ಬೆಂಗಳೂರು, ಸೆ.15- ನಕಲಿ ಔಷಧ ಮಾರಾಟ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್ ವಾರ್ಷಿಕ ಸುಮಾರು ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ.ಕಡಿಮೆ ಬೆಲೆಗೆ ನಕಲಿ ಔಷಧಿಗಳು ತನಗೆ ಬರುತ್ತಿದ್ದವು. ಅವುಗಳನ್ನು ಹೆಚ್ಚಿನ ಬೆಲೆಗೆ ಬೇರೆಡೆಗೆ ಕಳುಹಿಸಲಾಗುತ್ತಿತ್ತು ಎಂದು ಎಸ್‌ಐಟಿ ವಿಚಾರಣೆ ವೇಳೆ ಆರೋಪಿ ವೀರೇಶ್‌ಕುಮಾರ್ ಹೇಳಿರುವುದಾಗಿ ತಿಳಿದುಬಂದಿದೆ.
ಎಸ್‌ಐಟಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಏಕಕಾಲದಲ್ಲಿ ನಕಲಿ ಔಷಧಿ ಸಂಸ್ಥೆಗಳ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ನಗರದ ಮಿರ್ನವ ವೃತ್ತದಲ್ಲಿರುವ ಕೃಪಾ ಫಾರ್ಮಸಿ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾಣದ ನಕಲಿ ಔಷಧಿಗಳು ಹಾಗೂ ಬಿಲ್‌ಗಳು ಪತ್ತೆಯಾಗಿದ್ದವು.
ಈ ವೇಳೆ ಫಾರ್ಮಸಿ ಮಾಲೀಕ, ಮೂಲತಃ ರಾಜಸ್ಥಾನದ ವೀರೇಶ್‌ಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ಔಷಧಿಗಳ ಜಾಲದ ಕುರಿತು ಮತ್ತಷ್ಟು ಮಾಹಿತಿಗಳು ಬೆಳಕಿಗೆ ಬಂದಿವೆ.ಆರೋಪಿ ವೀರೇಶ್‌ಕುಮಾರ್ ನೀಡಿರುವ ಮಾಹಿತಿಯ ಆಧಾರದ ಮೇಲೆ ಇನ್ನಷ್ಟು ಮೆಡಿಕಲ್ ಸ್ಟೋರ್‌ಗಳು ಹಾಗೂ ಫಾರ್ಮಸಿಗಳ ಮೇಲೆ ಎಸ್‌ಐಟಿ ಸದ್ಯದಲ್ಲೇ ದಾಳಿ ನಡೆಸುವ ಸಾಧ್ಯತೆಯಿದೆ.
ಈ ದಂಧೆಯ ಮತ್ತೊಬ್ಬ ಪ್ರಮುಖ ಆರೋಪಿ ಪ್ರಶಾಂತ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನನ್ನು ಭಾರತಕ್ಕೆ ಕರೆತರಲು ಎಸ್‌ಐಟಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.ನಗರದ ಹೊರವಲಯದ ಸಿ.ಕೆ.ಪಾಳ್ಯದ ತೋಟದ ಮನೆಯೊಂದರಲ್ಲಿ ನಡೆಯುತ್ತಿದ್ದ ನಕಲಿ ಔಷಧ ಜಾಲದ ಮೇಲೆ ತಾವರೆಕೆರೆ ಠಾಣೆ ಪೊಲೀಸರು ಹಾಗೂ ಡ್ರಗ್ಸ್ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ, ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧಿಗಳನ್ನು ಪತ್ತೆಹಚ್ಚಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತಾವರೆಕೆರೆ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಇದೀಗ ಎಸ್‌ಐಟಿ ವೀರೇಶ್‌ಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.
