ಹಾಸನ, ಜು.30-ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಧರ್ಮಪತ್ನಿ ದಿ.ಚನ್ನಮ ಅವರ ಉತ್ತರ ಕ್ರಿಯಾದಿ ಕಾರ್ಯಕ್ರಮವು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು.ಜುಲೈ 18ರಂದು ನಿಧನರಾಗಿದ್ದ ಚನ್ನಮ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಜುಲೈ 20ರಂದು ಹೊಳೆನರಸೀಪುರ ತಾಲ್ಲೂಕಿನ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಗಿತ್ತು.
ಚನ್ನಮ ಅವರ ಸಮಾಧಿ ಸ್ಥಳದಲ್ಲಿ ಇಂದು 11 ದಿನದ ಉತ್ತರ ಕ್ರಿಯಾದಿ ಕಾರ್ಯವನ್ನು ದೇವೇಗೌಡರು, ಪುತ್ರರಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಗೌಡರ ಪುತ್ರರು, ಪುತ್ರಿಯರು ಮೊಮಕ್ಕಳು, ಸಂಬಂಧಿಕರು ನೆರವೇರಿಸಿದರು.
ದೇವೇಗೌಡರು ತಮ ಪತ್ನಿಯನ್ನು ನೆನೆದು ಕಂಬನಿ ಮಿಡಿದರು. ಮಕ್ಕಳು ಹಾಗೂ ಮೊಮಕಳು ಸೇರಿದಂತೆ ಕುಟುಂಬದ ಸದಸ್ಯರು ದುಃಖಿತರಾಗಿದ್ದರು. ಸಮಾಧಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಪ್ರದಾಯದಂತೆ ಶಾಸೊ್ತ್ರೕಕ್ತವಾಗಿ ಪೂಜಾ ಕಾರ್ಯ ನೆರವೇರಿಸಲಾಯಿತು.

ಪಕ್ಷಾತೀತವಾಗಿ ರಾಜಕೀಯ ಪಕ್ಷಗಳ ನಾಯಕರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಅತಿ ಗಣ್ಯರು, ಗಣ್ಯರು, ಹಿತೈಷಿಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿ ಚನ್ನಮ ಅವರ ಸಮಾಧಿಗೆ ನಮಿಸಿ ಗೌಡರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಭಾರಿ ಸಂಖ್ಯೆಯಲ್ಲಿ ಜನರು ಉತ್ತರ ಕ್ರಿಯಾದಿ ಕಾರ್ಯಕ್ಕೆ ಆಗಮಿಸಿದ್ದರು. ಒಂದು ಪಂಕ್ತಿಯಲ್ಲಿ 22,000 ಜನರು ಕುಳಿತು ಭೋಜನ ಮಾಡುವಷ್ಟು ವ್ಯವಸ್ಥೆ ಮಾಡಲಾಗಿತ್ತು. 15 ವಿಶೇಷ ಜರ್ಮನ್ ಟೆಂಟ್‌ಗಳನ್ನು ಹಾಕಲಾಗಿದ್ದು, ಅದರಲ್ಲಿ ಮೂರು ವಿಭಾಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿತ್ತು. ಗಣ್ಯರು ಮತ್ತು ಅತಿ ಗಣ್ಯರಿಗೆ ಎರಡು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಚನ್ನಮ ಅವರಿಗೆ ಇಷ್ಟವಾಗಿದ್ದ ತಿಂಡಿ-ತಿನಿಸು ಸೇರಿದಂತೆ 20ಕ್ಕೂ ಹೆಚ್ಚು ಖಾದ್ಯಪದಾರ್ಥಗಳನ್ನು ಸಿದ್ಧಪಡಿಸಲಾಗಿತ್ತು. ಅಕ್ಕಿ ಪಾಯಸ, ಬೂಂದಿ, ಕಾಯಿ ಹೋಳಿಗೆ, ಕಜ್ಜಾಯ, ಬಾದಾಮಿ ಹಲ್ವಾ, ಇಡ್ಲಿ ಸಾಂಬಾರ್, ದೋಸೆ, ಪುಳಿಯೋಗರೆ, ಬಿಸಿಬೇಳೆ ಬಾತ್, ಮಸಾಲೆ ವಡೆ, ಉದ್ದಿನ ವಡೆ, ಕೋಸಂಬರಿ, ತರಕಾರಿ ಕೂಟು, ಅನ್ನ, ಮಜ್ಜಿಗೆ ಹುಳಿ ಇತ್ಯಾದಿ ಪದಾರ್ಥಗಳು ಪ್ರಸಾದದಲ್ಲಿದ್ದವು.
ಹರಿದುಬಂದ ಜನಸಾಗರ
ಹಾಸನ, ಜು.30- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಧರ್ಮಪತ್ನಿ ದಿ.ಚನ್ನಮ ಅವರ ಉತ್ತರಕ್ರಿಯಾದಿ ಕಾರ್ಯಕ್ರಮಕ್ಕೆ ಜನ ಸಾಗರ ಹರಿದು ಬಂದಿತ್ತು.ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿರುವ ರಂಗನಾಥಸ್ವಾಮಿ ದೇವಾಲಯದ ಸಮೀಪದಲ್ಲಿ ನಡೆದ ಉತ್ತರಕ್ರಿಯಾದಿ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆ ಮಾತ್ರವಲ್ಲದೆ ನೆರೆ ಜಿಲ್ಲೆಗಳಾದ ಮಂಡ್ಯ, ಮೈಸೂರು, ಕೊಡಗು ಸೇರಿದಂತೆ ವಿವಿಧ ಭಾಗಗಳಿಂದಲೂ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಕಾರ್ಯಕ್ರಮದ ಸ್ಥಳದಲ್ಲಿ ಬೃಹತ್ ಪೆಂಡಾಲ್‌ಗಳು, ಊಟದ ವ್ಯವಸ್ಥೆ, ಕುಡಿಯುವ ನೀರು, ವಾಹನಗಳ ನಿಲುಗಡೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಚನ್ನಮ ಅವರ ಸಮಾಧಿಗೆ ನಮಿಸಿದ ಗೌಡರ ಕುಟುಂಬದವರು, ಅಭಿಮಾನಿಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಸರಳ ಜೀವನ, ಕುಟುಂಬದೊಂದಿಗೆ ಹೊಂದಿದ್ದ ಬಾಂಧವ್ಯ ಹಾಗೂ ಸಮಾಜ ಸೇವೆಯನ್ನು ಸರಿಸಿದರು. ಶ್ರದ್ಧಾಂಜಲಿ ಸಲ್ಲಿಸುವ ವೇದಿಕೆಯಲ್ಲಿ ಕಲಾವಿದರಿಂದ ಚನ್ನಮರವರಿಗೆ ಗೀತೆಗಳ ಮೂಲಕ ನುಡಿನಮನ ಸಲ್ಲಿಸಲಾಯಿತು.
