ದೊಡ್ಡಬಳ್ಳಾಪುರ, ಜೂ.3- ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರ ಗ್ರಾಮದ ಸಮೀಪ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಹಳೆಯ ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹಾವನ್ನು ವನ್ಯಜೀವಿ ರಕ್ಷಕರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ರೈತರೊಬ್ಬರ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಹಳೆಯ ಮೀನಿನ ಬಲೆಯಲ್ಲಿ ಸಿಲುಕಿಕೊಂಡ ಹೆಬ್ಬಾವು ರಾತ್ರಿಯಿಡೀ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಒದ್ದಾಡುತ್ತಿತ್ತು. ಈ ವೇಳೆ ಬಲೆಯಿಂದ ಹೊರಬರಲು ನಡೆಸಿದ ಪ್ರಯತ್ನದ ಪರಿಣಾಮ ಹೆಬ್ಬಾವಿನ ಬಾಯಿ ಭಾಗಕ್ಕೆ ಗಾಯಗಳಾಗಿ ರಕ್ತಸ್ರಾವವಾಗಿರುವುದು ಕಂಡುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ರಕ್ಷಕರಾದ ಕೆ. ಮಧುಕುಮಾರ್ ಹಾಗೂ ಅಭಿಷೇಕ್ ಅವರು ಕಾರ್ಯಾಚರಣೆ ನಡೆಸಿದರು. ಅತ್ಯಂತ ಎಚ್ಚರಿಕೆಯಿಂದ ಬಲೆಯನ್ನು ಕತ್ತರಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದರು.
ಬಳಿಕ ಗಾಯಗೊಂಡಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಲಾಗಿದ್ದು, ಅರಣ್ಯ ಇಲಾಖೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಕಾಡಿಗೆ ಬಿಡಲಾಗುವುದು ಎಂದು ತಿಳಿದು ಬಂದಿದೆ.
ಇನ್ನು ಈ ಘಟನೆಯನ್ನು ಮಾಡೇಶ್ವರ ಗ್ರಾಮದ ಮಧು ಅವರು ವಿಡಿಯೋದಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಪರಿಸರ ಪ್ರೀಮಿಗಳು ಹಾಗೂ ಸಾರ್ವಜನಿಕರು ಹಳೆಯ ಬಲೆಗಳು ಮತ್ತು ತ್ಯಾಜ್ಯ ವಸ್ತುಗಳನ್ನು ತೆರೆದ ಪ್ರದೇಶಗಳಲ್ಲಿ ಎಸೆಯದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
