Homeರಾಜ್ಯಸುಮಲತಾ ಅಂಬರೀಷ್‌ ಅವರಿಗೆ ರಾಜ್ಯಸಭೆ ಟಿಕೆಟ್ ನೀಡುತ್ತಾ ಬಿಜೆಪಿ..?

ಸುಮಲತಾ ಅಂಬರೀಷ್‌ ಅವರಿಗೆ ರಾಜ್ಯಸಭೆ ಟಿಕೆಟ್ ನೀಡುತ್ತಾ ಬಿಜೆಪಿ..?

BJP giving Rajya Sabha ticket to Sumalatha Ambareesh..?

ಬೆಂಗಳೂರು, ಜೂ.2- ಮಂಡ್ಯ ಲೋಕಸಭಾ ಕ್ಷೇತ್ರ ತ್ಯಾಗ ಮಾಡಿ ಬಿಜೆಪಿ ಸೇರಿದ್ದ ಸುಮಲತಾ ಅಂಬರೀಷ್‌ ಅವರು ಪ್ರತಿಫಲದ ನಿರೀಕ್ಷೆಯಲ್ಲಿದ್ದು, ಕರ್ನಾಟಕ ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿ ಕೇಂದ್ರಿಯ ಮಂಡಳಿ ಸಂಸದೀಯ ಸಭೆ ನಡೆದಿದ್ದು, ಎರಡು-ಮೂರು ದಿನಗಳಲ್ಲಿ ಪಟ್ಟಿ ಪ್ರಕಟಗೊಳ್ಳಲಿದೆ.
ಜೂನ್‌ 18 ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್‌ ಅವರಿಗೆ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್‌ ಒಲವು ತೋರಿದೆ ಎಂದು ತಿಳಿದು ಬಂದಿದೆ.

ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಹಾಗೂ ಜೆಡಿಎಸ್‌‍ ಮೈತ್ರಿಗೆ ಕೇವಲ ಒಂದೇ ಸ್ಥಾನ ಮಾತ್ರ ದೊರೆಯಲಿದೆ. ಒಂದು ಸ್ಥಾನಕ್ಕೆ ದೋಸ್ತಿಗಳ ಮಧ್ಯೆ ಕುಸ್ತಿ ಶುರುವಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನೆ ಮುಂದುವರೆಸಬೇಕೆಂದು ಜೆಡಿಎಸ್‌‍ ಪಟ್ಟು ಹಿಡಿದಿದೆ. ಆದರೂ ಇನ್ನೂ ಖಚಿತತೆ ಸಿಕ್ಕಿಲ್ಲ. ಇನ್ನೊಂದೆಡೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದೆ.

ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟ ಸುಮಲತಾ ಅಂಬರೀಷ್‌ ಅವರಿಗೆ ರಾಜ್ಯಸಭೆಯ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್‌ ಒಲವು ತೋರಿದೆ. ದೇವೇಗೌಡರ ಸ್ಪರ್ಧೆ ಚರ್ಚೆ ನಡುವೆ ಸುಮಲತಾ ಅಂಬರೀಶ್‌ ಬಗ್ಗೆ ವರಿಷ್ಠರು ಮಾತಾಡಿದ್ದಾರೆ ಎನ್ನಲಾಗಿದೆ.

ಎನ್‌ಡಿಎಯಿಂದ ಸುಮಲತಾ ಅಂಬರೀಶ್‌ ಹೆಸರು ಘೋಷಣೆ ಆದರೂ ಆಶ್ಚರ್ಯ ಇಲ್ಲ ಎನ್ನುವಂತಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಹೆಚ್‌.ಡಿ.ಕುಮಾರಸ್ವಾಮಿಗೆ ಸುಮಲತಾ ಕ್ಷೇತ್ರ ಬಿಟ್ಟುಕೊಟ್ಟಿದ್ದರು.

ರಾಜ್ಯ ಬಿಜೆಪಿ ಈಗಾಗಲೇ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರ ಹೆಸರನ್ನ ರಾಜ್ಯಸಭೆಗೆ ಶಿಫಾರಸು ಮಾಡಿದೆ. ಅತ್ತ ರಾಜ್ಯಸಭೆ ಸೀಟು ಪಡೆಯಲು ಸುಮಲತಾ ಅಂಬರೀಷ್‌ ಅವರು ಸಹ ಪ್ರಯತ್ನ ಮಾಡುತ್ತಿದ್ದು, ಇದೇ ವೇಳೆ ಸುಮಲತಾಗೆ ಅವರ ಬಗ್ಗೆ ಬಿಜೆಪಿ ಹೈಕಮಾಂಡ್‌ ವಿವರಣೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ಸುಮಲತಾ ಅವರ ನಿಲುವು :
ಸುಮಲತಾ ಅಂಬರೀಶ್‌ ಅವರು ಬಿಜೆಪಿ ಸೇರ್ಪಡೆಯಾದ ನಂತರವೂ ರಾಜ್ಯ ರಾಜಕೀಯ ಹಾಗೂ ಕೇಂದ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ರಾಜ್ಯಸಭಾ ಸದಸ್ಯತ್ವದ ಬಗ್ಗೆ ಅವರ ಆಕಾಂಕ್ಷೆಗಳ ಬಗ್ಗೆ ನೇರವಾಗಿ ಬಹಿರಂಗಪಡಿಸದಿದ್ದರೂ, ಪಕ್ಷದ ವೇದಿಕೆಯಲ್ಲಿ ಹಾಗೂ ಹೈಕಮಾಂಡ್‌ ಮಟ್ಟದಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬುದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು.

ಸುಮಲತಾ ಅವರು ಮಂಡ್ಯ ಭಾಗದಲ್ಲಿ ಹೊಂದಿರುವ ಜನಪ್ರಿಯತೆ ಮತ್ತು ಪಕ್ಷದ ಬಲವರ್ಧನೆಗೆ ಅವರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ರಾಜ್ಯಸಭೆಗೆ ಕಳುಹಿಸುವ ಮೂಲಕ ಪಕ್ಷಕ್ಕೆ ಲಾಭ ಮಾಡಿಕೊಳ್ಳುವ ಕುರಿತು ಬಿಜೆಪಿಯಲ್ಲಿ ಆಂತರಿಕ ಚರ್ಚೆಗಳು ನಡೆಯುತ್ತಿವೆ. ಆದರೆ, ಪಕ್ಷದ ವರಿಷ್ಠರ ಅಂತಿಮ ನಿರ್ಧಾರವೇ ಇಲ್ಲಿ ನಿರ್ಣಾಯಕವಾಗಿರುತ್ತದೆ.

ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದಾಗ್ಯೂ, ನಂತರ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಅವರ ಈ ನಡೆ ರಾಜ್ಯ ರಾಜಕೀಯದಲ್ಲಿ ಮಹತ್ವದ ತಿರುವು ಪಡೆದಿತ್ತು.

ರಾಜ್ಯಸಭೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಸಂಪೂರ್ಣವಾಗಿ ಬಿಜೆಪಿ ಹೈಕಮಾಂಡ್‌ನ ಕೈಯಲ್ಲಿದೆ. ಪಕ್ಷದಲ್ಲಿರುವ ಹಿರಿಯ ನಾಯಕರು, ನಿಷ್ಠಾವಂತ ಕಾರ್ಯಕರ್ತರು ಮತ್ತು ಪ್ರಾದೇಶಿಕ ಸಮೀಕರಣಗಳ ಆಧಾರದ ಮೇಲೆ ಪಕ್ಷವು ತನ್ನ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಪ್ರಸ್ತುತ, ಈ ವಿಷಯವು ಪಕ್ಷದ ಆಂತರಿಕ ಚರ್ಚೆಗಳ ಹಂತದಲ್ಲಿದೆ. ಅಧಿಕೃತವಾಗಿ ಯಾವುದೇ ಘೋಷಣೆ ಅಥವಾ ಅಂತಿಮ ನಿರ್ಧಾರ ಕೈಗೊಂಡಿರುವ ಬಗ್ಗೆ ಸ್ಪಷ್ಟನೆ ಲಭ್ಯವಿಲ್ಲ.

ಬಿಜೆಪಿ ಹೈಕಮಾಂಡ್‌ನ ಈ ನಡೆ, ರಾಜ್ಯಸಭೆಗೆ ಸುಮಲತಾ ಅಂಬರೀಷ್‌ ಅಚ್ಚರಿಯ ಆಯ್ಕೆಯಾಗುತ್ತಾರಾ ಎನ್ನುವುದೇ ಕುತೂಹಲ ಮೂಡಿಸಿದೆ. ವಿಧಾನಪರಿಷತ್‌ಗೆ ಚುನಾವಣೆ ಹಿನ್ನೆಲೆ ಬಿಜೆಪಿಯಿಂದ ಇಂದು ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ಈಗಾಗಲೇ ಐದು ಹೆಸರನ್ನ ರಾಜ್ಯ ಬಿಜೆಪಿ ಕೇಂದ್ರಕ್ಕೆ ಕಳುಹಿಸಿದೆ. ರಘು ಕೌಟಿಲ್ಯ, ನಳೀನ್‌ ಕುಮಾರ್‌ ಕಟೀಲ್‌, ಲಿಂಗರಾಜ್‌ ಪಾಟೀಲ್‌, ಎನ್‌ ಮಹೇಶ್‌, ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಹೆಸರು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Latest News