ಬೆಂಗಳೂರು,ಜೂ.2- ಮಳೆ ಅನಾಹುತಗಳಿಂದ ಉದ್ಬವಿಸುವ ಪ್ರಾಣಹಾನಿ ಮತ್ತು ಆಸ್ತಿ ನಷ್ಟದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಪಾಯದ ಮರಗಳನ್ನು ವೈಜ್ಞಾನಿಕವಾಗಿ ಗುರುತಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ತಂತ್ರಜ್ಞಾನದ ಮೊರೆ ಹೋಗಿದೆ. ನಗರದಲ್ಲಿ ಅನೇಕ ಮರಗಳು ಹಳೆಯದಾಗಿದ್ದು, ಅವುಗಳ ಒಳಭಾಗ ಕೊಳೆತಿದೆಯೇ, ಬೇರುಗಳು ದುರ್ಬಲವಾಗಿದೆಯೇ ಅಥವಾ ಇನ್ನೆಷ್ಟು ವರ್ಷ ಸುರಕ್ಷಿತವಾಗಿ ನಿಲ್ಲಬಲ್ಲವು ಎಂಬುದನ್ನು ಪತ್ತೆಹಚ್ಚುವುದು ಅರಣ್ಯ ಇಲಾಖೆಗೆ ಸವಾಲಾಗಿತ್ತು. ಇದಕ್ಕೆ ಪರಿಹಾರವಾಗಿ ಬೆಂಗಳೂರಿನ ವುಡ್ ಸೈನ್‌್ಸ ಇನ್‌್ಸಟಿಟ್ಯೂಟ್ ಜಿಬಿಎಗೆ ವಿಶೇಷ ಪ್ರಸ್ತಾವನೆ ಸಲ್ಲಿಸಿದೆ.
ಮಾನವನ ದೇಹವನ್ನು ಸ್ಕ್ಯಾನ್ ಮಾಡುವ ರೀತಿಯಲ್ಲೇ ಮರಗಳ ಒಳ ರಚನೆಯನ್ನು ಪರೀಕ್ಷಿಸುವ ತಂತ್ರಜ್ಞಾನವನ್ನು ಬಳಸಲು ಸಂಸ್ಥೆ ಮುಂದಾಗಿದೆ. ನಾನ್-ಇನ್ವೇಸಿವ್ ಡಯಾಗ್ನೋಸ್ಟಿಕ್ ತಂತ್ರಜ್ಞಾನ, ರೆಸಿಸ್ಟೋಗ್ರಾಫ್, ಸೋನಿಕ್ ಟೊಮೊಗ್ರಫಿ, ಎಲೆಕ್ಟ್ರಿಕಲ್ ರೆಸಿಸ್ಟೆನ್ಸ್ ಟೊಮೊಗ್ರಫಿ ಹಾಗೂ ಟ್ರೀ-ಮೋಷನ್ ವಿಶ್ಲೇಷಣೆಯಂತಹ ಸುಧಾರಿತ ಸಾಧನಗಳ ಮೂಲಕ ಮರಗಳ ಆರೋಗ್ಯ, ಬೇರುಗಳ ಸ್ಥಿತಿ ಹಾಗೂ ಉಳಿದಿರುವ ಆಯುಷ್ಯವನ್ನು ಅಂದಾಜಿಸಲಾಗುತ್ತದೆ.
ಈ ತಂತ್ರಜ್ಞಾನದಿಂದ ವಾರ್ಡ್‌ವಾರು ಮರಗಳ ಅಪಾಯದ ನೋಂದಣಿ, ಜಾತಿ ಆಧಾರಿತ ವೈಫಲ್ಯ ಅಪಾಯದ ವಿಶ್ಲೇಷಣೆ ಹಾಗೂ ಮರಗಳ ನಿರ್ವಹಣೆಗೆ ಅಗತ್ಯವಾದ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ರೂಪಿಸಲು ಸಾಧ್ಯವಾಗಲಿದೆ.
ಪ್ರಾಯೋಗಿಕ ಹಂತವಾಗಿ ಐದು ನಗರಪಾಲಿಕೆ ವ್ಯಾಪ್ತಿಗಳಲ್ಲಿ ಯೋಜನೆ ಜಾರಿಗೊಳಿಸಲು ಐಡಬ್ಲ್ಯೂಎಸ್‌ಟಿ ಮುಂದಾಗಿದೆ. ಈಗಾಗಲೇ ಬೆಂಗಳೂರು ಪಶ್ಚಿಮ ನಗರಪಾಲಿಕೆ ವ್ಯಾಪ್ತಿಯ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿದ ಅಧ್ಯಯನದಲ್ಲಿ ಸುಮಾರು ಶೇ.50ರಷ್ಟು ಮರಗಳು ಭವಿಷ್ಯದಲ್ಲಿ ಬೀಳುವ ಅಪಾಯದಲ್ಲಿವೆ ಎಂಬುದು ಬೆಳಕಿಗೆ ಬಂದಿದೆ.
ಮೊದಲ ಹಂತದಲ್ಲಿ ಪ್ರತಿ ನಗರಪಾಲಿಕೆಯಲ್ಲಿ ಸುಮಾರು 300 ಮರಗಳಂತೆ ಒಟ್ಟು 1,500 ಮರಗಳನ್ನು ಪರೀಕ್ಷಿಸಲು ಸುಮಾರು 4.40 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆಗೆ ಅನುಮೋದನೆ ದೊರೆತರೆ ಐದು ನಗರಪಾಲಿಕೆಗಳಲ್ಲೂ ಜಾರಿಗೆ ತರಲಾಗುವುದು ಎಂದು ಗ್ರೇಟರ್ ಬೆಂಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ತಿಳಿಸಿದ್ದಾರೆ.
ಐಡಬ್ಲ್ಯೂಎಸ್‌ಟಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಬೆಂಗಳೂರು ಮರ ತಜ್ಞರ ಸಮಿತಿಯ ಮುಂದೆ ಅನುಮೋದನೆಗಾಗಿ ಮಂಡಿಸಲಾಗುವುದು. ಇದರಿಂದ ಅಪಾಯದ ಸ್ಥಿತಿಯಲ್ಲಿರುವ ಮರಗಳ ದೊಡ್ಡ ಗುಂಪನ್ನು ಗುರುತಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಯೋಜನೆಯಡಿ ಬೆಂಗಳೂರು ಕೇಂದ್ರ ನಗರಪಾಲಿಕೆಗೆ 69.41 ಲಕ್ಷ, ಬೆಂಗಳೂರು ಪೂರ್ವ ನಗರಪಾಲಿಕೆಗೆ 96 ಲಕ್ಷ, ಬೆಂಗಳೂರು ಉತ್ತರ ನಗರಪಾಲಿಕೆಗೆ 104.49 ಲಕ್ಷ, ಬೆಂಗಳೂರು ದಕ್ಷಿಣ ನಗರಪಾಲಿಕೆಗೆ 90.65 ಲಕ್ಷ ಹಾಗೂ ಬೆಂಗಳೂರು ಪಶ್ಚಿಮ ನಗರಪಾಲಿಕೆಗೆ 79.15 ಲಕ್ಷ ವೆಚ್ಚದ ಅಂದಾಜು ಮಾಡಲಾಗಿದೆ.
ಐಡಬ್ಲ್ಯೂಎಸ್‌ಟಿ ಅಧ್ಯಯನದ ಪ್ರಕಾರ, ಮರಗಳ ಒಳಭಾಗದಲ್ಲಿ ಉಂಟಾಗುವ ಕೊಳೆತ, ಶಿಲೀಂಧ್ರ ಸೋಂಕು, ಅವೈಜ್ಞಾನಿಕ ಸಮರುವಿಕೆ ಹಾಗೂ ಮರದ ಬುಡಗಳ ಸುತ್ತ ಕಾಂಕ್ರೀಟ್ ನಿರ್ಮಾಣವೇ ಮರಗಳು ಬೀಳಲು ಪ್ರಮುಖ ಕಾರಣಗಳಾಗಿವೆ. ರಸ್ತೆ ಬದಿಯ ಶೇ.90ಕ್ಕೂ ಹೆಚ್ಚು ಮರಗಳಿಗೆ ಅಗತ್ಯ ಸಂರಕ್ಷಣಾ ವಲಯವಿಲ್ಲದಿರುವುದು ಮತ್ತು ಚರಂಡಿ ಹಾಗೂ ಪಾದಚಾರಿ ಮಾರ್ಗ ಕಾಮಗಾರಿಗಳ ವೇಳೆ ಬೇರುಗಳಿಗೆ ಹಾನಿಯಾಗುತ್ತಿರುವುದೂ ಅಪಾಯವನ್ನು ಹೆಚ್ಚಿಸಿದೆ.
2024 ಹಾಗೂ 2025ರ ಪೂರ್ವ-ಮಳೆಗಾಲದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 431 ಮರಗಳು ಸಂಪೂರ್ಣವಾಗಿ ಉರುಳಿದ್ದು, 1,700ಕ್ಕೂ ಹೆಚ್ಚು ಕೊಂಬೆಗಳು ಮುರಿದು ಬಿದ್ದಿವೆ. ಈ ಪೈಕಿ ಗುಲ್ಮೋಹರ್, ಪೆಲ್ಟೋಫೋರಮ್ ಹಾಗೂ ಸ್ಪಾಥೋಡಿಯಾ ಜಾತಿಯ ಮರಗಳ ಪ್ರಮಾಣ ಶೇ.90ಕ್ಕಿಂತ ಹೆಚ್ಚಿದೆ ಎಂದು ವರದಿ ತಿಳಿಸಿದೆ.ಯೋಜನೆ ಜಾರಿಯಾದರೆ ಅಪಾಯದ ಮರಗಳನ್ನು ಮುಂಚಿತವಾಗಿ ಗುರುತಿಸಿ ಸೂಕ್ತ ನಿರ್ವಹಣೆ ಕೈಗೊಳ್ಳುವ ಮೂಲಕ ಪ್ರಾಣಹಾನಿ ಮತ್ತು ಆಸ್ತಿ ನಷ್ಟವನ್ನು ತಡೆಯಲು ನೆರವಾಗಲಿದೆ.
