ಎಥಾರ್, ವೋಲಾ, ರಿವರ್, ಬಜಾಜ್ ಚೇತಕ್, ಸಿಂಪಲ್ ಎನರ್ಜಿ, ಟಿವಿಎಸ್ ಕಂಪನಿಯ ಐಕ್ಯೂಬ್ ಹೀಗೆ ತರಹೇವಾರಿ ಎಲೆಕ್ಟ್ರಿಕ್ ವಾಹನಗಳು ನಮ ರಾಜ್ಯದಲ್ಲಿ ವಿಶೇಷವಾಗಿ ರಾಜಧಾನಿಯಲ್ಲಿ ವಿಜೃಂಭಿಸುತ್ತಿವೆ.ಡೀಸೆಲ್ ಉಳಿತಾಯದ ಹಿನ್ನೆಲೆಯಲ್ಲಿ ಎಲ್ಲರೂ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಎಲ್ಲೆಂದರಲ್ಲಿ ಎಲೆಕ್ಟ್ರಿಕ್ ವಾಹನಗಳ ಶೋರೂಮ್‌ಗಳು ತೆರೆದುಕೊಂಡಿವೆ. ಭರ್ಜರಿಯಾಗಿಯೇ ಮಾರಾಟವೂ ಆಗುತ್ತಿದೆ. ಆದರೆ ಈ ಯಾವ ಬೈಕ್ ಕಂಪನಿಗಳು ನಮ ರಾಜ್ಯದಲ್ಲಿ ಉತ್ಪಾದನೆ ಮಾಡದಿರುವುದು ದುರದೃಷ್ಟಕರ.
ಕೇವಲ ಈ ಕಂಪನಿಗಳ ಕಾರ್ಪೋರೇಟ್ ಆಫೀಸ್‌ಗಳು, ಶೋರೂಮ್‌ಗಳು, ವ್ಯಾಪಾರ ಮಳಿಗೆಗಳು, ಸರ್ವೀಸ್ ಸೆಂಟರ್‌ಗಳು, ಬಿಡಿ ಭಾಗಗಳ ಮಾರಾಟ ಮಳಿಗೆಗಳು ಮಾತ್ರ ನಮ ರಾಜ್ಯದಲ್ಲಿವೆ. ಆದರೆ ಉತ್ಪಾದನಾ ಕಂಪನಿಗಳು ಮಾತ್ರ ಬೇರೆ ರಾಜ್ಯದಲ್ಲಿ ರಾರಾಜಿಸುತ್ತಿವೆ.ನಮ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮಾಡಲು ಆಗಿರುವ ತೊಂದರೆಯಾದರೂ ಏನು ಎಂಬುದು ಈವರೆಗೂ ತಿಳಿದುಬಂದಿಲ್ಲ.
ಕೆಐಎಡಿಬಿ ಭೂ ಸ್ವಾಧೀನಪಡಿಸಿಕೊಂಡಿರುವ ಸಾವಿರಾರು ಎಕರೆ ಭೂಮಿ ಖಾಲಿ ಬಿದ್ದಿವೆ. ಇಲ್ಲಿ ಕಂಪನಿಗಳು ಸ್ಥಾಪನೆಗೊಂಡರೆ ಸಾವಿರಾರು ಉದ್ಯೋಗಗಳು ಲಭಿಸುತ್ತವೆ. ಆದರೆ ರಾಜಧಾನಿ ಬೆಂಗಳೂರು ಬಿಪಿಒ ಕೇಂದ್ರದಂತೆ ಕೆಲಸ ನಿರ್ವಹಿಸುತ್ತಿರುವುದು ದುರದೃಷ್ಟಕರ ಎಂಬುದು ಕೈಗಾರಿಕಾ ತಜ್ಞರ ಅಭಿಪ್ರಾಯವಾಗಿದೆ.
ತಮಿಳುನಾಡಿನ ಹೊಸೂರಿನಲ್ಲಿ ತಲೆ ಎತ್ತಿರುವ ಎತಾರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಕಂಪನಿ ಸುಮಾರು 5 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದೆ. ಅದೇ ರೀತಿ ತಮಿಳುನಾಡಿನ ಕೃಷ್ಣಗಿರಿಯ 500 ಎಕರೆ ಜಾಗದಲ್ಲಿರುವ ವೋಲಾ ಕಂಪನಿಯಲ್ಲಿ ಸುಮಾರು 10 ಸಾವಿರ ಮಹಿಳಾ ನೌಕರರಿಗೆ ಉದ್ಯೋಗ ಒದಗಿಸಲಾಗಿದೆ.
ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿ ರಿವರ್ ದ್ವಿಚಕ್ರ ವಾಹನಗಳ ಕಂಪನಿಯಿದ್ದು, ಇಲ್ಲಿ ಒಂದು ಸಾವಿರ ಮಂದಿಗೆ ಮಾತ್ರ ಉದ್ಯೋಗ ಲಭಿಸಿದೆ.ಮಹಾರಾಷ್ಟ್ರದ ಪುಣೆಯಲ್ಲಿರುವ ಬಜಾಜ್ ಚೇತಕ್ ಕಂಪನಿಯಲ್ಲಿ ಸುಮಾರು 11 ಸಾವಿರ ಮಂದಿಗೆ ಉದ್ಯೋಗ ಲಭಿಸಿದೆ.
ತಮಿಳುನಾಡಿನ ಶೂಲಗಿರಿಯಲ್ಲಿ ಸ್ಥಾಪನೆಯಾಗಿರುವ ಸಿಂಪಲ್ ಎನರ್ಜಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಕಂಪನಿಯಿಂದ 1 ಸಾವಿರ ಮಂದಿಗೆ ಉದ್ಯೋಗ ಸಿಕ್ಕಿದೆ. ಅದೇ ರೀತಿ ಪ್ರತಿಷ್ಠಿತ ಟಿವಿಎಸ್ ಕಂಪನಿ ಐಕ್ಯೂಬ್ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡುತ್ತಿದ್ದು, ಇಲ್ಲಿ ಎಲ್ಲಾ ಸೇರಿ 45 ಸಾವಿರ ಜನ ಕೆಲಸ ನಿರ್ವಹಿಸುತ್ತಿದ್ದಾರೆ.
ಯಾವ ಒಂದು ಕಂಪನಿಯೂ ರಾಜ್ಯದಲ್ಲಿ ಸ್ಥಾಪನೆಯಾಗಿಲ್ಲ. ಕಾರಣ ಏನೆಂಬುದು ಮಾತ್ರ ನಿಗೂಢ. ಇಲ್ಲಿ ಕಂಪನಿಗಳ ಸ್ಥಾಪನೆಗೆ ಟೆಂಡರ್‌ಗಳನ್ನು ಕರೆದರೆ ರಾಜ್ಯದವರಿಗೆ ಸಿಗುವ ಮಾನದಂಡಗಳೇ ಇರುವುದಿಲ್ಲ. ಟೆಂಡರ್‌ಗಳಲ್ಲಿ ಕಠಿಣ ನಿಯಮಗಳನ್ನು ರೂಪಿಸಿ ಹೊರ ರಾಜ್ಯದವರ ಪಾಲಾಗುವಂತೆ ಮಾಡಲಾಗುತ್ತದೆ. ಆದ್ದರಿಂದ ಇಲ್ಲಿ ಕಂಪನಿಗಳು ತಲೆ ಎತ್ತಲು ಸಾಧ್ಯವಾಗುತ್ತಿಲ್ಲ ಎಂದು ಕೇಳಿಬಂದಿದೆ.
ಹೋಂಡಾ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಸೌಲಭ್ಯಗಳ ಕೊರತೆಯಿಂದ ಇಲ್ಲಿಂದ ಕಾಲ್ಕಿತ್ತಿವೆ. ಟೊಯೋಟಾ ಹೊರತುಪಡಿಸಿದರೆ ಸದ್ಯ ಯಾವುದೇ ಕಂಪನಿಗಳು ಇಲ್ಲಿ ಇದ್ದಂತಿಲ್ಲ.
ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳಿಗೆ ಕೇವಲ ತರಬೇತಿ ನೀಡಲಾಗುತ್ತದೆ ಅಷ್ಟೇ. ಆದರೆ ಅಗತ್ಯ ಕಂಪನಿಗಳನ್ನು ಸ್ಥಾಪಿಸಿ ಸೂಕ್ತ ಉದ್ಯೋಗಗಳನ್ನು ಕಲ್ಪಿಸುವಲ್ಲಿ ಸರ್ಕಾರಗಳು ಮನಸ್ಸು ಮಾಡುತ್ತಿಲ್ಲ. ಉದ್ಯೋಗಿಗಳಿಗೆ ತರಬೇತಿ ನೀಡುವ ಕಿಟ್‌ಗಳನ್ನು ಸರಬರಾಜು ಮಾಡುವ ಟೆಂಡರ್‌ಗಳು ಕೂಡ ಅನ್ಯ ರಾಜ್ಯಗಳ ಪಾಲಾಗಿದೆ.
ಸಾವಿರಾರು ಉದ್ಯೋಗ ಆಕಾಂಕ್ಷಿಗಳಿಗೆ ತರಬೇತಿಗಾಗಿ ಅಗತ್ಯ ವಸ್ತುಗಳನ್ನು ಒಳಗೊಂಡ ಸುಮಾರು 500 ಕೋಟಿ ರೂ. ಕಿಟ್‌ಗಳನ್ನು ಕಾರ್ಮಿಕ ಇಲಾಖೆ ಪ್ರತಿವರ್ಷ ಒದಗಿಸುತ್ತಾ ಬಂದಿದ್ದು, ಈ ಕಿಟ್‌ಗಳನ್ನು ಸರಬರಾಜು ಮಾಡುವ ಟೆಂಡರ್‌ಗಳು ತಮಿಳುನಾಡು ಸೇರಿದಂತೆ ಅನ್ಯ ರಾಜ್ಯಗಳ ಪಾಲಾಗುವಂತಹ ಮಾನದಂಡಗಳನ್ನು ಮೊದಲೇ ರೂಪಿಸಲಾಗಿದೆ ಎಂಬ ಆರೋಪವೂ ಸಹ ಕೇಳಿಬಂದಿದೆ. ತಮಿಳುನಾಡು ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯದವರಿಗೆ ಟೆಂಡರ್‌ಗಳು ಸಿಗುವಂತಹ ಮಾನದಂಡಗಳನ್ನು ರೂಪಿಸಲಾಗಿದೆ. ಹಾಗಾಗಿ ಅಲ್ಲಿನ ಕಾರ್ಖಾನೆಗಳು ಸ್ಥಾಪನೆಯಾಗಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ.
ಆದರೆ ನಮ ರಾಜ್ಯಗಳಲ್ಲಿ ಈ ರೀತಿಯ ಅನುಕೂಲಗಳನ್ನು ಕಾರ್ಮಿಕ ಇಲಾಖೆಯಾಗಲೀ, ಸರ್ಕಾರವಾಗಲೀ ಮಾಡಿಕೊಟ್ಟಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ನಮಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳು, ಕಾರ್ಖಾನೆಗೆ ಸಾಕಷ್ಟು ಭೂಮಿ ಎಲ್ಲವೂ ಇದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ನಾವು ಉದ್ಯೋಗ ಕೊರತೆ, ಉತ್ಪಾದನಾ ಕೊರತೆ ಮತ್ತಿತರ ಸಮಸ್ಯೆಗಳನ್ನು ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿದೆ.
