ಮುಂದುವರಿದಿದೆ…
ಶ್ರೀಕೃಷ್ಣನ ಜೀವನದಲ್ಲಿ ಇಷ್ಟೆಲ್ಲಾ ಸಮಾಜಮುಖಿ ಕೆಲಸ ಮಾಡಿದರು ಪ್ರಾಜ್ಞರು ಗುರುತಿಸುವಂತೆ ಮೂರು ಪ್ರಮುಖ ಘಟ್ಟಗಳು ಇಡೀ ಸಮಾಜಕ್ಕೆ ಮಾದರಿ ಎಂದು ಕರೆಸಿಕೊಳ್ಳುತ್ತಿವೆ. ಆ ಘಟನೆಗಳು ಆತನ ಜೀವಿತ ಅವಧಿಯಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿವೆ. ಅಷ್ಟೇ ಅಲ್ಲ ಶ್ರೀಕೃಷ್ಣ ಭೂಮಿಯಿಂದ ತೆರಳಿದ ನಂತರ ಈಗಲೂ ಬಹುಶಃ ಮುಂದೆಯೂ ಇಡೀ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತದೆ ಸಮಾಜದಲ್ಲಿನ ಎಲ್ಲರ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದ್ದೆ. ಎಲ್ಲಾ ಸಾತ್ವಿಕರಿಗೂ ಸುಖ ಶಾಂತಿ ನೆಮದಿಯನ್ನು ಅದು ತಂದುಕೊಡುತ್ತದೆ.
ದುಷ್ಟರಾದ, ದುರುಳರಾದ ಅಸುರ ಕ್ಷತ್ರಿಯರನ್ನು ಸಂಹರಿಸುವುದು ಎಂದರೆ ಅವರ ಭೌತಿಕ ಶರೀರ ನಿರ್ನಾಮವಾದಂತೆ ಆಗುತ್ತದೆ. ಅವರು ಜಗತ್ತಿನ ದೃಷ್ಟಿಯಲ್ಲಿ ಇಲ್ಲವಾಗುತ್ತಾರೆ. ಆದರೆ ನಮಗೆ ಅರಿವಿಲ್ಲದೆಯೇ ಹಲವು ಬಾರಿ ನಮ್ಮೊಳಗೆ ಸೇರಿಕೊಳ್ಳುತ್ತಾರೆ. ಕಾಮ ಕ್ರೋಧ ಮದ ಮತ್ಸರ ಇವುಗಳ ರೂಪದಲ್ಲಿ ಕಾಣುತ್ತಾರೆ. ಅವರಂತೆಯೇ ನಮಗೂ ದುಷ್ಟ ಕಾರ್ಯ ಮಾಡಲು ಅಣಿ ಮಾಡುತ್ತಾರೆ.ಹೊರಗಿನ ಶತ್ರುಗಳನ್ನು ಮಣಿಸ ಬಹುದು. ಆದರೆ ಒಳಗಿನ ಶತ್ರುಗಳನ್ನು ಮಣಿಸುವುದು ಸುಲಭವಾಗಿ ಸಾಧ್ಯವಾಗು ವುದಿಲ್ಲ. ನಿಯಂತ್ರಣಕ್ಕೆ ಸಿಗದ ಮನಸ್ಸನ್ನು ಹತೋಟಿಗೆ ತರಬೇಕಾಗುತ್ತದೆ. ಅದರ ಸಾಧನೆಗಾಗಿ ಧ್ಯಾನ, ಸಿದ್ಧಿ, ತಪಸ್ಸು, ಜ್ಞಾನದ ಮಾರ್ಗ ಎಲ್ಲವೂ ಬೇಕಾಗುತ್ತದೆ. ಅದನ್ನೇ ಶ್ರೀ ಕೃಷ್ಣ ಮನಸ್ಸಿಗೆ ಕಡಿವಾಣ ಹಾಕುವ ಮಾರ್ಗೋಪಾಯವನ್ನು ಕೆಳಕಂಡಂತೆ ಸೂಚಿಸುತ್ತಾನೆ.
`ಗುರುಗಳು ಹಿರಿಯರು ಸಂಬಂಧಿಗಳು ಸ್ವಂತ ಅಣ್ಣ ತಮಂದಿರು ದಾಯಾದಿ ಬಂಧುಗಳು ಎಲ್ಲರೂ ಯುದ್ಧಭೂಮಿಯಲ್ಲಿ ನೆರೆದಿದ್ದಾರೆ. ಇವರೆಲ್ಲರೊಂದಿಗೆ ಆಟವಾಡಿ, ಪ್ರೀತಿ ವಿಶ್ವಾಸಗಳೆಂಬ ಮಹಾ ಸರೋವರದಲ್ಲಿ ಮಿಂದಿದ್ದೇನೆ. ಈ ಎಲ್ಲದರ ಘಟನೆಗಳು ನನ್ನ ಜೀವನದಲ್ಲಿ ಮರೆಯುವಂತೆಯೇ ಇಲ್ಲ. ಯಕಃಶ್ಚಿತ್ ಕೇವಲ ಭೂಮಿಗಾಗಿ, ರಾಜ್ಯದ ಅಧಿಕಾರಕ್ಕಾಗಿ, ಇವರೆಲ್ಲರೊಂದಿಗೆ ಯುದ್ಧ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಶ್ರೀಕೃಷ್ಣ ಪರಮಾತ, ನಾನು ಯುದ್ಧ ಮಾಡಲಾರೆ. ನನಗದು ಬೇಕಿಲ್ಲ ಎಂದು ಅರ್ಜುನ ತನ್ನ ಬಿಲ್ಲು ಬಾಣ ಕೆಳಗಿಡುತ್ತಾನೆ.
ಇಂತಹ ಭ್ರಮ ನಿರಸನಗೊಂಡ ಅರ್ಜುನನಿಗೆ ಕರ್ತವ್ಯ ಪ್ರಜ್ಞೆ ನೆನಪಿಸಲು, ತಿಳಿವಳಿಕೆ ಮತ್ತು ಜ್ಞಾನದ ಮಾರ್ಗವನ್ನು ಶ್ರೀ ಕೃಷ್ಣ ಪರಮಾತ ತಿಳಿಸುತ್ತಾನೆ. ಸಾಕ್ಷಾತ್ ಭಗವಂತ ನುಡಿದ ಜ್ಞಾನಮಾರ್ಗದ ಗೀತೆ. ಆದ್ದರಿಂದ ಇದು ಮುಂದೆ ಭಗವದ್ಗೀತೆ ಎಂದೇ ಪ್ರಖ್ಯಾತ ಆಗಿದೆ. ಮಹಾಭಾರತದಲ್ಲಿ ಭಗವದ್ಗೀತೆಯ ಬೋಧನೆ ಅರ್ಜುನನ ಹೃದಯ ಮತ್ತು ಕಣ್ಣು ತೆರೆಸಿತು. ಒಂದು ಹೊಸ ದಿಕ್ಕು ಮತ್ತು ಮಾರ್ಗದರ್ಶನ ಇದರಿಂದ ಆತನಿಗೆ ದೊರೆಯಿತು.
ಇದು ಕೇವಲ ಅರ್ಜುನನಿಗೆ ಮಾತ್ರ ಹೇಳಿದ್ದಲ್ಲ. ಅರ್ಜುನನ ನೆಪ ಇಟ್ಟುಕೊಂಡು ಇಡೀ ಸಮಾಜಕ್ಕೆ ದಿವ್ಯದೃಷ್ಟಿಯನ್ನು ಶ್ರೀ ಕೃಷ್ಣ ಪರಮಾತ ಬೋಧಿಸುತ್ತಾನೆ. ಅರ್ಜುನನಿಗೆ ಕಟ್ಟ ಕಡೆಯಲ್ಲಿ ತಾನು ಎಲ್ಲಾ ವಿಷಯವನ್ನು ಹೇಳಿದರೂ ನಾನು ಹೇಳಿದ ಎಲ್ಲ ವಿಷಯಗಳು ನೀನು ಒಪ್ಪಬೇಕೆಂದು ಬಲವಂತ ಇಲ್ಲ. ಇದನ್ನು ನೀನೇ ಸ್ವತಃ ಪರಿಶೀಲಿಸಿ, ಬೇರೆಯವರು ದೊಡ್ಡವರು ಜ್ಞಾನಿಗಳು ಹೇಳಿದ ಮಾತನ್ನು ತಿಳಿದುಕೊಂಡು ನಿನಗೆ ಸರಿ ಎನಿಸಿದ್ದನ್ನು ಮಾಡು ಎಂದು ಆಯ್ಕೆಯ ಸ್ವಾತಂತ್ರ್ಯವನ್ನು ಸಹ ಅರ್ಜುನನಿಗೆ ಶ್ರೀಕೃಷ್ಣ ಪರಮಾತ ನೀಡುತ್ತಾನೆ. ಇದೇ ಶ್ರೀಕೃಷ್ಣ ಪರಮಾತ ಮನಸ್ಸಿಗೆ ಕಡಿವಾಣ ಹಾಕುವ ಮೊದಲ ಪ್ರಮುಖ ಘಟನೆ ಆಗಿದೆ.
ಮಹಾಭಾರತ ಯುದ್ಧವಾದ ಮೇಲೆ ಅರ್ಜುನನಿಗೆ ಬಂದ ಪ್ರಶ್ನೆ ಧರ್ಮರಾಜನಿಗೆ ಮನಸ್ಸಿನಲ್ಲಿ ಕ್ಲೇಶ ಉಂಟಾಗಿ ಬರುತ್ತದೆ. ನಾನು ಮಹಾರಾಜನಾಗಿ ಧರಿಸಿರುವ ಕಿರೀಟ ಅನೇಕ ಬಂಧುಗಳು ಹಿರಿಯರ ಸಂಹಾರ ಮಾಡಿ ಅವರ ದೇಹದಿಂದ ಹರಿದ ರಕ್ತದಿಂದ ಅದ್ದಿದ ಕಿರೀಟ ಎಂಬ ಭಾವನೆ ಉಂಟಾಗುತ್ತದೆ. ಅದೇ ಪರಿಸ್ಥಿತಿಯನ್ನು ನೆನೆದು ನೆನೆದು ಪದೇ ಪದೇ ದುಃಖಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಾನೆ. ಯಾವುದೇ ಕೆಲಸ ಮಾಡಲು ಆತನಲ್ಲಿ ಉತ್ಸಾಹವೇ ಇರುವುದಿಲ್ಲ.
ಸಾಮ್ರಾಜ್ಯದ ಆಡಳಿತದಲ್ಲಿ ಸರಿಯಾದ ಮನಸ್ಸು ಕೊಡಲು ಆಗುವುದಿಲ್ಲ. ಇದರಿಂದಾಗಿ ರಾಜಕಾರ್ಯಗಳಿಗೆ ಅಡೆತಡೆ ಉಂಟಾಗುತ್ತದೆ. ರಾಜ ಕಾರ್ಯದಲ್ಲಿ ಯಾವುದೇ ಸ್ಪಷ್ಟವಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಧರ್ಮರಾಜ ಅಸಮರ್ಥ ಆಗುತ್ತಾನೆ. ಇದು ಒಂದು ರೀತಿಯಲ್ಲಿ ಅಲ್ಲೋಲಕಲ್ಲೋಲ ವಾತಾವರಣ ಉಂಟು ಮಾಡುತ್ತದೆ. ಇಂತಹ ಮನಃಸ್ಥಿತಿಯನ್ನು ಶ್ರೀಕೃಷ್ಣನ ಮುಂದೆ ಧರ್ಮರಾಜ ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ. ಆಗ ಶ್ರೀ ಕೃಷ್ಣ ಪರಮಾತನು ಧರ್ಮರಾಜ ಮತ್ತು ಆತನ ಸಹೋದರರನ್ನು ಕರೆದುಕೊಂಡು ಭೀಷಾಚಾರ್ಯರ ಬಳಿಗೆ ಬರುತ್ತಾನೆ. ಎಲ್ಲರೂ ಅವರಿಗೆ ನಮಸ್ಕರಿಸುತ್ತಾರೆ. ಭೀಷರಿಗೂ ಅವರನ್ನು ಕಂಡು ಸಂತಸವಾಗುತ್ತದೆ. ಆಗ ಶ್ರೀಕೃಷ್ಣನು ಧರ್ಮರಾಜನಿಗೆ ಪಾಠ ಹೇಳಬೇಕು ಎಂದು ವಿನಂತಿಸುತ್ತಾನೆ. ಆಗ ಭೀಷರಲ್ಲಿ ಉಂಟಾಗಿರುವ ಮನೋಕ್ಲೇಶವನ್ನು ವಿವರಿಸುತ್ತಾನೆ. ನಾನು ಬಳಲಿದ್ದೇನೆ. ನೋವಿನಿಂದ ಒದ್ದಾಡುತ್ತಿದ್ದೇನೆ. ನೆನಪಿನ ಶಕ್ತಿ ಕಳೆದು ಹೋಗಿದೆ. ಇಲ್ಲಾ ಶ್ರೀ ಕೃಷ್ಣ ಪರಮಾತ ನಿನಗೆ ಗೊತ್ತಿಲ್ಲದಿರುವುದು ಏನಿದೆ… ನನ್ನ ದೇಹ ತುಂಡಾಗಿದೆ. ಧರ್ಮರಾಜನಿಗೆ ನೀನೇ ಹೇಳಬಹುದು ಅಲ್ಲವೇ? ಎಂದು ಪ್ರಶ್ನಿಸುತ್ತಾರೆ.
ಶ್ರೀಕೃಷ್ಣ ತನ್ನ ಹಸ್ತದಿಂದ ಅವರ ಮೈ ಮುಟ್ಟುತ್ತಾನೆ. ಕ್ಷಣಮಾತ್ರದಲ್ಲಿ ಭೀಷರಿಗಿದ್ದ ಎಲ್ಲಾ ನೋವುಗಳು ಮಾಯವಾಗುತ್ತವೆ. ದೇಹದಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತದೆ. ಶಕ್ತಿಯೂ ಬರುತ್ತದೆ. ನಿಮ ಒಳಗಿದ್ದು ನಾನು ನಿಮಿಂದಲೇ ಧರ್ಮರಾಜನಿಗೆ ಹಿತವಚನ ನುಡಿಸಬೇಕೆಂದು ಬಯಸುತ್ತೇನೆ.ಅನುಭವದ ಪಾಠ ಹಿರಿಯರಿಂದಲೇ ಮಕ್ಕಳಿಗೆ ಬರಬೇಕು. ಇದೇ ಜಗದ ನಿಯಮ ಎಂದು ಹೇಳುತ್ತಾನೆ. ಆಗ ಧರ್ಮರಾಜನ ಎಲ್ಲ ಪ್ರಶ್ನೆಗಳಿಗೂ ಭೀಷಾಚಾರ್ಯರು ಸಮರ್ಥ ಉತ್ತರ ನೀಡುತ್ತಾರೆ. ಆಗ ಬಂದ ಮಹತ್ ಕೃತಿಯೇ ವಿಷ್ಣು ಸಹಸ್ರನಾಮ ಗೀತೆ ಆಗಿದೆ. ಇದು ಮನಸ್ಸಿಗೆ ಕಡಿವಾಣ ಹಾಕುವ ಶ್ರೀ ಕೃಷ್ಣನ ದ್ವಿತೀಯ ಪ್ರಮುಖ ಘಟ್ಟವಾಗಿದೆ.ಮಹಾಭಾರತ ಯುದ್ಧ ಆದಮೇಲೆ ಕಲಿಯುಗ ಆರಂಭವಾಯಿತು.
ಕಲಿಯು ಆರಂಭವಾಗಿ ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಪಾಂಡವರು ರಾಜ್ಯ ಆಳುತ್ತಾರೆ. ಜೊತೆಯಲ್ಲಿ ಶ್ರೀಕೃಷ್ಣ ಪರಮಾತ ಇರುತ್ತಾನೆ. ಕಾಲಚಕ್ರ ಉರುಳಿದಂತೆ ಪರಿಸ್ಥಿತಿಯಲ್ಲಿ ಅನೇಕ ಬದಲಾವಣೆ ಬರುತ್ತದೆ. ದ್ವಾರಕಾ ಪಟ್ಟಣ ಮುಳುಗುವ ಪರಿಸ್ಥಿತಿ ಬರುತ್ತದೆ. ಶ್ರೀಕೃಷ್ಣ ಮತ್ತು ವಾತಾವರಣದ ಪ್ರತಿಕೂಲ ಪರಿಸ್ಥಿತಿಯನ್ನು ಗಮನಿಸುತ್ತಿದ್ದ ಯಾದವ ಮಂತ್ರಿ ಶ್ರೀ ಕೃಷ್ಣನ ಪರಮ ಭಕ್ತರಲ್ಲಿ ಒಬ್ಬನಾದ ಉದ್ಧವನು ಶ್ರೀ ಕೃಷ್ಣ ಪರಮಾತನಿಗೆ ಶರಣಾಗುತ್ತಾನೆ. ನನ್ನನ್ನು ನಿನ್ನ ಜೊತೆ ಕರೆದುಕೊಂಡು ಹೋಗಿ ರಕ್ಷಿಸು ಎಂದು ಕೇಳಿಕೊಳ್ಳುತ್ತಾನೆ. ಆಗ ಶ್ರೀ ಕೃಷ್ಣ ಹೇಳಿದ ಮಾತೇ ಇಂದು ಉದ್ಧವಗೀತೆ ಎಂದು ಕರೆಯುತ್ತಾರೆ. ಇದು ಮನಸ್ಸಿನ ಮೇಲೆ ಕಡಿವಾಣ ಹಾಕುವ ಮೂರನೇ ಹಾಗೂ ಕಡೆಯ ಕೃಷ್ಣನ ಸಂದೇಶ ಆಗಿದೆ.
ಮುಂದುವರಿಯುವುದು…
