ಬೆಂಗಳೂರು, ಜೂ. 2- ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ.ಲೋಕಭವನದಲ್ಲಿ ಸಂಜೆ 4.05ಕ್ಕೆ ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.ಇದಕ್ಕಾಗಿ ನಗರದಾದ್ಯಂತ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ.
ಲೋಕಭವನದ ಗಾಜಿನ ಮನೆಯಲ್ಲಿ ವೇದಿಕೆ ಸಜ್ಜುಗೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕ ಗಾಂಧಿ,
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸುವ ಸಾಧ್ಯತೆ ಇದೆ.
ಎಲ್ಲಾ ಧರ್ಮದ ಧಾರ್ಮಿಕ ಮುಖಂಡರನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷೀಕರಿಸುವಂತೆ ಆಹ್ವಾನಿಸಲಾಗಿದೆ. ಮಾಜಿ ಸಂಸದ ಡಿ.ಕೆ.ಸುರೇಶ್ ಲೋಕಭವನಕ್ಕೆ ಭೇಟಿ ನೀಡಿ, ಪ್ರಮಾಣವಚನ ಸ್ವೀಕಾರ ಸಮಾರಂಭದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.ಗಾಜಿನ ಮನೆಯಲ್ಲಿ ಸುಮಾರು 500 ಜನರಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲು ಅವಕಾಶವಿದೆ.ಆದರೆ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಪಾಸ್‌ಗಳನ್ನು ವಿತರಿಸಲಾಗಿದೆ. ಇದರಿಂದ ಲೋಕಭವನದ ಒಳಗೂ ನೂಕು ನುಗ್ಗಲಿನ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.

ಲೋಕಭವನದ ಹೊರಗೆ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ, ಬ್ಯಾರಿಕೇಡ್ ಹಾಕಲಾಗಿದೆ. ಸಮಾರಂಭದ ವೀಕ್ಷಣೆಗೆ ಅನುಕೂಲವಾಗಲು ದೊಡ್ಡ ದೊಡ್ಡ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. ಹೆಚ್ಚು ಜನ ಕಾರ್ಯಕ್ರಮಕ್ಕೆ ಆಗಮಿಸದಂತೆ ಮನವಿ ಮಾಡಲಾಗುತ್ತಿದೆ. ಆರಂಭದಲ್ಲಿ ಸುಮಾರು 20 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಿದ್ದರಾಮಯ್ಯ ಅವರ ರಾಜೀನಾಮೆ ಬಳಿಕ ಡಿ.ಕೆ.ಶಿವಕುಮಾರ್ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ಧಾರೆ. ಈ ಮೂಲಕ ದೇಶದ ಶ್ರೀಮಂತ ಮುಖ್ಯಮಂತ್ರಿ ಎಂಬ ಕೀರ್ತಿಗೆ ಬಾಜನರಾಗಲಿದ್ದಾರೆ.ಈವರೆಗೂ ಸಂಪುಟಕ್ಕೆ ಎಷ್ಟು ಜನ ಸಚಿವರ ಸೇರ್ಪಡೆಯಾಗಲಿದ್ದಾರೆ ಎಂಬುದು ಖಚಿತವಾಗಿಲ್ಲ, ಕಾಂಗ್ರೆಸ್ ಹೈಕಮಾಂಡ್ ಕೊನೆಯ ಕ್ಷಣದವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಕಾಂಗ್ರೆಸ್‌ನ ಎಲ್ಲಾ ಶಾಸಕರಿಗೂ ಬೆಂಗಳೂರಿನ ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚನೆ ನೀಡಲಾಗಿದೆ.
ಯಾರಿಗೆ ಅದೃಷ್ಟ ಒಲಿಯಲಿದೆ, ಯಾರು ಅವಕಾಶ ವಂಚಿತರಾಗಲಿದ್ದಾರೆ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿ 8 ವರ್ಷ 14 ದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಆಳ್ವಿಕೆ ಕೊನೆಗೊಳ್ಳುತ್ತಿದ್ದು, ಡಿ.ಕೆ.ಶಿವಕುಮಾರ್ ಅವರ ಪರ್ವ ಆರಂಭವಾಗಲಿದೆ.ಬಹಳ ವರ್ಷಗಳ ನಂತರ ಮೂಲ ಕಾಂಗ್ರೆಸ್ಸಿಗ ಹಾಗೂ ನಿಷ್ಠಾವಂತ ಕಾರ್ಯಕರ್ತರೊಬ್ಬರಿಗೆ ಅಧಿಕಾರ ಸಿಗುತ್ತಿರುವುದರಿಂದ ಸಂಭ್ರಮ ಮನೆ ಮಾಡಿದೆ. ನಗರ ಪೂರ್ತಿ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಫ್ಲೆಕ್‌್ಸ, ಬ್ಯಾನರ್‌ಗಳ ಮೂಲಕ ಬೆಂಗಳೂರಿನ ಅಂದ ಕೆಡಿಸಬೇಡಿ ಎಂದು ಡಿ.ಕೆ.ಶಿವಕುಮಾರ್ ಹಲವು ಬಾರಿ ಮಾಡಿರುವ ಮನವಿಗೂ ಕಾಂಗ್ರೆಸ್ ಕಾರ್ಯಕರ್ತರು ಕ್ಯಾರೆ ಎಂದಿಲ್ಲ.
ಬೆಂಗಳೂರಿನ ಎಲ್ಲಾ ಮುಖ್ಯರಸ್ತೆಗಳು ಹಾಗೂ ವೃತ್ತಗಳಲ್ಲಿ ಫ್ಲೆಕ್‌್ಸ, ಬ್ಯಾನರ್‌ಗಳು ರಾರಾಜಿಸುತ್ತಿವೆ. ಸಣ್ಣಪುಟ್ಟ ನಾಯಕರಿಂದ ಹಿಡಿದು ದೊಡ್ಡ ದೊಡ್ಡ ನಾಯಕರವರೆಗೂ ಫೋಟೊ ಸಹಿತ ಬ್ಯಾನರ್‌ಗಳ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
2023ರಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಅಭಿಮಾನಿಗಳು ಭಾರೀ ನಿರೀಕ್ಷೆ ಹೊಂದಿದ್ದರು. ಆದರೆ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯಅವರಿಗೆ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿತ್ತು. ಸುಮಾರು ಆರು ತಿಂಗಳ ನಿರಂತರ ಸಂಘರ್ಷದ ಮೂಲಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವ ಅವಕಾಶ ಪಡೆದಿದ್ದಾರೆ.
ಹೀಗಾಗಿ ಬೆಂಗಳೂರು ದಕ್ಷಿಣ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪ್ರಮುಖವಾದ ನಾಯಕರು ಹಾಗೂ ಕಾರ್ಯಕರ್ತರ ದಂಡು ಹರಿದು ಬರುತ್ತಿದೆ.ಪೊಲೀಸರು ಯಾವುದೇ ಅಹಿತಕರ ಘಟನೆಗಳಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತ್ ಆಯೋಜಿಸಲಾಗಿದೆ.
