ಚಿಕ್ಕಮಗಳೂರು,ಜೂ.3-ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ವಲಯ ವ್ಯಾಪ್ತಿಯ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯುವಕರ ತಂಡವೊಂದು ಖಾಸಗಿ ಓಪನ್ ಜೀಪಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಡಾನೆಗಳನ್ನು ಕಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿ ವಿರುದ್ಧ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ತೆರೆದ ಜೀಪಿನಲ್ಲಿ ಅರಣ್ಯದೊಳಗೆ ತೆರಳಿ ಸಾರಿ ಮಾದರಿಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ.
ಈ ವೇಳೆ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಡಾನೆಗಳ ಸಮೀಪಕ್ಕೆ ಜೀಪ್ ತೆಗೆದುಕೊಂಡು ಹೋಗಿ, ಕೂಗಾಟ-ಕಿರುಚಾಟ ನಡೆಸಿರುವ ದೃಶ್ಯಗಳು ದಾಖಲಾಗಿವೆ. ಯುವಕರ ವರ್ತನೆಯಿಂದ ಉದ್ರಿಕ್ತಗೊಂಡ ಕಾಡಾನೆಯೊಂದು ಜೀಪಿನತ್ತ ವೇಗವಾಗಿ ಅಟ್ಟಿಸಿಕೊಂಡು ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಘಟನೆ ತರೀಕೆರೆ ತಾಲೂಕಿನ ಹೆಬ್ಬೆ ವಲಯ ವ್ಯಾಪ್ತಿಯಲ್ಲಿ ನಡೆದಿರಬಹುದೆಂದು ಹೇಳಲಾಗುತ್ತಿದೆ. ಅಲ್ಲದೆ, ಈ ಪ್ರದೇಶವು ಹುಲಿ ಸಂರಕ್ಷಿತ ಅರಣ್ಯದ ಸೂಕ್ಷವಲಯಕ್ಕೆ ಸಮೀಪದಲ್ಲಿರುವ ಕಾರಣ, ಖಾಸಗಿ ವಾಹನಗಳಿಗೆ ಪ್ರವೇಶ ಹೇಗೆ ಸಿಕ್ಕಿತು ಎಂಬ ಪ್ರಶ್ನೆ ಉದ್ಭವಿಸಿದೆ.
ಸಾಮಾನ್ಯವಾಗಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಅನುಮೋದಿತ ವಾಹನಗಳು ಮತ್ತು ನಿಗದಿತ ಮಾರ್ಗಗಳಲ್ಲಿ ಮಾತ್ರ ಸಾರಿಗೆ ಅವಕಾಶ ಇರುತ್ತದೆ. ಆದರೆ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಖಾಸಗಿ ಓಪನ್ ಜೀಪ್ ಆಗಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿವೆ.
ವನ್ಯಜೀವಿಗಳ ಸಮೀಪ ತೆರಳಿ ಅವುಗಳನ್ನು ಕೆಣಕುವುದು, ಜೋರಾಗಿ ಶಬ್ದ ಮಾಡುವುದು, ಅವುಗಳ ಚಲನವಲನಕ್ಕೆ ಅಡ್ಡಿಪಡಿಸುವುದು ವನ್ಯಜೀವಿ ಸಂರಕ್ಷಣಾ ನಿಯಮಗಳ ಉಲ್ಲಂಘನೆಯಾಗಬಹುದು ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವಾಗಿ ಕಾಡಾನೆಗಳಂತಹ ಸೂಕ್ಷ ಹಾಗೂ ಶಕ್ತಿಶಾಲಿ ಪ್ರಾಣಿಗಳನ್ನು ಪ್ರಚೋದಿಸುವುದು ಮಾನವ ಜೀವಕ್ಕೂ ಅಪಾಯಕಾರಿಯಾಗಿದೆ.ತಜ್ಞರ ಪ್ರಕಾರ, ಕಾಡಿನಲ್ಲಿ ಸಂಚರಿಸುವಾಗ ಪ್ರಾಣಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಆದರೆ ವೈರಲ್ ವಿಡಿಯೋದಲ್ಲಿ ಯುವಕರು ಆನೆಗಳ ಅತಿ ಸಮೀಪಕ್ಕೆ ತೆರಳಿರುವುದು ಕಂಡುಬಂದಿದ್ದು, ಇದು ಅರಣ್ಯ ಪ್ರದೇಶಗಳಲ್ಲಿ ಪಾಲಿಸಬೇಕಾದ ಮೂಲಭೂತ ಸುರಕ್ಷತಾ ನಿಯಮಗಳನ್ನೇ ಉಲ್ಲಂಸಿದಂತಾಗಿದೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ಧ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿವೆ. ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ಖಾಸಗಿ ವಾಹನ ಪ್ರವೇಶಿಸಿದ್ದರೆ ಅದನ್ನು ತಡೆಯುವಲ್ಲಿ ಇಲಾಖೆ ವಿಲವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಮತ್ತೊಂದೆಡೆ, ಸಂಬಂಧಿತ ವಾಹನ ಮತ್ತು ಯುವಕರ ಚಟುವಟಿಕೆಗಳ ಬಗ್ಗೆ ಇಲಾಖೆಗೆ ಮಾಹಿತಿ ಇತ್ತೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.ಪರಿಸರವಾದಿಗಳು, ವನ್ಯಜೀವಿ ಹೋರಾಟಗಾರರು ಹಾಗೂ ಸ್ಥಳೀಯ ಸಂಘಟನೆಗಳು ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿವೆ.
ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಪ್ರಶ್ನೆಯೂ ಉದ್ಭವಿಸಿದೆ. ಅರಣ್ಯದ ಸೂಕ್ಷ ಪ್ರದೇಶಗಳಿಗೆ ಪ್ರವೇಶ ಪಡೆಯಲು ಕೆಲವರು ರಾಜಕೀಯ ಅಥವಾ ಇತರೆ ಪ್ರಭಾವ ಬಳಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.ಇಂತಹ ಘಟನೆಗಳು ಕೇವಲ ಮಾನವರ ಜೀವಕ್ಕೆ ಮಾತ್ರವಲ್ಲ, ವನ್ಯಜೀವಿಗಳಿಗೂ ತೊಂದರೆ ಉಂಟುಮಾಡುತ್ತವೆ ಎಂಬ ಆತಂಕ ಮೂಡಿದೆ.
