ಚಿಕ್ಕಮಗಳೂರು,ಜೂ.4-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಗಾಧವಾದ ರಾಜಕೀಯ ಅನುಭವವೂ ಇದೆ, ಹುರುಪೂ ಇದೆ. ಆದರೆ, ಕೊರತೆ ಇರುವುದು ಇಚ್ಛಾಶಕ್ತಿ ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.
ನೂತನ ಮುಖ್ಯಮಂತ್ರಿ ಪ್ರಮಾಣವಚನದ ಕುರಿತಂತೆ ಮಾಧ್ಯಮಗಳೊಡನೆ ಮಾತನಾಡಿದ ಅವರು ಡಿ.ಕೆ ಶಿವಕುಮಾರ್ ಅವರಿಗೆ ರಾಜ್ಯದ ಹಿತಾಸಕ್ತಿ ಆದ್ಯತೆಯ ವಿಷಯವಾಗಲಿ, ಅಭಿವೃದ್ಧಿಗೆ ಆದ್ಯತೆ ಸಿಗಲಿ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡುವ ದೂರದೃಷ್ಟಿಯ ಯೋಜನೆಗಳು ಜಾರಿಗೆ ಬರಲಿ. ಸಾಮಾಜಿಕ ಅನ್ಯಾಯ ಆಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ರಾಜಕೀಯ ಹಿತಾಸಕ್ತಿ ರಾಜ್ಯದ ಹಿತಾಸಕ್ತಿಯನ್ನು ಮೀರದೆ, ಅಭಿವೃದ್ಧಿ ಕಾರ್ಯಗಳಾಗಲಿ ಎಂದು ಹಾರೈಸಿದರು.ಕಾಂಗ್ರೆಸ್ ಪಾರ್ಟಿ ಎಲ್ಲಿಯವರೆಗೆ ತನ್ನ ನೀತಿಯನ್ನು ಬದಲಿಸಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ತುಷ್ಟೀಕರಣದ ರಾಜಕಾರಣ ಮುಂದುವರೆಯುತ್ತದೆ.ಹಣವೇ ಪ್ರಧಾನವಾದಾಗ ಆಡಳಿತದಲ್ಲಿ ಬಿಗಿ ತಪ್ಪುತ್ತದೆ. ಹಾಗಾಗದಂತೆ ಎಚ್ಚರ ವಹಿಸಿ ಜನ ಮನ್ನಣೆಯನ್ನು ಪಡೆಯಲಿ ಎಂದು ಹಾರೈಸುತ್ತೇನೆ ಎಂದರು.
ದೇವರು ಶಿವಕುಮಾರ್ ಅವರಿಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಇನ್ನು ಅವರು ವೈಯಕ್ತಿಕ ಹಿತಾಸಕ್ತಿಯ ರಕ್ಷಣೆಗೆ ಏನೂ ಮಾಡಬೇಕಾಗಿಲ್ಲ. ಈಗ ಅವರು ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ಆದ್ಯತೆ ಕೊಡಬೇಕು.
ಸಾಮಾಜಿಕ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು, ಸಣ್ಣ ಸಣ್ಣ ಸಮುದಾಯಗಳಿಗೂ ಕೂಡ ವಿಶ್ವಾಸ ಮೂಡಿಸುವ ಕೆಲಸ ಆಗಬೇಕು.ಭ್ರಷ್ಟಾಚಾರ ಮುಕ್ತ ಆಡಳಿತ ಬರಬೇಕು ಎನ್ನುವುದು ರಾಜ್ಯದ ಜನರ ಬಯಕೆ.ಮುಂದಿನ ಎರಡು ವಷರ್ದಲ್ಲಿ ಒಳ್ಳೆಯ ದಾರಿಗೆ ತೆಗೆದುಕೊಂಡು ಹೋಗುತ್ತಾರಾ ಎನ್ನುವುದು ನಮೆಲ್ಲರ ಮನಸ್ಸಿನಲ್ಲಿರುವಂತಹ ಪ್ರಶ್ನೆಯಾಗಿದ್ದು, ಮುಂದಿನದ್ದನ್ನು ಕಾದು ನೋಡೋಣ ಎಂದರು.
