Homeರಾಜ್ಯ24 ಗಂಟೆಯೂ ಜನರ ಸೇವೆಗೆ ಲಭ್ಯವಾಗಿರುವಂತೆ ಅಧಿಕಾರಿಗಳಿಗೆ ಸಿಎಂ ಡಿಕೆಶಿ ತಾಕೀತು

24 ಗಂಟೆಯೂ ಜನರ ಸೇವೆಗೆ ಲಭ್ಯವಾಗಿರುವಂತೆ ಅಧಿಕಾರಿಗಳಿಗೆ ಸಿಎಂ ಡಿಕೆಶಿ ತಾಕೀತು

CM DK Shivakumar asks officers to be available to serve people 24 hours a day

ಬೆಂಗಳೂರು, ಜೂ. 4- ಅಧಿಕಾರಿಗಳು ದಿನದ 24 ಗಂಟೆಯೂ ಜನರ ಸೇವೆಗೆ ಲಭ್ಯವಾಗಿರಬೇಕು. ಕಾನೂನು ಹಾಗೂ ನಿಯಾಮಾವಳಿಗಳ ನೆಪ ಹೇಳಿ ಅನಗತ್ಯ ವಿಳಂಬ ಧೋರಣೆ ಅನುಸರಿಸಿದರೆ ಸಹಿಸುವುದಿಲ್ಲ ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸಿ, 5 ಪ್ರಮುಖ ನಿರ್ಧಾರಗಳನ್ನು ನಿನ್ನೆ ಡಿ.ಕೆ.ಶಿವಕುಮಾರ್‌ ಪ್ರಕಟಿಸಿದರು.

ಇಂದು ಸರ್ಕಾರದ ಅಪರ ಮಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಅಯುಕ್ತರು, ನಿರ್ದೇಶಕರು, ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕರು, ಮೇಲ್ಪಟ್ಟ ಹಿರಿಯ ಅಧಿಕಾರಿಗಳು, ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು, ಮೇಲ್ಪಟ್ಟ ಅರಣ್ಯಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಭೆಯಲ್ಲಿ ಉಪಸ್ಥಿತರಿದ್ದರು. ಈವರೆಗಿನದು ಒಂದು ಲೆಕ್ಕ, ಇನ್ನು ಮುಂದೆ ಬೇರೆಯದೇ ಲೆಕ್ಕ. ಆಡಳಿತದಲ್ಲಿ ಜಡತ್ವವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ, ಹಾಗೆಯೇ ಭ್ರಷ್ಟಾಚಾರಕ್ಕೂ ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಸಂಪುಟದ ಖಾತೆಗಳು ಹಂಚಿಕೆಯಾಗದ ಹಿನ್ನೆಲೆಯಲ್ಲೇ ಖಾತೆ ರಹಿತ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು. ಜನ ಸಂಪರ್ಕ ಹೆಚ್ಚಿರುವ ಕಂದಾಯ, ಗ್ರಾಮೀಣಾಭಿವೃದ್ಧಿ, ಸಾರಿಗೆ, ಆರೋಗ್ಯ, ಶಿಕ್ಷಣ ಮತ್ತು ಪೊಲೀಸ್‌‍ ಇಲಾಖೆಗಳ ಜವಾಬ್ದಾರಿ ನಿರ್ವಹಿಸುವ ಅಧಿಕಾರಿಗಳು ಕಾಲಮಿತಿ ಹಾಗೂ ಕಡತಗಳಿಗೆ ಜೋತು ಬೀಳದೇ ಜನಪರವಾದ ಆಡಳಿತ ನೀಡಲು, ದಿನದ 24 ಗಂಟೆಗಳ ಕಾಲವೂ ಜವಾಬ್ದಾರಿ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.

ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಆದರೆ ಅದರಲ್ಲಿ ದುರುಪಯೋಗವಾಗುತ್ತಿರುವುದು ಕಂಡುಬಂದಿದೆ. ಸುಮಾರು 100 ಕೋಟಿ ರೂ. ಹೆಚ್ಚಿನ ಹಣ ಅನರ್ಹರ ಪಾಲಾಗಿದೆ. ಅಧಿಕಾರಿಗಳು ಇಂತಹ ವಿಚಾರಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ಡಿ.ಕೆ.ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಯಾವುದೇ ಯೋಜನೆಗಳಿಗೆ ಹಣಕಾಸಿನ ಕೊರತೆ ಇಲ್ಲ. ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡದೆ ಹಣಕಾಸಿನ ಸಮಸ್ಯೆ ಇದೆ ಎಂದು ಬಿಂಬಿಸಿದರೆ, ಕಠಿಣಕ್ರಮ ಕೈಗೊಳ್ಳಲಾಗುವುದು. ಉದ್ಯಮ, ಕೃಷಿ, ಶಿಕ್ಷಣ, ವ್ಯಾಪಾರ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಬೇಕು. ಉದ್ಯೋಗ ಸೃಷ್ಟಿಯತ್ತ ಹೆಚ್ಚಿನ ಆಸಕ್ತಿವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮಳೆಗಾಲ ಆರಂಭವಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಶಾಂತಿ ಸುವ್ಯಸ್ಥೆ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರು ಅತ್ಯಂತ ಎಚ್ಚರಿಕೆಯಿಂದ ಹಾಗೂ ಸೂಕ್ಷ್ಮತೆಯಿಂದ, ಸರ್ವಜನಾಂಗದ ಶಾಂತಿಯ ತೋಟ ಎಂಬ ಪರಿಕಲ್ಪನೆಯಲ್ಲಿ ಕೆಲಸ ನಿರ್ವಹಿಸುವಂತೆ ಆದೇಶಿಸಿದ್ದಾರೆ.

ಇನ್ನು ಮುಂದೆ ಯಾವುದೇ ಅಧಿಕಾರಿ ನಿರ್ಲಕ್ಷ್ಯ ವಹಿಸಿದರೆ, ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ನಡೆದುಕೊಂಡರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಹತ್ತಿಕ್ಕಬೇಕು. ಸರ್ಕಾರಿ ಕಚೇರಿಗಳಲ್ಲಿ ಜನರ ಜೊತೆ ಅಧಿಕಾರಿಗಳು ಸೌಹಾರ್ದತೆಯಿಂದ ವರ್ತಿಸಬೇಕು ಎಂದು ಆದೇಶಿಸಿದ್ದಾರೆ.

RELATED ARTICLES

Latest News