ಬೆಂಗಳೂರು, ಜೂ. 2- ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಗೆ ತೆರಳಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ನಾಳೆ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಸಚಿವರು ಹಾಗೂ ಗಣ್ಯರನ್ನು ಡಿ.ಕೆ.ಸುರೇಶ್ ಆಹ್ವಾನಿಸುತ್ತಿದ್ದಾರೆ. ಅದರ ಭಾಗವಾಗಿ ಜಮೀರ್ ಅವರ ಮನೆಗೂ ಭೇಟಿ ಮಾಡಿ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವಾಗಿ ಮತ ಹಾಕಿಸುವಂತೆ ಜಮೀರ್ ಅಹಮದ್ ಖಾನ್ ಕಾಂಗ್ರೆಸ್‌ನ ಉಚ್ಛಾಟಿತ ನಾಯಕನ ಜೊತೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ದೆಹಲಿಗೆ ಪ್ರಯಾಣಿಸುತ್ತಿದ್ದ ಜಮೀರ್ ಅಹಮದ್‌ಖಾನ್ ಆಡಿಯೋ ವೈರಲ್ ಅಗುತ್ತಿದ್ದಂತೆ ಅರ್ಧಕ್ಕೆ ವಾಪಸ್ಸಾದರು. ಇಂತಹ ಸಂದರ್ಭದಲ್ಲಿ ತಾವು ತಮೊಂದಿಗೆ ದೆಹಲಿಗೆ ಬರುವುದು ಸೂಕ್ತ ಅಲ್ಲ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದರು ಎನ್ನಲಾಗಿದೆ.
ಹೀಗಾಗಿ ಜಮೀರ್ ಪಯಣ ಮೊಟಕುಗೊಳಿಸಿ ಬೆಂಗಳೂರಿನಲ್ಲೇ ಉಳಿದಿದ್ದರು. ಡಿ.ಕೆ.ಸುರೇಶ್ ಇಂದು ಬೆಳಗ್ಗೆ ಅವರ ಮನೆಗೆ ಭೇಟಿ ಮಾಡಿ ಚರ್ಚೆ ನಡೆಸುವುದಲ್ಲದೇ, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಆಡಿಯೊ ವೈರಲ್ ಆದ ಬೆನ್ನಲ್ಲೇ ಜಮೀರ್, ಸಚಿವ ಸಂಪುಟ ಸೇರ್ಪಡೆ ಬಗ್ಗೆ ಗೊಂದಲಗಳು ಏರ್ಪಟ್ಟಿವೆ. ಸಿದ್ದರಾಮಯ್ಯ ಅವರ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಜಮೀರ್‌ಗೆ, ದಾವಣಗೆರೆ ದಕ್ಷಿಣ ಉಪಚುನಾವಣೆ ಮತ್ತು ಆಡಿಯೊ ಪ್ರಕರಣ ಸಾಕಷ್ಟು ಹಿನ್ನೆಡೆಯುಂಟು ಮಾಡಿದೆ.
ಉಚ್ಛಾಟನೆಗೆ ಆಗ್ರಹ: ಈ ನಡುವೆ ಜಮೀರ್ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ ಕುಶಾಲ್ ಹರುವೆಗೌಡ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿದ್ದು, ಚುನಾವಣೆಯಲ್ಲಿ ಪಕ್ಷದ ವಿರುದ್ಧ ಜಮೀರ್ ಅಹಮದ್ ಕೆಲಸ ಮಾಡಿದ್ದಾದರೆ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತಹ ಕಠಿಣಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪಕ್ಷದಲ್ಲಿ ನಾಯಕರು ಮತ್ತು ಕಾರ್ಯಕರ್ತರಿಗೂ ಸಮಾನ ಹಕ್ಕುಗಳಿರುತ್ತವೆ. ಯಾರೇ ತಪ್ಪು ಮಾಡಿದ್ದರೂ ಪ್ರಶ್ನಿಸುವುದನ್ನು ನಮಗೆ ಹೇಳಿ ಕೊಟ್ಟಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ತಪ್ಪು ಮಾಡಿದರೂ ನಾವು ಕೇಳುತ್ತೇವೆ. ಇದು ಕಾಂಗ್ರೆಸ್‌ನಲ್ಲಿರುವ ಪ್ರಜಾಪ್ರಭುತ್ವ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ನಿರ್ಣಾಯಕ ಹೋರಾಟ ನಡೆಸುತ್ತಿದೆ. ಅಂತಹ ಸಂದರ್ಭದಲ್ಲಿ ನಮ ಪಕ್ಷದ ನಾಯಕರೇ ಬಿಜೆಪಿಯ ಅಭ್ಯರ್ಥಿಯ ಪರವಾಗಿ ಮತ ಹಾಕಿಸುವಂತೆ ಹೇಳುವುದಾದರೆ ನಮಗೆ ನೈತಿಕತೆ ಇರುವುದಿಲ್ಲ. ಜಮೀರ್ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ಸತ್ಯಾಂಶವನ್ನು ವಿಚಾರಣೆ ನಡೆಸಿ ತಪ್ಪು ಕಂಡು ಬಂದರೆೆ ಪಕ್ಷದಿಂದ ಉಚ್ಛಾಟಿಸುವಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕೆಂದು ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
