ಬೆಂಗಳೂರು, ಜೂ. 5- ರಾಜೀನಾಮೆ ನೀಡಲು ನಿರ್ಧರಿಸಿದ ಬಳಿಕ ಸಚಿವ ರಾಮಲಿಂಗಾರೆಡ್ಡಿ ಸಂಧಾನ ಮಾತುಕತೆಗಳಿಗೆ ಒಪ್ಪದೇ ಬೆಂಬಲಿಗರೊಂದಿಗೆ ನಿಷ್ಠೂರವಾಗಿ ನಡೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಿನ್ನೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಯತ್ನಿಸಿದರು. ಆದರೆ ಅದಕ್ಕೆ ಮುಖ್ಯಮಂತ್ರಿಯವರು ಆಸ್ಪದ ನೀಡದೇ ತಮ ಎಂದಿನ ಶೈಲಿಯಲ್ಲಿ ರಾಜೀನಾಮೆಯನ್ನು ತಳ್ಳಿ ಹಾಕಿದರು.
ನಿನ್ನೆಯಿಂದ ಅಂತರ್ಮುಖಿಯಾಗಿದ್ದ ರಾಮಲಿಂಗಾರೆಡ್ಡಿಯವರು ಇಂದು ಬೆಳಗ್ಗೆ ಕೋರಮಂಗಲದ ಶಾಸಕರ ಕಚೇರಿಯಲ್ಲಿ ರಾಜೀನಾಮೆಯನ್ನು ಘೋಷಿಸಲು ತುರ್ತು ಪತ್ರಿಕಾಗೋಷ್ಠಿ ಕರೆದಿದ್ದರು. ಇದಕ್ಕೂ ಮೊದಲು ಎಐಸಿಸಿ ಕಾರ್ಯದರ್ಶಿ ಅಭಿಷೇಕ್ದತ್ತ, ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಜಗ್ಗದ ಅವರು ರಾಜೀನಾಮೆಯ ನಿರ್ಧಾರ ಅಚಲ ಎಂದು ಪಟ್ಟು ಹಿಡಿದಿದ್ದಾರೆ.
ಪತ್ರಿಕಾ ಗೋಷ್ಠಿ ಆರಂಭಕ್ಕೂ ಮುನ್ನ ಕಾಂಗ್ರೆಸ್ ನಾಯಕರಾದ ಮಂಜುನಾಥ್ ರೆಡ್ಡಿ, ಎಸ್.ಮನೋಹರ್, ಉದಯ್ಶಂಕರ್ ಸೇರಿದಂತೆ ಹಲವಾರು ಮಂದಿ ಪತ್ರಿಕಾಗೋಷ್ಠಿ ಬೇಡ, ಹೈಕಮಾಂಡ್ ನಾಯಕರ ಜೊತೆ ಮಾತನಾಡಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.
ಆಗ ನಿಷ್ಠೂರವಾಗಿ ನಡೆದುಕೊಂಡ ರಾಮಲಿಂಗಾರೆಡ್ಡಿ ತಾವು ಯಾರ ಜೊತೆಗೂ ಮಾತನಾಡುವುದಿಲ್ಲ, ಯಾವ ಸಂಧಾನವೂ ಬೇಡ. ಈ ಬಗ್ಗೆ ಪ್ರಯತ್ನ ಮಾಡುವವರು ಹೊರ ಹೋಗಿ, ನಾನು ಏಕಾಂಗಿಯಾಗಿಯೇ ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಖಾರವಾಗಿ ಹೇಳಿದ್ದಾರೆ.
ಪಕ್ಷದ ಅಧ್ಯಕ್ಷರೇ ನಿಮೊಂದಿಗೆ ಮಾತನಾಡುತ್ತಾರೆ ಎಂದು ಹೇಳಿದಾಗ, ಅದಕ್ಕೂ ಸಿಡಿಮಿಡಿಯಾದ ರಾಮಲಿಂಗಾರೆಡ್ಡಿಯವರು ತಾವು ಯಾರೊಂದಿಗೂ ಮಾತನಾಡುವುದಿಲ್ಲ ನನಗೆ ಕೋಪ ಬರುವಂತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ ಎಂದು ಬೆಂಬಲಿಗರು ಒತ್ತಾಯ ಮಾಡಿದ್ದು, ರಾಮಲಿಂಗಾರೆಡ್ಡಿ ಅವರ ಕಾರಿಗೆ ಅಡ್ಡಲಾಗಿ ಮಲಗಿ ಹೈಡ್ರಾಮ ಸೃಷ್ಟಿಸಿದ್ದಾರೆ. ಸಚಿವರಾದ ಎರಡೇ ದಿನದಲ್ಲಿ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ನಲ್ಲಿ ಸ್ಫೋಟಕ ಬೆಳವಣಿಗೆಗೆ ಕಾರಣವಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಬೆಂಗಳೂರಿಗೆ ಆಗಮಿಸುತ್ತಿರುವ ಸಂದರ್ಭದಲ್ಲೇ ರಾಮಲಿಂಗರೆಡ್ಡಿ ಅವರ ರಾಜೀನಾಮೆ ಪ್ರಹಸನ ಮುಜುಗರ ಉಂಟು ಮಾಡಿದೆ.
