ಮುಂಬೈ, ಸೆ.15- ಕೋಟ್ಯಧೀಶರಾಗಿರುವ ಮಹಾರಾಷ್ಟ್ರದ ಬಿಜೆಪಿ ಶಾಸಕ ಪರಾಗ್ ಶಾ ಅವರು ಒಂದು ದಿನ ಭಿಕ್ಷುಕನ ವೇಷ ಧರಿಸಿ ಜೀವನ ಕಳೆದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮಹಾರಾಷ್ಟ್ರದ ಘಾಟ್ಕೋಪರ್ ಪೂರ್ವ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ರಾಜ್ಯದ ಅತ್ಯಂತ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ ಪರಾಗ್ ಶಾ ಅವರು ಭಿಕ್ಷುಕನ ವೇಷ ಧರಿಸಿ ಘಾಟ್ಕೋಪರ್ನ ರಸ್ತೆಗಳಲ್ಲಿ ಕೆಲ ಗಂಟೆಗಳ ಕಾಲ ಓಡಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಜೈನ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಪರಾಗ್ ಶಾ ಅವರು ಒಂದು ದಿನ ಭಿಕ್ಷುಕನ ಜೀವನವನ್ನು ಅನುಭವಿಸಲು ಮುಂದಾಗಿದ್ದರು. ಪ್ರಸ್ತುತ ಜೈನ ಸಮುದಾಯದ ಚಾತುರ್ಮಾಸ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಗುರುಗಳು ಅವರಿಗೆ ಭಿಕ್ಷುಕನಾಗಿ ಒಂದು ದಿನ ಕಳೆಯುವ ಅನುಭವ ಪಡೆಯುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಗುರುಗಳ ಸಲಹೆಯನ್ನು ಪಾಲಿಸಿದ ಪರಾಗ್ ಶಾ ಅವರು ತಮ್ಮ ಭದ್ರತಾ ಸಿಬ್ಬಂದಿ, ಕಾರುಗಳು ಹಾಗೂ ದುಬಾರಿ ವಸ್ತುಗಳನ್ನೆಲ್ಲ ಬದಿಗಿಟ್ಟು ಭಿಕ್ಷುಕನ ವೇಷ ಧರಿಸಿದ್ದರು. ಬಳಿಕ ಘಾಟ್ಕೋಪರ್ನ ವಿವಿಧ ರಸ್ತೆಗಳಲ್ಲಿ ಸಾಮಾನ್ಯ ಭಿಕ್ಷುಕನಂತೆ ಓಡಾಡಿದರು. ರಸ್ತೆ ಬದಿಯಲ್ಲಿ ಭಿಕ್ಷುಕರಂತೆ ಕುಳಿತುಕೊಂಡು, ಭಿಕ್ಷೆಯಾಗಿ ದೊರೆತ ಆಹಾರವನ್ನೇ ಸೇವಿಸಿದರು.
ವಿಶೇಷವೆಂದರೆ, ಈ ವೇಳೆ ಅವರೊಂದಿಗೆ ಇದ್ದ ಬಹುತೇಕ ಜನರಿಗೆ ಅವರು ಪರಾಗ್ ಶಾ ಎಂಬುದು ತಿಳಿದಿರಲಿಲ್ಲ ಎನ್ನಲಾಗಿದೆ. ತಮ್ಮ ಗುರುಗಳ ಸಲಹೆಯಂತೆ ಭಿಕ್ಷುಕನ ಜೀವನವನ್ನು ಅನುಭವಿಸಿದ ಬಳಿಕ ಪರಾಗ್ ಶಾ ಅವರು ಈ ಅನುಭವವನ್ನು ಗುರುಗಳು ಹಾಗೂ ಇತರರೊಂದಿಗೆ ಹಂಚಿಕೊಂಡಿದ್ದಾರೆ.
ಇದರ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಪರಾಗ್ ಶಾ ಅವರು ಭಿಕ್ಷುಕನ ವೇಷದಲ್ಲಿದ್ದಾಗ ಭೇಟಿ ನೀಡಿದ್ದ ಕೆಲವು ಸ್ಥಳಗಳಿಗೆ ನಂತರ ತಮ್ಮ ನೈಜ ರೂಪದಲ್ಲಿಯೂ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ತಾವು ಭಿಕ್ಷುಕನ ವೇಷದಲ್ಲಿ ಬಂದಿದ್ದಾಗ ಜನರೊಂದಿಗೆ ನಡೆದ ಸಂಭಾಷಣೆ ಹಾಗೂ ಅನುಭವದ ಕುರಿತು ಮತ್ತೆ ಚರ್ಚಿಸಿದ್ದಾರೆ.
ಸಿನಿಮಾದ ದೃಶ್ಯವೊಂದನ್ನು ನೆನಪಿಸುವಂತಿರುವ ಈ ಪ್ರಸಂಗದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರಾಗ್ ಶಾ ಅವರ ಈ ವಿಭಿನ್ನ ಪ್ರಯತ್ನದ ಬಗ್ಗೆ ರಾಜಕೀಯ ವಲಯದಲ್ಲೂ ಚರ್ಚೆ ನಡೆಯುತ್ತಿದೆ.
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿದ್ದ ಚುನಾವಣಾ ಅಫಿಡವಿಟ್ನಲ್ಲಿ ಅವರು ₹3,383 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದರು. ಇದರೊಂದಿಗೆ ಅವರು ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ಚುನಾವಣಾ ಅಭ್ಯರ್ಥಿಗಳಲ್ಲಿ ಪ್ರಮುಖರಾಗಿದ್ದರು. ಐದು ವರ್ಷಗಳ ಹಿಂದೆ ಅವರ ಘೋಷಿತ ಆಸ್ತಿ ಸುಮಾರು ₹500 ಕೋಟಿಯಷ್ಟಿತ್ತು ಎಂದು ವರದಿಯಾಗಿದೆ.
ಪರಾಗ್ ಶಾ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ರಾಜಕೀಯ ಪ್ರವೇಶಕ್ಕೂ ಮುನ್ನ ಹಾಗೂ ನಂತರವೂ ಈ ಕ್ಷೇತ್ರದಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅವರು ಈ ಹಿಂದೆ ಮುಂಬೈ ಮಹಾನಗರ ಪಾಲಿಕೆಯ ನಗರಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ ಘಾಟ್ಕೋಪರ್ ಪೂರ್ವ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
