ಬೆಂಗಳೂರು, ಜೂ. 2- ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಹಾಗೂ ಬಣಗಳ ಮೇಲಾಟದಿಂದಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ನೂತನ ಸಚಿವರ ಆಯ್ಕೆ ತಲೆ ಬಿಸಿ ತಂದಿದೆ.
ದೆಹಲಿಯಲ್ಲಿಂದು ನಡೆದ ಮಹತ್ವದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ 9 ರಿಂದ 10 ಮಂದಿಯನ್ನು ಮಾತ್ರ ಮೊದಲ ಹಂತದಲ್ಲಿ ಸಂಪುಟಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು ಆದರೆ, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಒತ್ತಡಕ್ಕೆ ಮಣಿದ ಹೈಕಮಾಂಡ್ ಮೊದಲ ಹಂತದಲ್ಲಿ 20ಕ್ಕೂ ಹೆಚ್ಚು ಜನರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಮುಂದಾಗಿದೆ.
ಪ್ರಾದೇಶಿಕ ಹಾಗೂ ಜಾತಿ ಆಧರಿತವಾಗಿ ಅವಕಾಶ ಕಲ್ಪಿಸಲು ತೀವ್ರ ಹೆಣಗಾಟಗಳು ನಡೆದಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರತ್ಯೇಕವಾದ ಪಟ್ಟಿಗಳನ್ನು ಮುಂದಿಟ್ಟಿದ್ದಾರೆ. ಹೈಕಮಾಂಡ್ ಕೂಡ ತನ್ನದೇ ಆದ ಪಟ್ಟಿಯನ್ನು ಹೊಂದಿದೆ. ಮೂರು ಬಣಗಳನ್ನು ಸರಿದೂಗಿಸಿ ಸಾಮಾಜಿಕ ಮತ್ತು ಪ್ರಾದೇಶಿಕ ಆದ್ಯತೆ ನೀಡುವುದು ಸವಾಲಿನ ಕೆಲಸವಾಗಿದೆ.
ಉಪ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಗಂಭೀರ ಚರ್ಚೆಗಳಾಗುತ್ತಿವೆ. ಡಿ.ಕೆ.ಶಿವಕುಮಾರ್ ಅವರು ಸದ್ಯಕ್ಕೆ ಯಾವುದೇ ಉಪ ಮುಖ್ಯಮಂತ್ರಿಗಳ ಹುದ್ದೆ ಬೇಡ, ಇದರಿಂದ ಗೊಂದಲಗಳಾಗುತ್ತವೆ ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದು, ಬಹಳಷ್ಟು ಮಂದಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಹಿರಿಯರು, ಅನುಭವಿಗಳು ಹಾಗೂ ಪಕ್ಷಕ್ಕಾಗಿ ಸಾಕಷ್ಟು ದುಡಿದಿರುವ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಲೇ ಬೇಕು ಎಂದು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಅವರ ಒತ್ತಡಕ್ಕೆ ರಾಹುಲ್‌ಗಾಂಧಿ ಸಹಮತ ಸೂಚಿಸಿರುವುದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಉಪ ಮುಖ್ಯಮಂತ್ರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ನಾಲ್ಕು ಉಪ ಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾಗಬೇಕೆಂದು ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ ಅವರು ಕೊನೆಗೆ ಮೂರು ಹುದ್ದೆಗಳಿಗೆ ಒಪ್ಪಿದ್ದಾರೆ ಎನ್ನಲಾಗಿದೆ.
ಸಂಭವನೀಯ ಸಚಿವರ ಪೈಕಿ ಬಹುತೇಕ ಹೊಸ ಮುಖಗಳಿಗೆ ಒತ್ತು ನೀಡುವ ಸಾಧ್ಯತೆ ಇದೆ. ಸಂಪುಟದಲ್ಲಿ ಈ ಮೊದಲು ಸಚಿವರಾಗಿದ್ದ ಬಹುತೇಕರನ್ನು ಕೈ ಬಿಡಲಾಗುತ್ತಿದ್ದು, ಬಹುತೇಕ ಹೊಸ ಮುಖಗಳಿಗೆ ಅವಕಾಶ ನೀಡುವ ಚರ್ಚೆಗಳಾಗಿವೆ. ಇಷ್ಟು ದಿನ ಆಡಳಿತ ನಡೆಸಿದವರು ಮುಂದಿನ ಚುನಾವಣೆಗೆ ಪಕ್ಷಕ್ಕಾಗಿ ಕೆಲಸ ಮಾಡಲಿ ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಸಿದ್ದರಾಮಯ್ಯ ಅವರು, ಹಿಂದಿನ ಸಂಪುಟದಲ್ಲಿ ಉತ್ತಮವಾಗಿ ಕೆಲಸ ಮಾಡಿರುವವರನ್ನು ಮತ್ತೆ ಪರಿಗಣಿಸುವಂತೆ ಸಲಹೆ ನೀಡಿದ್ದಾರೆ.ನಿನ್ನೆ ರಾತ್ರಿ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಚರ್ಚೆ ನಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರು ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಮಾತುಕತೆ ನಡೆಸಿದರು.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಇಬ್ಬರು ರಾಜ್ಯದ ನಾಯಕರಿಗೆ ನಿನ್ನೆ ಸಂಜೆ ಲಭ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಖರ್ಗೆ ಇಬ್ಬರೂ ಭಾಗವಹಿಸಿದ್ದರು.
ಸಂಭವನೀಯ ಸಚಿವರ ಪಟ್ಟಿ:
ಉಪ ಮುಖ್ಯಮಂತ್ರಿ :
ಪ್ರಿಯಾಂಕ್ ಖರ್ಗೆ
ಡಾ. ಯತೀಂದ್ರ
ಯು.ಟಿ.ಖಾದರ್
ಸತೀಶ್ ಜಾರಕಿಹೊಳಿ
ಸಂಭವನೀಯ ಸಚಿವರು:
ಡಾ.ಜಿ.ಪರಮೇಶ್ವರ್
ಕೆ.ಜೆ.ಜಾರ್ಜ್
ರಾಮಲಿಂಗಾರೆಡ್ಡಿ
ಚೆಲುವರಾಯ ಸ್ವಾಮಿ
ಈಶ್ವರ್ ಖಂಡ್ರೆ
ಕೃಷ್ಣ ಭೈರೇಗೌಡ
ಸಂತೋಷ್‌ಲಾಡ್
ಬೈರತಿ ಸುರೇಶ್
ಬಿ.ಕೆ.ಹರಿಪ್ರಸಾದ್
ಶಿವರಾಜ್ ತಂಗಡಗಿ
ರೂಪಾ ಶಶಿಧರ್
ಕೆ.ಎಂ.ಶಿವಲಿಂಗೇ ಗೌಡ
ಎಚ್.ಸಿ.ಬಾಲಕೃಷ್ಣ
ಸಿ.ಎಸ್.ನಾಡಗೌಡ
ಲಕ್ಷ್ಮಣ್ ಸವದಿ
ಪಿ.ಎಂ.ನರೇಂದ್ರಸ್ವಾಮಿ
ಎ.ಆರ್. ಕೃಷ್ಣ ಮೂರ್ತಿ.
