ಬಿಷ್ಕೇಕ್ (ಕಿರ್ಗಿಸ್ತಾನ್ ಗಣರಾಜ್ಯ), ಜೂ.4-ಕೈಗಾರಿಕೋತ್ಪಾದನೆ ವಲಯದಲ್ಲಿ ಪರಸ್ಪರ ಸಹಕಾರ ಹೊಂದುವ ನಿಟ್ಟಿನಲ್ಲಿ ಬಿಷ್ಕೇಕ್ಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಿರ್ಗಿಸ್ತಾನ್ ಗಣರಾಜ್ಯದ ಆರ್ಥಿಕ ಮತ್ತು ವಾಣಿಜ್ಯ ಸಚಿವ ಬಕಿತ್ ಸಿಡಿಕೋವ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಭಾರತ ಮತ್ತು ಕಿರ್ಗಿಸ್ತಾನ್ ನಡುವೆ ಕೈಗಾರಿಕಾ ಸಂಬಂಧಗಳನ್ನು ಮತ್ತಷ್ಟು ದೃಢಗೊಳಿಸುವ ನಿಟ್ಟಿನಲ್ಲಿ ಇಬ್ಬರೂ ಸಚಿವರು ಉಭಯ ದೇಶಗಳ ನಡುವೆ ಆರ್ಥಿಕ ತೊಡಗಿಸಿಕೊಳ್ಳುವಿಕೆ, ಕೈಗಾರಿಕಾ ಸಹಕಾರ ಮತ್ತು ವ್ಯಾಪಾರ ಪಾಲುದಾರಿಕೆಯನ್ನು ಗಾಢಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.
ಶಾಂಘೈ ಸಹಕಾರ ಸಂಸ್ಥೆಯ ಕೈಗಾರಿಕಾ ಸಚಿವರ 4ನೇ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಈ ಸಭೆಯು ಭಾರತ-ಕಿರ್ಗಿಸ್ತಾನ್ ಸಂಬಂಧಗಳಲ್ಲಿ ಆಗುತ್ತಿರುವ ಮುನ್ನಡೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಾಗೂ ಮಧ್ಯ ಏಷ್ಯಾ ಭಾಗದಲ್ಲಿ ತನ್ನ ಆರ್ಥಿಕ ಹೆಜ್ಜೆಗುರುತನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಕಿರ್ಗೀಜ್ ಸಚಿವರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದರು.
ಈ ಚರ್ಚೆಯ ಸಮಯದಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಬಲಪಡಿಸುವುದು, ಕೈಗಾರಿಕಾ ಸಹಕಾರವನ್ನು ವೃದ್ಧಿಸುವುದು, ಹೂಡಿಕೆ ಅವಕಾಶಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುವುದು ಮತ್ತು ಎರಡೂ ದೇಶಗಳ ವ್ಯವಹಾರಗಳು ಮತ್ತು ಉತ್ಪಾದನಾ ವಲಯಗಳ ನಡುವೆ ಹೆಚ್ಚಿನ ಸಹಯೋಗವನ್ನು ಉತ್ತೇಜಿಸುವ ಕುರಿತು ಸಚಿವರಿಬ್ಬರೂ ಮಾತುಕತೆ ನಡೆಸಿದರು.
ಅಲ್ಲದೆ, ಪರಸ್ಪರ ಪ್ರಯೋಜನಕಾರಿ ಆರ್ಥಿಕ ಪಾಲುದಾರಿಕೆಗಳನ್ನು ಸೃಷ್ಟಿಸಲು ಭಾರತ ಮತ್ತು ಕಿರ್ಗಿಸ್ತಾನ್ನ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಅವಕಾಶಗಳನ್ನು ಅವರು ಈ ಸಮಾಲೋಚನೆಯಲ್ಲಿ ಅನ್ವೇಷಿಸಿದರು. ಯುರೇಷಿಯಾ (ಏಷ್ಯಾ-ಯುರೋಪ್) ಭಾಗದಲ್ಲಿ ಬಲವಾದ ಪ್ರಾದೇಶಿಕ ಸಹಕಾರ, ಆರ್ಥಿಕ ಒಗ್ಗೂಡುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ನಿರಂತರವಾಗಿ ಪ್ರತಿಪಾದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಶಾಂಘೈ ಸಹಕಾರ ಸಂಸ್ಥೆ ಸದಸ್ಯ ರಾಷ್ಟ್ರಗಳೊಂದಿಗೆ ತನ್ನ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುತ್ತಿರುವುದರಿಂದ ಈ ಸಭೆ ಮಹತ್ವದ್ದಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ಶಾಂಘೈ ಸಹಕಾರ ಸಂಸ್ಥೆ ಚೌಕಟ್ಟಿನೊಳಗೆ ಭಾರತದ ಆದ್ಯತೆಗಳನ್ನು ಪ್ರಬಲವಾಗಿ ಪ್ರತಿಪಾದಿಸಿದ ಕೇಂದ್ರ ಸಚಿವರು, ಭದ್ರತೆ, ಆರ್ಥಿಕ ಅಭಿವೃದ್ಧಿ, ಸಂಪರ್ಕ, ಏಕತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಪರಿಸರ ಸಂರಕ್ಷಣೆಯನ್ನು ಒಳಗೊಂಡ ಸುರಕ್ಷಿತ ಶಾಂಘೈ ಸಹಕಾರ ಸಂಸ್ಥೆ ಅಗತ್ಯತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವಾಗಿದೆ ಎಂಬ ಅಂಶವನ್ನು ಪ್ರಮುಖವಾಗಿ ಪ್ರತಿಪಾದಿಸಿದರು.
ಉನ್ನತ ನಿಯೋಗವನ್ನು ಒಳಗೊಂಡ ಈ ಸಭೆಯಲ್ಲಿ ಸಚಿವ ಕುಮಾರಸ್ವಾಮಿ ಅವರೊಂದಿಗೆ ಕಿರ್ಗಿಸ್ತಾನ್ ಗಣರಾಜ್ಯದ ಭಾರತದ ರಾಯಭಾರಿ ಬೀರೇಂದರ್ ಸಿಂಗ್ ಯಾದವ್ ಭಾಗಿಯಾಗಿದ್ದರು.
