Homeರಾಷ್ಟ್ರೀಯಉತ್ತರ ಪ್ರದೇಶ : ಉದ್ಯಮಿಯ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್‌ಕೌಂಟರ್‌ನಲ್ಲಿ ಫಿನಿಷ್

ಉತ್ತರ ಪ್ರದೇಶ : ಉದ್ಯಮಿಯ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್‌ಕೌಂಟರ್‌ನಲ್ಲಿ ಫಿನಿಷ್

Ghazipur police guns down 1 lakh rewarded murder accused in Hotelier's son murder

ಗಾಜೀಪುರ, ಜೂನ್‌ 3-ಉದ್ಯಮಿಯ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಹಾಗೂ ಪತ್ತೆಗೆ 1 ಲಕ್ಷ ಬಹುಮಾನ ಘೋಷಿಸಲಾಗಿದ್ದ ಆರೋಪಿಯೊಬ್ಬ ತಡರಾತ್ರಿ ಉತ್ತರ ಪ್ರದೇಶದ ಗಾಜೀಪುರ ಜಿಲ್ಲೆಯಲ್ಲಿ ನಡೆದ ಪೊಲೀಸ್‌‍ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ .

ಮೃತ ಆರೋಪಿಯನ್ನುಕಮಲೇಶ್‌ ಚೌಧರಿ ಅಲಿಯಾಸ್‌‍ ಕಮಲೇಶ್‌ ಬಿಂದ್‌‍ಎಂದು ಗುರುತಿಸಲಾಗಿದೆ. ಕಳೆದ ಮೇ 29ರಂದು ಗಾಜೀಪುರದ ಉದ್ಯಮಿ ವಿನೀತ್‌ ರೈ ಅವರ ಹತ್ಯೆ ಪ್ರಕರಣದಲ್ಲಿ ಕಮಲೇಶ್‌ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದನು. ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಬಾಗಿಯಾಗಿದ್ದರು ಎಮದು ಗೊತ್ತಾಗಿತ್ತು.

ಜಿಲ್ಲಾ ಪೊಲೀಸ್‌‍ ಅಧೀಕ್ಷಕ ಡಾ. ಇರಾಜ್‌ ರಾಜಾ ಸುದ್ದಿಗಾರರಿಗೆ ಮಾಹಿತಿ ನೀಡುತ್ತಾ, ಹತ್ಯೆ ನಡೆದ ಬಳಿಕ ಆರೋಪಿಗಳ ಬಂಧನಕ್ಕಾಗಿ ಪೊಲೀಸ್‌‍ ತಂಡಗಳು ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ಹೇಳಿದರು.

ಕಮಲೇಶ್‌ ಕುರ್ಥಾ ಗ್ರಾಮದ ಸಮೀಪದ ಪವಹಾರಿ ಬಾಬಾ ಆಶ್ರಮದ ಬಳಿ ಅಡಗಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸ್ವಾಟ್‌ ತಂಡ ರಾತ್ರಿ ಆ ಪ್ರದೇಶವನ್ನು ಸುತ್ತುವರೆದರು.

ಪೊಲೀಸರು ಹೇಳುವಂತೆ, ನಂಬರ್‌ ಪ್ಲೇಟ್‌ ಇಲ್ಲದ ಮೋಟಾರ್‌ಸೈಕಲ್‌ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಲು ಸೂಚಿಸಿದಾಗ, ಆತ ದೂರದಿಂದಲೇ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿ ಗಾಯಗೊಂಡಿದ್ದಾನೆ.

ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಆತನನ್ನು ಮೃತ ಎಂದು ಘೋಷಿಸಿದರು.ಎನ್‌ಕೌಂರ್ಟ ವೇಳೆ ಸ್ವಾಟ್‌ ತಂಡದ ಇನ್‌ಚಾರ್ಜ್‌ ಹಾಗೂ ಉಪನಿರೀಕ್ಷಕ ರೋಹಿತ್‌ ಮಿಶ್ರಾಅವರ ಭುಜಕ್ಕೆ ಗುಂಡು ತಗುಲಿದ್ದು, ಅವರು ಚಿಕಿತ್ಸೆಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳದಿಂದ ಅಕ್ರಮ.32 ಬೋರ್‌ ಪಿಸ್ತೂಲು,ಒಂದು ಜೀವಂತ ಕಾರ್ತೂಸ್‌‍ ಹಾಗೂ ಮೋಟಾರ್‌ಸೈಕಲ್‌‍ ವಶಪಡಿಸಿಕೊಳ್ಳಲಾಗಿದೆ.ಪೊಲೀಸರ ಪ್ರಕಾರ, ಕಮಲೇಶ್‌ ವಿರುದ್ಧ 2017ರಿಂದಲೂ ಕೊಲೆ, ಕೊಲೆ ಯತ್ನ, ಅಪಹರಣ, ಹಲ್ಲೆ, ಬೆದರಿಕೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಏಳು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು.

ಈ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳ ತಲೆಗೆ ಒಂದು ದಿನ ಮುಂಚೆಯೇ ಬಹುಮಾನ ಘೋಷಿಸಲಾಗಿತ್ತು. ಪ್ರಮುಖ ಆರೋಪಿ ಶಂಕರ್‌ ಪಾಂಡೆ ಹಾಗೂ ಕಮಲೇಶ್‌ ತಲೆಗೆ ತಲಾ 1 ಲಕ್ಷ ಬಹುಮಾನ ಘೋಷಿಸಲಾಗಿದ್ದರೆ, ಸಹಚರರಾದ ಸೋನು ಯಾದವ್‌‍ ಮತ್ತು ಮೋನು ತ್ರಿಪಾಠಿ ತಲೆಗೆ ತಲಾ 50 ಸಾವಿರ ಬಹುಮಾನ ಘೋಷಿಸಲಾಗಿತ್ತು.

ಪ್ರಸ್ತುತ ಶಂಕರ್‌ ಪಾಂಡೆ, ಸೋನು ಯಾದವ್‌ ಮತ್ತು ಮೋನು ತ್ರಿಪಾಠಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.ಪೊಲೀಸರ ತನಿಖೆಯ ಪ್ರಕಾರ, ಗಾಜೀಪುರ ನಗರದಲ್ಲಿರುವ ಹೋಟೆಲ್‌ವೊಂದರ ನಿರ್ವಹಣೆ ಮಾಡುತ್ತಿದ್ದ ವಿನೀತ್‌ ರೈ ಅವರನ್ನು 1 ಕೋಟಿ ಸುಲಿಗೆ ಹಣ ಬೇಡಿಕೆ ಇಡಲಾಗಿತ್ತು ಅವರು ನಿರಾಕರಿಸಿದ ಕಾರಣ ಮೇ 29ರ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ಆ ರಾತ್ರಿ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ, ಎರಡು ಮೋಟಾರ್‌ಸೈಕಲ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮೊದಲು ಹೋಟೆಲ್‌ ಗೇಟ್‌ ಬಳಿ ಬಿಯರ್‌ ಖರೀದಿಸುವ ನೆಪದಲ್ಲಿ ಬಂದಿದ್ದರು. ಬಳಿಕ ಅವರು ವಿನೀತ್‌ ರೈ ಮೇಲೆ ಗುಂಡಿನ ದಾಳಿ ನಡೆಸಿದರು.

ಪಾರಾಗಲು ಯತ್ನಿಸಿದ ರೈ ಮೇಲೆ ಹಲವು ಸುತ್ತು ಗುಂಡು ಹಾರಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News