ಬೆಂಗಳೂರು, ಜೂ. 4- ಮುಂದಿನ 15 ದಿನಗಳ ಒಳಗಾಗಿ ಎರಡನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿ 14 ಮಂದಿ ಸಂಪುಟ ಸೇರಿದ್ದಾರೆ. ಇನ್ನೂ 20 ಸ್ಥಾನಗಳು ಖಾಲಿ ಇವೆ. ಅವುಗಳಿಗೆ 15 ರಿಂದ 20 ದಿನಗಳ ಒಳಗಾಗಿ ಸಚಿವರನ್ನು ನಿಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ.
ಕಳೆದ ವಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಾಗಿವೆ. ಸುಧೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಹೈಕಮಾಂಡ್‌ನ ಸೂಚನೆ ಮೇರೆಗೆ ದಿಢೀರ್ ರಾಜೀನಾಮೆ ನೀಡಿದ್ದರು. ಶಾಸಕಾಂಗ ಪಕ್ಷದ ನಾಯಕನನ್ನಾಗಿ ಡಿ.ಕೆ.ಶಿವಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.
ಆ ನಂತರ 14 ಮಂದಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದೆ.
ವಿಧಾನ ಸಭೆಯ ಅಧ್ಯಕ್ಷರಾಗಿದ್ದ ಯು.ಟಿ.ಖಾದರ್ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಿನ್ನೆ ಸಚಿವ ಸಂಪುಟಕ್ಕೆ ಸೇರಿದ್ದಾರೆ. ವಿಧಾನ ಸಭೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಬೇಕಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ನ ನಾಲ್ಕು ಸದಸ್ಯರ ಆಯ್ಕೆಗಾಗಿ ಜೂನ್ 18ರಂದು ನಡೆಯುವ ಚುನಾವಣೆಗಾಗಿ ನಾಲ್ವರ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ನಿನ್ನೆಯೇ ಘೋಷಿಸಿದೆ.
ಈ ಎಲ್ಲಾ ದಿಢೀರ್ ಬೆಳವಣಿಗೆಗಳಂತೆ ಸಂಪುಟದ ಖಾಲಿ ಇರುವ ಹುದ್ದೆಗಳಿಗೂ ಶೀಘ್ರದಲ್ಲೇ ನೇಮಕಾತಿಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಇನ್ನೆರಡು ತಿಂಗಳ ಒಳಗಾಗಿ ಮಳೆಗಾಲದ ವಿಧಾನಮಂಡಲದ ಅಧಿವೇಶನ ನಡೆಸಬೇಕಿದೆ. ಆ ವೇಳೆಗೆ ಪೂರ್ಣ ಪ್ರಮಾಣದ ಸಂಪುಟ ರಚಿಸುವುದು ಮುಖ್ಯಮಂತ್ರಿಯವರ ಇರಾದೆಯಾಗಿದೆ.
ವಿಧಾನಸಭೆ ಮತ್ತು ರಾಜ್ಯಸಭೆಗೆ ಸದಸ್ಯರ ಆಯ್ಕೆಗೆ ಚುನಾವಣೆಯ ಬಳಿಕ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಬಿ.ಕೆ.ಹರಿಪ್ರಸಾದ್ ಮತ್ತೊಮೆ ದೆಹಲಿಗೆ ಭೇಟಿ ನೀಡಲಿದ್ದು, ಸಂಪುಟ ವಿಸ್ತರಣೆೆ, ನಿಗಮ ಮಂಡಳಿಗಳ ಕುರಿತಂತೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.
ಎರಡನೇ ಹಂತದ ಸಂಪುಟ ರಚನೆಯ ವೇಳೆ ಯುವ ಉತ್ಸಾಹಿಗಳಿಗೆ ಮಣೆ ಹಾಕಲಾಗುತ್ತದೆ. ಡಿ.ಕೆ.ಶಿವಕುಮಾರ್ ಅವರು ತಮದೇ ಆದ ಸಂಪುಟದ ತಂಡವನ್ನು ಕಟ್ಟಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
