Homeರಾಜ್ಯವಿಧಾನ ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ.ಖಾದರ್‌ ರಾಜೀನಾಮೆ

ವಿಧಾನ ಸಭಾಧ್ಯಕ್ಷ ಸ್ಥಾನಕ್ಕೆ ಯು.ಟಿ.ಖಾದರ್‌ ರಾಜೀನಾಮೆ

U.T. Khader resigns as Speaker of the Legislative Assembly

ಬೆಂಗಳೂರು, ಜೂ. 3- ಸಂಪುಟ ಸೇರುವುದು ಖಚಿತವಾಗುತ್ತಿದ್ದಂತೆ ಮಂಗಳೂರು ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ.ಖಾದರ್‌ ವಿಧಾನ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌‍ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಯು.ಟಿ.ಖಾದರ್‌ ಅವರು ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಅದರ ಪರಿಣಾಮ ಸಂಪುಟ ಸೇರ್ಪಡೆಯಾಗುತ್ತಿದ್ದಾರೆ. ಈ ಮೊದಲು ವಿಧಾನಸಭಾಧ್ಯಕ್ಷರಾಗಿ ಖಾದರ್‌ ಅವರು ಕಲಾಪ ನಡೆಸುವಾಗಲೆಲ್ಲಾ ಮುಂದಿನ ಅವಧಿಯ ಸಚಿವರು ಎಂದು ವಿರೋಧ ಪಕ್ಷಗಳ ಸದಸ್ಯರು ರೇಗಿಸುತ್ತಿದ್ದರು.

ವಿಧಾನಸಭಾಧ್ಯಕ್ಷರಾಗಿ ಕಳೆದ ಮೂರು ವರ್ಷಗಳಲ್ಲಿ ಖಾದರ್‌ ಅವರ ಕರ್ತವ್ಯ, ನಿರ್ವಹಣೆ ಭಿನ್ನ ಹಾಗೂ ವಿಶೇಷವಾಗಿತ್ತು. ಕರಾರುವಕ್ಕಾದ ಕಲಾಪ ನಡೆಸುವ ಮೂಲಕ ಗಮನ ಸೆಳೆದಿದ್ದರು.
ವಿಧಾನಸಭೆಯ ಸಚಿವಾಲಯಕ್ಕಾಗಿ ಖರೀದಿಸಲಾಗಿದ್ದ ಎರಡು ಕಾರುಗಳನ್ನು ಇಂದು ಲೋಕಾರ್ಪಣೆ ಮಾಡಿದ ಬಳಿಕ, ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿಯವರಿಗೆ ತಮ ರಾಜೀನಾಮೆಯನ್ನು ಯು.ಟಿ.ಖಾದರ್‌ ನೀಡಿದ್ದಾರೆ. ರುದ್ರಪ್ಪ ಲಮಾಣಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಅವಕಾಶ ಸಿಕ್ಕಿಲ್ಲ.

ರಾಜೀನಾಮೆ ನೀಡಿರುವುದನ್ನು ಖಾದರ್‌ ಅವರು ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವೇಳೆ ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲರು ಮತ್ತು ವಿಧಾನ ಪರಿಷತ್ತಿನ ಸಭಾಪತಿಯವರನ್ನು ಭೇಟಿ ಮಾಡಿ, ಧನ್ಯವಾದ ಹೇಳಿದ್ದೇನೆ. ಮೂರು ವರ್ಷ ಕಾಂಗ್ರೆಸ್‌‍ ಕಚೇರಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಇಂದು ತಮಗೆ ತವರು ಮನೆಗೆ ಬಂದಷ್ಟೇ ಸಂತೋಷವಾಗುತ್ತಿದೆ ಎಂದು ತಿಳಿಸಿದರು.

ಸಚಿವ ಸ್ಥಾನದಲ್ಲಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ರಾಷ್ಟ್ರ ನಾಯಕರು, ರಾಜ್ಯ ನಾಯಕರು ತಮ ಮೇಲೆ ವಿಶ್ವಾಸ ಇರಿಸಿದ್ದಾರೆ. ಈವರೆಗೂ ತಮಗೆ ಹಲವಾರು ಜವಾಬ್ದಾರಿಗಳನ್ನು ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಸಚಿವ ಸ್ಥಾನದ ಜವಾಬ್ದಾರಿಯನ್ನು ಮತ್ತಷ್ಟು ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ತಿಳಿಸಿದ್ದಾರೆ.

RELATED ARTICLES

Latest News