ್ದ ಬಗ್ಗೆ ಕೂಡ ನಮಗೆ ಹೇಳಲಿಲ್ಲ ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧ ಸಹಿ ಸಂಗ್ರವಾಗಿತ್ತು ಎಂಬುದು ನಂಬಲರ್ಹವಲ್ಲ. ಯಾರೋ 37 ಜನ ಸಿದ್ದರಾಮಯ್ಯ ಅವರ ವಿರುದ್ಧ ಸಹಿ ಹಾಕಿದ್ದರೆ, ಉಳಿದ 100 ಜನರ ಅಭಿಪ್ರಾಯ ಏನೆಂಬುದು ಮುಖ್ಯವಲ್ಲವೇ? ಸಹಿ ಹಾಕಿದ 37 ಜನ ಈಗ ಹೀರೋಗಳಾಗಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.

2028ರ ವರೆಗೂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌‍ ಪಕ್ಷಕ್ಕೆ ಅಗತ್ಯ ಸಲಹೆ ಸಹಕಾರ ಬೆಂಬಲ ನೀಡಲಿದ್ದಾರೆ. ಇದನ್ನು ನಿನ್ನೆ ನಡೆದ ಸಚಿವರ ಉಪಾಹಾರ ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ.

ಅಹಿಂದ ಸಮುದಾಯದಲ್ಲಿ 200ಕ್ಕೂ ಹೆಚ್ಚು ಜಾತಿಗಳಿವೆ. ಸಿದ್ದರಾಮಯ್ಯ ನಂತರ ತಾವು ಅದನ್ನು ಮುನ್ನಡೆಸುವುದಾಗಿ ಸತೀಶ್‌ ಜಾರಕಿಹೊಳಿ ಹೇಳಿದರು. ಅಹಿಂದ ವರ್ಗಕ್ಕೆ ಯಾರಾದರೂ ನಾಯಕತ್ವ ನೀಡಲೇಬೇಕು. ತಾವು ಆ ಜವಾಬ್ದಾರಿ ನಿಭಾಯಿಸುವುದಾಗಿ ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಮೊಂದಿಗೆ ಚರ್ಚೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ದೆಹಲಿಗೆ ಬಂದಿದ್ದಾರೆ. ಅವರು ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಲಿದ್ದಾರೆ ಎಂದು ತಾವು ತಿಳಿಸಿದ್ದು, ದೆಹಲಿಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಹೈಕಮಾಂಡ್‌ ಚರ್ಚೆ ನಡೆಸಿ, ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗೊತ್ತಿಲ್ಲ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ.

ಈವರೆಗೂ ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಯಾರೂ ಅಧಿಕೃತವಾಗಿ ಹೇಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಧ್ಯಕ್ಷ ಸ್ಥಾನದ ಜೊತೆಗೆ ಸಚಿವ ಸ್ಥಾನ ಬೇಕು ಎಂಬುದರ ಬಗ್ಗೆ ಸದ್ಯಕ್ಕೆ ನಾನು ಏನೂ ಹೇಳುವುದಿಲ್ಲ. ದೆಹಲಿಯಲ್ಲಿ ಸಿದ್ದರಾಮಯ್ಯ ಅವರೇ ಅದನ್ನು ನಿರ್ಧರಿಸುತ್ತಾರೆ. ಈಗಿರುವ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮಾದರಿಯಲ್ಲೇ ಪಕ್ಷ ಸಂಘಟನೆ ಮುಂದುವರೆಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದರು.

ಮೊದಲು ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳಲಿ, ಅನಂತರ ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಗಳಾಗುತ್ತವೆ. ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಇರಲಿದೆಯೋ, ಇಲ್ಲವೋ ಎಂಬುದು ತಮಗೆ ಗೊತ್ತಿಲ್ಲ ಎಂದರು.ಸಿದ್ದರಾಮಯ್ಯಅವರು ಎರಡು ವರ್ಷದ ಬಳಿಕವಾದರೂ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಬೇಕಿತ್ತು. ವಿದಾಯ ಸಹಜ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

RELATED ARTICLES

Latest News