ವಾಷಿಂಗ್ಟನ್, ಸೆ.15- ವಿದೇಶಿ ವಿದ್ಯಾರ್ಥಿಗಳು ಮತ್ತು ಪತ್ರಕರ್ತರು ಅಮೆರಿಕದಲ್ಲಿ ಅಧ್ಯಯನ ಅಥವಾ ಕೆಲಸ ಮಾಡುವ ಅವಧಿಗೆ ಕಠಿಣ ಮಿತಿ ವಿಧಿಸುವ ಟ್ರಂಪ್ ಆಡಳಿತದ ಹೊಸ ವೀಸಾ ನಿಯಮ ಜಾರಿಗೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿದ್ದಾರೆ.
ಮಸಾಚ್ಯುಸೆಟ್ಸ್ ಜಿಲ್ಲಾ ನ್ಯಾಯಾಧೀಶ ಎಫ್. ಡೆನ್ನಿಸ್ ಸೇಲರ್ ನಾಲ್ಕನೇ ಅವರು ನೀಡಿರುವ ಈ ಆದೇಶದಿಂದ ಭಾರತ ಸೇರಿದಂತೆ ವಿವಿಧ ದೇಶಗಳ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪರಿಹಾರ ದೊರೆತಿದೆ.
ಈ ಹೊಸ ನಿಯಮ ಇಂದಿನಿಂದ ಜಾರಿಗೆ ಬರಬೇಕಿತ್ತು. ಹೊಸ ನೀತಿಯು ಅಮೆರಿಕದ ಆರ್ಥಿಕತೆ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲೆ ವಿನಾಶಕಾರಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ದೇಶದ ಭದ್ರತೆಗಾಗಿ ಈ ನಿಯಮ ಅಗತ್ಯ ಎಂಬ ಸರ್ಕಾರದ ವಾದವನ್ನೂ ಅವರು ತಿರಸ್ಕರಿಸಿದರು.
ಜುಲೈನಲ್ಲಿ ಅಂತಿಮಗೊಳಿಸಲಾಗಿದ್ದ ನಿಯಮದಂತೆ, ವಿದ್ಯಾರ್ಥಿ ಹಾಗೂ ವಿನಿಮಯ ಕಾರ್ಯಕ್ರಮಗಳ ವೀಸಾಗಳಿಗೆ ನಾಲ್ಕು ವರ್ಷಗಳ ಮಿತಿ ವಿಧಿಸಲಾಗಿತ್ತು. ಚೀನಾ ಹೊರತುಪಡಿಸಿ ವಿದೇಶಿ ಪತ್ರಕರ್ತರ ವೀಸಾಗಳಿಗೆ 240 ದಿನ ಹಾಗೂ ಚೀನಾದ ಪತ್ರಕರ್ತರಿಗೆ 90 ದಿನಗಳ ಮಿತಿ ನಿಗದಿಪಡಿಸಲಾಗಿತ್ತು.
ವಿದ್ಯಾರ್ಥಿಗಳು ಮತ್ತು ಪತ್ರಕರ್ತರು ವೀಸಾ ಅವಧಿ ವಿಸ್ತರಣೆಗೆ ಅರ್ಜಿ ಸಲ್ಲಿಸಬಹುದಾಗಿದ್ದರೂ, ಅದರ ಅನುಮೋದನೆ ಗೃಹ ಭದ್ರತಾ ಇಲಾಖೆಯ ಅಧಿಕಾರಿಗಳ ವಿವೇಚನೆಗೆ ಒಳಪಟ್ಟಿತ್ತು. ವಿಸ್ತರಣೆ ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇರಲಿಲ್ಲ.
ಸುಮಾರು 600 ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರತಿನಿಧಿಸುವ ಸಂಘಟನೆಗಳು ನಿಯಮ ರದ್ದುಪಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದವು. ಅಮೆರಿಕದಲ್ಲಿ 5,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿರುವುದರಿಂದ ಅರ್ಜಿದಾರರಿಗೆ ಮಾತ್ರ ಪರಿಹಾರ ನೀಡುವುದು ಗೊಂದಲ ಸೃಷ್ಟಿಸಲಿದೆ ಎಂದು ನ್ಯಾಯಾಧೀಶರು ಹೇಳಿದರು.
ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷ ಅಲನ್ ಗಾರ್ಬರ್, ಪಿಎಚ್‌ಡಿ ಪೂರ್ಣಗೊಳಿಸಲು ಸಾಮಾನ್ಯವಾಗಿ ಕನಿಷ್ಠ ಆರು ವರ್ಷ ಬೇಕಾಗುತ್ತದೆ. ಹೀಗಿರುವಾಗ ವಿದ್ಯಾರ್ಥಿ ವೀಸಾಗೆ ನಾಲ್ಕು ವರ್ಷಗಳ ಮಿತಿ ವಿಧಿಸಿರುವುದು ವಿಚಿತ್ರವಾಗಿದೆ ಎಂದು ಈ ಹಿಂದೆ ಟೀಕಿಸಿದ್ದರು.
ವೀಸಾ ವಂಚನೆ ನಿಯಂತ್ರಿಸಲು ಹಾಗೂ ಅವಧಿ ಮೀರಿಸಿ ಅಮೆರಿಕದಲ್ಲಿ ಉಳಿಯುವವರನ್ನು ತಡೆಯಲು ಈ ನಿಯಮ ನೆರವಾಗಲಿದೆ ಎಂದು ಗೃಹ ಭದ್ರತಾ ಇಲಾಖೆ ವಾದಿಸಿತ್ತು. ಆದರೆ ಸರ್ಕಾರವನ್ನು, ವಿಶೇಷವಾಗಿ ಗೃಹ ಭದ್ರತಾ ಇಲಾಖೆ ಅಧಿಕಾರಿಗಳನ್ನು ಟೀಕಿಸುವ ವಿದೇಶಿ ಪತ್ರಕರ್ತರ ವೀಸಾ ನವೀಕರಣ ನಿರಾಕರಣೆಗೆ ಈ ನಿಯಮ ದುರ್ಬಳಕೆಯಾಗುವ ಸಾಧ್ಯತೆಯನ್ನೂ ನ್ಯಾಯಾಧೀಶರು ಪ್ರಸ್ತಾಪಿಸಿದರು.
