ಬೆಂಗಳೂರು : ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದ ಸಂಭ್ರಮದ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ದಲಿತ ಸಮುದಾಯದ ಪ್ರಭಾವಿ ಮುಖಂಡ ಡಾ ಜಿ ಪರಮೇಶ್ವರ್ ಅವರು ಮಾತ್ರ ಉಪಮುಖ್ಯಮಂತ್ರಿಯಾಗುವ ಅದೃಷ್ಟ ಖುಲಾಯಿಸಿದೆ. ಜೊತೆಗೆ 13 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ಹಾಗೂ ಸಚಿವರಿಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಅಧಿಕಾರ ಗೌಪ್ಯತೆ ಬೋಧಿಸಿದರು.
ಡಿ.ಕೆ.ಶಿವಕುಮಾರ್‌ರವರು ವೀರ ಗಂಗಾಧರಜ್ಜ ಅವರ ಹೆಸರನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದುಕೊಂಡಿದ್ದ ಅವರು ಶ್ವೇತವರ್ಣದ ವಸ್ತ್ರ ಧರಿಸಿದ್ದರು.ಸಾಮಾನ್ಯವಾಗಿ ಈವರೆಗೂ ಲೋಕಭವನದ ಗಾಜಿನ ಮನೆಯಲ್ಲಿ ಅಧಿಕಾರ ಸ್ವೀಕಾರ ಸಮಾರಂಭವು ಪೂರ್ವಾಭಿಮುಖವಾಗಿ ನಡೆಯುತ್ತಿತ್ತು. ಜ್ಯೋತಿಷಿಗಳ ಸಲಹೆ ಮೇರೆಗೆ ಇದೇ ಮೊದಲ ಬಾರಿಗೆ ಡಿ ಕೆ ಶಿವಕುಮಾರ್ ಅವರು ಪಶ್ಚಿಮಾಭಿಮುಖವಾಗಿ ಅಧಿಕಾರ ಸ್ವೀಕರಿಸಿದ್ದು ವಿಶೇಷ.
ರಾಜ್ಯದ ಅತ್ಯಂತ ಪ್ರಭಾವ ಒಕ್ಕಲಿಗ ಸಮುದಾಯದ ಎಂಟನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಡಿಕೆಶಿ ಪಾತ್ರರಾಗಿದ್ದಾರೆ.ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಾ.ಜಿ.ಪರಮೇಶ್ವರ ಅವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ತಮ ಸಂಪುಟಕ್ಕೆ ಶಿವಕುಮಾರ್ ಪ್ರಾದೇಶಿಕತೆ, ಹಿರಿತನ, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು 13 ಮಂದಿ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಿದ್ದಾರೆ.ಸಂಪುಟದಲ್ಲಿ ಮೂವರು ಒಕ್ಕಲಿಗರು, ಮೂವರು ಪರಿಶಿಷ್ಟ ಜಾತಿ, ಮೂವರು ಲಿಂಗಾಯತರು, ಇಬ್ಬರು ಹಿಂದುಳಿದ ಸಮುದಾಯದಿಂದ, ಒಬ್ಬರು ಪರಿಶಿಷ್ಟ ಪಂಗಡದಿಂದ, ಕ್ರಿಶ್ಚಿಯನ್, ಮುಸ್ಲಿಂ ಸಮುದಾಯದಿಂದ ತಲಾ ಒಬ್ಬರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಂಪುಟದಲ್ಲಿ ಬೆಂಗಳೂರು, ಮೈಸೂರು, ತುಮಕೂರು, ಕಲಬುರಗಿ, ಬಿಜಾಪುರ, ಬೀದರ್, ಬೆಳಗಾವಿ ಜಿಲ್ಲೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಮಾಣವಚನ ಸ್ವೀಕರಿಸಿದ ಸಚಿವರು :
ಡಾ.ಜಿ.ಪರಮೇಶ್ವರ್ (ಕೊರಟಗೆರೆ) ದಲಿತ
ಎಂ.ಬಿ.ಪಾಟೀಲ್ (ಬಬಲೇಶ್ವರ) ಲಿಂಗಾಯತ
ಕೆ.ಜೆ.ಜಾರ್ಜ್ (ಸರ್ವಜ್ಞನಗರ) ಕ್ರಿಶ್ಚಿಯನ್
ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್) ರೆಡ್ಡಿ ಒಕ್ಕಲಿಗ
ಸತೀಶ್ ಜಾರಕಿಹೊಳಿ (ಯಮಕನಮರಡಿ) ವಾಲೀಕಿ
ಪ್ರಿಯಾಂಕ ಖರ್ಗೆ (ಚಿತ್ತಾಪುರ) ದಲಿತ
ಯು.ಟಿ.ಖಾದರ್ (ಮಂಗಳೂರು) ಅಲ್ಪಸಂಖ್ಯಾತ
ಕೆ.ಎಚ್.ಮುನಿಯಪ್ಪ (ದೇವನಹಳ್ಳಿ) ದಲಿತ
ಕೃಷ್ಣ ಭೈರೇಗೌಡ (ಬ್ಯಾಟರಾಯನಪುರ) ಒಕ್ಕಲಿಗ
ಡಾ ಯತೀಂದ್ರ ಸಿದ್ದರಾಮಯ್ಯ (ವಿಧಾನಪರಿಷತ್) ಕುರುಬ
ಡಾ.ಶರಣ ಪ್ರಕಾಶ್ ಪಾಟೀಲ್ (ಸೇಡಂ) ಲಿಂಗಾಯತ
ಈಶ್ವರ ಖಂಡ್ರೆ (ಬಾಲ್ಕಿ) ಲಿಂಗಾಯತ
ಬೈರತಿ ಸುರೇಶ್ (ಹೆಬ್ಬಾಳ) ಕುರುಬ




