ಬೆಂಗಳೂರು, ಜೂ. 3- ಸಚಿವ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷ ಹುದ್ದೆ ಎರಡರ ಮೇಲೂ ಕಣ್ಣಿಟ್ಟಿದ್ದ ಸತೀಶ್‌ಜಾರಕಿ ಹೊಳಿಯವರಿಗೆ ಹೈಕಮಾಂಡ್ ಶಾಕ್ ನೀಡಿದ್ದು, ಸಚಿವ ಸ್ಥಾನಕ್ಕೆ ಸಿಮಿತಗೊಳಿಸಿದೆ. ಕೆಪಿಸಿಸಿ ಸಾರಥ್ಯವನ್ನು ಬಿ.ಕೆ. ಹರಿಪ್ರಸಾದ್ ಅವರ ಹೆಗಲಿಗೆ ಹೊರಿಸಲು ಮುಂದಾಗಿದೆ.
ವಿಧಾನಪರಿಷತ್ ಸದಸ್ಯರಾಗಿರುವ ಹರಿಪ್ರಸಾದ್ ಅವರ ಅಧಿಕಾರಾವಧಿ ಇದೇ ತಿಂಗಳ 30ಕ್ಕೆ ಮುಕ್ತಾಯವಾಗಲಿದೆ. ಅವರನ್ನು ರಾಜ್ಯಸಭೆಗೆ ಚುನಾಯಿಸುವ ಮೂಲಕ, ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ಇದೆ.
ಸತೀಶ್ ಜಾರಕಿಹೊಳಿ ಅವರು 2028ರ ವಿಧಾನಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿ ಸ್ಥಾನ ಕೇಳುವುದಾಗಿ ಪದೇಪದೇ ಹೇಳುತ್ತಿದ್ದರು. ಅದಕ್ಕೆ ಪೂರ್ವ ತಯಾರಿಯಂತೆ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಇರಾದೆಯಲ್ಲಿದ್ದರು.
ಆದರೆ 2028ರ ಬಳಿಕವೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರು, ತಮ ಪ್ರತಿ ಸ್ಪರ್ಧಿಗಳನ್ನು ಆರಂಭದಿಂದಲೇ ನಿಯಂತ್ರಿಸಲಾರಂಭಿಸಿದ್ದಾರೆ.
ಸಿದ್ದರಾಮಯ್ಯ ಅವರ ಬಣದಲ್ಲಿ ಪ್ರಮುಖ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಇತ್ತೀಚಿನ ರಾಜ್ಯ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಜಕೀಯ ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಬೇಕೆಂದು ಪದೇ ಪದೇ ಒತ್ತಾಯಿಸುತ್ತಿದ್ದರು. ಆ ಸಂದರ್ಭದಲ್ಲಿ ರಾಜಕೀಯ ಗೊಂದಲಗಳನ್ನು ಬಗೆಹರಿಸಿ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಬೇಕು ಎಂಬುದು ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಪರಮೇಶ್ವರ್ ಹಾಗೂ ಇನ್ನೂ ಕೆಲವರ ಬಯಕೆಯಾಗಿತ್ತು. ಅದಕ್ಕಾಗಿಯೇ ಪದೇಪದೇ ಹೇಳಿಕೆಗಳನ್ನು ನೀಡುತ್ತಿದ್ದರು.
ಆದರೆ ತಮ ಹೇಳಿಕೆಗಳೇ ಸಿದ್ದರಾಮಯ್ಯ ಅವರ ಪದಚ್ಯುತಿಗೆ ಕಾರಣವಾಗಲಿದೆ ಎಂದು ಸತೀಶ್ ಜಾರಕಿಹೊಳಿ ಮತ್ತು ಇತರರು ನಿರೀಕ್ಷಿಸಿರಲಿಲ್ಲ. ಹೈಕಮಾಂಡ್‌ನ ಅನಿರೀಕ್ಷಿತ ನಿರ್ಧಾರ ಸಿದ್ದರಾಮಯ್ಯ ಬೆಂಬಲಿಗರಿಗೆ ತೀವ್ರ ಆಘಾತ ಮೂಡಿಸಿದೆ. ಕನಿಷ್ಠ ಪಕ್ಷ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಾದರೂ ಧಕ್ಕಿಸಿಕೊಳ್ಳಲು ಜಾರಕಿಹೊಳಿ ಪ್ರಯತ್ನ ಪಟ್ಟಿದ್ದರು. ಆದರೆ ಅದು ಕೂಡ ಸಾಧ್ಯವಾಗಿಲ್ಲ.
ಮೂಲ ಕಾಂಗ್ರೆಸ್ಸಿಗರು ಹಾಗೂ ತತ್ವ ಸಿದ್ಧಾಂತಕ್ಕೆ ಕಟಿ ಬದ್ಧರಾಗಿರುವ ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಮಣೆ ಹಾಕಲು ಮುಂದಾಗಿದೆ. ನೂತನ ಮುಖ್ಯಮಂತ್ರಿಯವರ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುವ ಹಾಗೂ ಪಕ್ಷ ಸಂಘಟನೆಯಲ್ಲಿ ಅನುಭವ ಇರುವ ಹರಿಪ್ರಸಾದ್ ಅವರಿಗೆ ಅವಕಾಶ ನೀಡುವ ಚರ್ಚೆಗಳಾಗಿವೆ.
ಹರಿಪ್ರಸಾದ್ ಈ ಮೊದಲು ಗುಜರಾತ್ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ನಿರ್ವಹಿಸಿದ್ದರು. ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರ ಬಣದ ಪ್ರಬಲ ಪ್ರತಿಪಾದಕರಾಗಿದ್ದರು. ಡಿ.ಕೆ.ಶಿವಕುಮಾರ್ ಮತ್ತು ಹರಿಪ್ರಸಾದ್ ಅವರ ಸಂಬಂಧ ಅಷ್ಟಕಷ್ಟೇ ಎಂಬ ಚರ್ಚೆಗಳಿದ್ದವು. ಆದರೆ ಕಳೆದ ಎರಡು ತಿಂಗಳ ಹಿಂದೆ ಡಿ.ಕೆ.ಶಿವಕುಮಾರ್ ಮತ್ತು ಹರಿಪ್ರಸಾದ್ ಪರಸ್ಪರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದರು.
