ಬೆಂಗಳೂರು,ಜ.13- ಸುಗ್ಗಿ ಹಬ್ಬ ಸಂಕ್ರಾಂತಿ ಬಂತೆಂದರೆ ಹಳ್ಳಿಗಳಲ್ಲಿ ಎಲ್ಲಿಲ್ಲದ ಸಂಭ್ರಮ. ಕಷ್ಟಪಟ್ಟು ಬೆಳೆದ ಬೆಳೆಯನ್ನು ಒಂದೆಡೆ ರಾಶಿಹಾಕಿ ಪೂಜಿಸುವುದು. ವರ್ಷವಿಡಿ ರೈತನ ಬೆನ್ನೆಲುಬಾಗಿ ದುಡಿದ ಎತ್ತುಗಳನ್ನು ಸಿಂಗರಿಸಿ ಪೂಜೆ ಮಾಡಿ ಕಿಚ್ಚಾಯಿಸುವುದನ್ನು ನೊಡುವುದೆ ಒಂದು ಸಂಭ್ರಮ.
ಈ ಬಾರಿ ಸಂಂಕ್ರಾತಿಗೆ ನಗರದ ಜನತೆ ಸಜ್ಜಾಗುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಸಂಕ್ರಾಂತಿ ಸೊಗಡಿಲ್ಲದಂತಾಗಿದೆ. ರಾಜ್ಯಾದ್ಯಂತ ಬರ ಆವರಿಸಿದ್ದು ಈ ಬಾರಿ ಉತ್ತಮ ಮಳೆಯಾಗದೆ, ಬೆಳೆಯಾಗದೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಯೇ ಇಲ್ಲ ಅಂದಮೇಲೆ ಇನ್ನೆಲ್ಲಿ ರಾಶಿ ಪೂಜೆ ಎಂದು ರೈತರು ಈ ಬಾರಿಯ ಹಬ್ಬವನ್ನು ನಿರಾಸೆಯಿಂದ ಆಚರಿಸುವಂತಾಗಿದೆ.
ರಸಗೊಬ್ಬರದ ಬೆಲೆ ಏರಿಕೆ, ನೀರಿನ ಸಮಸ್ಯೆ ಹಾಗೂ ಕೂಲಿಯಾಳುಗಳ ಕೊರತೆಯಿಂದ ವ್ಯವಸಾಯ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಜಮೀನುಗಳು ಪಾಳು ಬೀಳುತ್ತಿವೆ. ಆದರೆ ಇನ್ನೂ ಕೆಲವರು ನಮ್ಮ ಸಂಪ್ರಾದಾಯ ಬಿಡಬಾರದೆಂದು ಕಷ್ಟವೋ ಸುಖಾವೋ ಎಂದು ಕೃಷಿ ಮಾಡುತ್ತಿದ್ದಾರೆ. ಆದರೆ ಸಾಂಪ್ರಾದಾಯಕ ಕೃಷಿಯಲ್ಲಿ ಯಂತ್ರದ ಕೃಷಿ ಮಾಡುವಂತಾಗಿದೆ.
ಇದು ಅನಿವಾರ್ಯವೂ ಹೌದು. ಮೊದಲೆಲ್ಲಾ ಎತ್ತುಗಳಿಂದ ಜಮೀನು ಉತ್ತಿ ಹದಗೊಳಿಸಿ, ಬಿತ್ತನೆ ಮಾಡಿ ಕಳೆ ಕಿತ್ತು, ಫಸಲು ಬಂದ ಮೇಲೆ ಒಕ್ಕಣೆ ಮಾಡಿ ರಾಶಿ ಮಾಡಿ ಪೂಜೆ ಸಲ್ಲಿಸಿ ಮನೆಗೆ ತರುವುದೆ ಒಂದು ಸಂಭ್ರಮ. ಆದರೆ ಇಂದು ಎಲ್ಲವೂ ಯಂತ್ರಮಯವಾಗಿಬಿಟ್ಟಿದೆ. ಜಮೀನು ಉಳುಮೆ ಮಾಡುವುದರಿಂದ ಹಿಡಿದು ಮನೆಗೆ ತರುವವರೆಗೂ ಎಲ್ಲಾ ಯಂತ್ರಗಳೇ. ರಾಶೀನು ಇಲ್ಲ ಪೂಜೆನೂ ಇಲ್ಲದಂತಾಗಿದೆ.
ರಾಮಮಂದಿರ ಉದ್ಘಾಟನೆ ದಿನದಂದು ಮಾರಿಷಸ್‍ನಲ್ಲಿ 2 ಗಂಟೆ ವಿಶೇಷ ರಜೆ
ಕಣ್ಮರೆಯಾದ ಎತ್ತುಗಳು: ಹಳ್ಳಿಗಳಲ್ಲಿ ಹಿಂದೆ ಪ್ರತಿಯೊಬ್ಬರ ಮನೆಯಲ್ಲೂ ಒಂದು ಜೊತೆ ಎತ್ತುಗಳನ್ನು ಕಟ್ಟಲಾಗುತ್ತಿತ್ತು. ಇಂದು ಊರೆಲ್ಲಾ ಉಡುಕಿದರೂ ಎತ್ತುಗಳು ಸಿಗೋದಿಲ್ಲ. ಕೆಲವರು ಪ್ರತಿಷ್ಠೆಗಾಗಿ ಮಾತ್ರ ಸಾಕುತ್ತಾರೆ ಅಷ್ಟೆ . ಎಲ್ಲವೂ ವ್ಯವಹಾರಮಯವಾಗಿಬಿಟ್ಟಿದ್ದು, ಸೀಮೆಹಸುಗಳ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಹಾಗಾಗಿ ಹಳ್ಳಿಗಳಲ್ಲಿ ಸಂಕ್ರಾಂತಿ ಹಬ್ಬದಂದು ಕಿಚ್ಚು ಹಾಯಿಸುವವರು ಇಲ್ಲದಂತಾಗಿದೆ.
ಯುವಜನತೆ ಕೆಲಸ ಅಂತಾ ಪಟ್ಟಣ ಸೇರುತ್ತಿದ್ದಾರೆ. ಹಾಗಾಗಿ ಬೆಳೆಯುವವರಿಲ್ಲ, ತಿನ್ನುವವರೇ ಹೆಚ್ಚಾಗಿರುವಾಗ ಬೆಲೆ ಏರಿಕೆ ಅನಿವಾರ್ಯವಾಗಿದೆ. ಸುಗ್ಗಿಸಂಭ್ರಮ ಹಳ್ಳಿಗಳನ್ನು ಬಿಟ್ಟು ನಗರ ಸೇರಿದರೆ ನಗರದಲ್ಲಿ ಹಬ್ಬದ ದಿನ ದೇವಾಲಯಗಳಲ್ಲಿ ಪೂಜೆ ಮಾಡಿ ಒಂದಷ್ಟು ಗೆಣಸು, ಕಡಲೆಕಾಯಿ, ಕಬ್ಬು ತಂದು ಹಬ್ಬ ಮಾಡುತ್ತಾರೆ. ಜತೆಗೆ ಕೃತಕವಾಗಿ ಹಳ್ಳಿ ವಾತಾವರಣ ನಿರ್ಮಾಣ ಮಾಡಿ ಸಂಭ್ರಮಿಸುವ ಕಾಲ ಬಂದಿದೆ.
ಬೆಲೆ ಏರಿಕೆ ನಡುವೆಯೂ ನಗರದ ಜನರು ಸುಗ್ಗಿಹಬ್ಬಕ್ಕೆ ತಯಾರಾಗುತ್ತಿದ್ದಾರೆ. ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ಪಟ್ಟಣ ತಾಲೂಕು ಕೇಂದ್ರದ ಮಾರುಕಟ್ಟೆಗಳಲ್ಲಿ ಕಡಲೆಕಾಯಿ, ಆವರೆಕಾಯಿ, ಕಬ್ಬು, ಗೆಣಸು, ಮಿಶ್ರಿತ ಎಳ್ಳು-ಬೆಲ್ಲ ಮಾರಾಟ ಜೋರಾಗಿದೆ.ಈ ಬಾರಿ ಬರ ಆವರಿಸಿದ್ದು, ಬೆಳೆ ಬಾರದ ಹಿನ್ನೆಲೆಯಲ್ಲಿ ಆವರೆಕಾಯಿ, ಕಡಲೆಕಾಯಿ, ಕಬ್ಬು, ಗೆಣಸು ಮಾರುಕಟ್ಟೆಗೆ ಬಾರದೆ ಆಂಧ್ರ, ತಮಿಳುನಾಡಿನಿಂದ ಬಂದಿದ್ದು ಬೆಲೆ ಏರಿಕೆಯಾಗಿದೆ.
ಸೊಗಡಿಲ್ಲದೆ ಆವರೆ: ಆವರೆಕಾಯಿ ಸೇಗಡೇ ಒಂದು ರೀತಿಯಲ್ಲಿ ಚೆಂದ. ಅದರಲ್ಲೂ ಮಾಗಡಿ ಆವರೆ ಎಂದರೆ ಹೆಸರುವಾಸಿ. ಮಳೆ ಬಾರದೆ ದಿನ್ನೆ ಆವರೆ ಇಲ್ಲದೆ ನೀರಾವರಿಯಲ್ಲಿ ಬೆಳೆದ ಬೆಳೆ ಮಾರುಕಟ್ಟೆಗೆ ಬಂದಿದ್ದು, ಸೊಗಡೇ ಇಲ್ಲದಂತಾಗಿದೆ. ಜೊತೆಗೆ ನಾಟಿ ಆವರೆ ಸಿಗೋದೆ ಕಡಿಮೆ. ಎಲ್ಲವೂ ಫಾರಂ ಆವರೆ ಆಗಿ ಬಿಟ್ಟಿದೆ. ಹೇಗೂ ಹಬ್ಬ ಮಾಡಲೇಬೇಕಲ್ಲಾ ಎಂದು ಜನರು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು, ಮಾರುಕಟ್ಟೆಗಳಲ್ಲಿ ಇಂದಿನಿಂದಲೇ ಖರೀದಿ ಭರಾಟೆ ಜೋರಾಗಿದೆ.