ಬೆಂಗಳೂರು, ಸೆ,15- ಸಚಿವಸ್ಥಾನ ದೊರೆತರೂ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸದೇ ದಿನಕ್ಕೊಂದು ಉಡಾಫೆ ಹೇಳಿಕೆಗಳ ಮೂಲಕ ಬಸವರಾಜರಾಯ ರೆಡ್ಡಿ ವಿವಾದ ಸೃಷ್ಟಿಸಿ ಸರ್ಕಾರ ಮತ್ತು ಪಕ್ಷಕ್ಕೆ ತಲೆ ನೋವಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗಳು ಕೇಳಿ ಬರುತ್ತಿವೆ. ತಮ ಇಲಾಖೆಯಲ್ಲಿ 10 ಕೋಟಿ ರೂ.ಗಳ ಕೆಲಸವನ್ನು 3 ಪಟ್ಟು ದುಬಾರಿ ಮೊತ್ತಕ್ಕೆ ಟೆಂಡರ್ ನೀಡುತ್ತಿದ್ದರೂ ಕಂಡೂ ಕಾಣದಂತಿರುವ ಬಸವರಾಜ ರಾಯರೆಡ್ಡಿ, ಉಳಿದಂತೆ ಎಲ್ಲಾ ವಿಚಾರಗಳ ಬಗ್ಗೆಯೂ ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದಾರೆ ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ಬಸವರಾಜ ರಾಯರೆಡ್ಡಿಯವರ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಷ್ಟೇ ಅಲ್ಲದೇ ತಲೆ ನೋವು ತಂದಿಡುತ್ತಿದೆ. ಇತ್ತೀಚೆಗೆ ಮುಸ್ಲಿಂ ಧರ್ಮವೇ ಸರ್ವಶ್ರೇಷ್ಠ ಎಂದು ಹೇಳುವ ಮೂಲಕ ರಾಯರೆಡ್ಡಿ ವಿವಾದವನ್ನು ಹುಟ್ಟು ಹಾಕಿದ್ದರು. ಅನಂತರ ತಾವು ದೇವಸ್ಥಾನಕ್ಕೆ ಹೋಗುವುದಿಲ್ಲ ಎಂಬ ದಾರ್ಷ್ಟ್ಯದ ಹೇಳಿಕೆಗಳನ್ನು ನೀಡುವ ಮೂಲಕ ಭಾವನಾತಕ ಗೊಂದಲಗಳನ್ನು ಸೃಷ್ಟಿಸಿದ್ದರು.
ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಇನಾಮ್ ಮತ್ತು ವಕ್‌್ಫ ಆಸ್ತಿಗಳನ್ನು ಸರ್ಕಾರ ಬಳಸಿಕೊಳ್ಳಬಹುದು ಎಂಬ ಅನಗತ್ಯ ಹೇಳಿಕೆಯ ಮೂಲಕ ಕೆಲವರ ಕೆಂಗಂಣ್ಣಿಗೆ ಗುರಿಯಾಗಿದ್ದಾರೆ. ನನಗೂ ಬೆಂಗಳೂರಿನಲ್ಲಿ 2 ಎಕರೆ ಜಾಗಕೊಡಿ. ನಾನು ಬೇಕಾದರೆ ಪೂಜೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪೂಜೆ ಹಾಗೂ ಧಾರ್ಮಿಕ ಸೇವೆಯಲ್ಲಿರುವವರನ್ನು ರಾಯರೆಡ್ಡಿ ಅಗೌರವದಿಂದ ಕಾಣುವಂತಹ ಮನೋಧೋರಣೆಯನ್ನು ಹೊರ ಹಾಕಿದ್ದಾರೆ.
ಪ್ರಮುಖವಾಗಿ ಜನಸ್ಪಂದನ ಕಾರ್ಯಕ್ರಮದಲ್ಲಿ ಶೌಚಾಲಯ ಸಮಸ್ಯೆ ಬಗ್ಗೆ ಮಹಿಳೆಯೊಬ್ಬರು ಶಾಸಕರ ಗಮನ ಸೆಳೆದಾಗ ಸೂಕ್ಷ್ಮ ಸಂವೇದಿಯಾಗಿ ವರ್ತಿಸಬೇಕಿದ್ದ ಸಚಿವರು ಶೌಚಾಲಯ ನಿರ್ಮಾಣ ತಮ ಕೆಲಸವಲ್ಲ ಎಂಬ ಉದ್ಧಟತನದ ಉತ್ತರ ನೀಡಿದ್ದಾರೆ. ಸಾಲದೆಂಬಂತೆ ನಿಮಗೆ ಗೃಹ ಲಕ್ಷ್ಮಿಯ 2 ಸಾವಿರ ರೂ. ಮಾಸಾಶನ ಬರುತ್ತಿದೆಯಲ್ಲವೇ ಎಂಬ ವ್ಯಂಗ್ಯದ ಮಾತುಗಳ ಮೂಲಕ ಮಹಿಳಾ ಸಮುದಾಯವನ್ನು ಕೆರಳಿಸಿದ್ದಾರೆ.
ಸರ್ಕಾರಿ ನೌಕರರು ತಮ ಮಾತನ್ನು ಕೇಳದೆ ಇದ್ದರೆ ಕೆಲಸದಿಂದ ವಜಾ ಮಾಡುತ್ತೇನೆ ಎಂಬರ್ಥದ ಮಾತುಗಳು ರಾಯರೆಡ್ಡಿಯವರ ಅಣಿಮುತ್ತುಗಳಲ್ಲಿ ಸೇರಿವೆ. ತಹಶೀಲ್ದಾರ್ ತಮ ಸಾರ್ವಜನಿಕ ಸಂಪರ್ಕಾಧಿಕಾರಿ ರೀತಿ ವರ್ತಿಸಬೇಕು ಎಂಬ ಹೇಳಿಕೆಯ ಮೂಲಕ ರಾಯರೆಡ್ಡಿ ಸರ್ವಾಧಿಕಾರಿ ಮನಃಸ್ಥಿತಿಯನ್ನು ನೆನಪಿಸುವಂತೆ ಮಾಡಿದ್ದಾರೆ.
ತಾವು ಅತ್ಯಂತ ಹಿರಿಯರು, ಹೆಚ್ಚು ತಿಳವಳಿಕೆಯರು ಎಂಬ ಅತಿಯಾದ ಆತವಿಶ್ವಾಸದಲ್ಲಿ ಈ ಹಿಂದೆಯೂ ಹಲವು ಬಾರಿ ರಾಯರೆಡ್ಡಿ ಅಸಹನೆಯ ವಾತಾವರಣ ಮೂಡಿಸಿದ್ದಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರರಾಗಿದ್ದ ವೇಳೆ ಹಲವಾರು ಸಭೆಗಳಲ್ಲಿ, ವಿಧಾನ ಮಂಡಲ ಅಧಿವೇಶನಗಳಲ್ಲಿ ಮೂಗು ತೂರಿಸಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಲು ಹೋಗಿ ಬಹಿರಂಗ ವೇದಿಕೆಗಳಲ್ಲಿ ಛೀಮಾರಿ ಹಾಕಿಸಿಕೊಂಡ ಹಲವು ಸಂದರ್ಭಗಳಿವೆ. ವಿಧಾನಸಭೆಯಲ್ಲಿ ಆಗಿನ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ಸಿಡಿಮಿಡಿಗೂ ಕೆಲವು ಸಂದರ್ಭಗಳಲ್ಲಿ ಕಾರಣರಾಗುತ್ತಿದ್ದರು.
ಅಧಿಕಾರ ಹಂಚಿಯ ಪ್ರಹಸನದಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ಪದೇ ಪದೇ ಹೇಳಿಕೆ ನೀಡಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದ್ದರು. ಕೊನೆಗೆ ಸಿದ್ದರಾಮಯ್ಯ ಅವರ ಬೆನ್ನು ಬಿದ್ದು ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಸಚಿವ ಸ್ಥಾನದಲ್ಲಿ ಕೆಲಸ ಮಾಡುವುದಕ್ಕಿಂತಲೂ ಹೆಚ್ಚಿನದಾಗಿ ವಿವಾದಗಳ ಮೂಲಕವೇ ರಾಯರೆಡ್ಡಿ ಪ್ರಚಲಿತದಲ್ಲಿರುವುದು ಪಕ್ಷದ ನಾಯಕರಿಗಷ್ಟೇ ಅಲ್ಲ ಸಾರ್ವಜನಿಕರ ಚಡಪಡಿಕೆಗೂ ಕಾರಣವಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಣಿವರಿಯದೇ ಹಗಲು ರಾತ್ರಿ ಶ್ರಮಿಸಿ, ಉತ್ತಮ ಆಡಳಿತ ನೀಡಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಹರಸಾಹಸ ನಡೆಸುತ್ತಿದ್ದಾರೆ. ಆದರೆ ರಾಯರೆಡ್ಡಿ ಅವರ ಹೇಳಿಕೆಗಳು ಮತ್ತು ವಿವಾದಗಳು ಡಿ.ಕೆ.ಶಿವಕುಮಾರ್ ಮತ್ತು ಅವರ ಸಂಪುಟದ ಶ್ರಮವನ್ನು ನೀರಿನಲ್ಲಿ ಹುಣಿಸೆ ಹಣ್ಣು ತೊಳೆದಂತೆ ಮಾಡುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಇದೇ ರೀತಿ ಕೆಲವರು ಗೊಂದಲಕಾರಿ ಹೇಳಿಕೆಗಳ ಮೂಲಕ ಸಮಸ್ಯೆ ಸೃಷ್ಟಿಸುತ್ತಿದ್ದರು. ಈಗ ಬಸವರಾಜ ರಾಯರೆಡ್ಡಿ ಆ ಜವಾಬ್ದಾರಿಯನ್ನು ತೆಗೆದುಕೊಂಡಂತಿದೆ.
