ಬೆಂಗಳೂರು,ಜೂ.5- ನಗರದಲ್ಲಿ ಕೇರಳ ಲಾಟರಿ ಹೆಸರಿನಲ್ಲಿ ಹೊಸ ಸೈಬರ್ ವಂಚನೆ ಬೆಳಕಿಗೆ ಬಂದಿದ್ದು, ಇಬ್ಬರು ನಾಗರಿಕರು 13.71 ಲಕ್ಷ ಹಣ ಕಳೆದುಕೊಂಡಿದ್ದಾರೆ.ಸೈಬರ್ ವಂಚಕರು ಒಂದಲ್ಲಾ ಒಂದು ರೀತಿ ಮೋಸ ಮಾಡುವ ದಾರಿ ಹುಡುಕುತ್ತಿದ್ದಾರೆ. ಆ ದಾರಿಯಲ್ಲಿ ಅಮಾಯಕರು ಸಿಕ್ಕಿಕೊಂಡು ಲಕ್ಷಾಂತರ ಹಣ ಕಳೆದುಕೊಂಡು ಇದೀಗ ಕಂಗಾಲಾಗಿದ್ದಾರೆ.
ಇದುವರೆಗೂ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಣ ದೋಚುತ್ತಿದ್ದರು. ಇದೀಗ ಆ ಬಗ್ಗೆ ನಗರ ಪೊಲೀಸರು ಜಾಗೃತಿ ವಹಿಸುವಂತೆ ಮನವಿ ಮಾಡಿದ್ದು, ಆ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಇದೀಗ ಸೈಬರ್ ವಂಚಕರು ಮತ್ತೊಂದು ಆಮಿಷವೊಡ್ಡುತ್ತಿದ್ದಾರೆ.
ನಗರದ ವಲಗೇರಹಳ್ಳಿಯ ಅರವತ್ತು ವರ್ಷದ ಎನ್‌ಜಿಓ ಉದ್ಯೋಗಿಯೊಬ್ಬರು 7.45 ಲಕ್ಷ ರೂ. ಹಾಗೂ ಮಾರುತಿನಗರದ ಐವತ್ತೆರಡು ವರ್ಷದ ರೈತರೊಬ್ಬರು ಕೇರಳ ಲಾಟರಿ ಹೆಸರಿನಲ್ಲಿ ಲಕ್ಷಾಂತರ ಹಣ ಬಂದಿದೆ ಎಂದು ವಂಚಕರ ಮಾತಿಗೆ ಮರುಳಾಗಿ 6.26 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಂಚಕರು ವಾಟ್ಸಪ್ ಮೂಲಕ ಕರೆ ಮಾಡಿ ನಿಮಗೆ ಕೇರಳ ಲಾಟರಿಯಲ್ಲಿ 8 ಲಕ್ಷ ಬಂದಿದೆ ಎಂದು ನಂಬಿಸಿದ್ದಾರೆ.ಲಾಟರಿ ಬಂದಿರುವುದನ್ನು ಖಚಿತ ಪಡಿಸಿಕೊಳ್ಳಲು ವಂಚಕರು ನಕಲಿ ವೆಬ್‌ಸೈಟ್ ಕಳುಹಿಸಿದ್ದಾರೆ. ಈ ಇಬ್ಬರು ಲಿಂಕ್ ಓಪನ್ ಮಾಡಿದಾಗ ಲಾಟರಿ ಗೆದ್ದಿರುವಂತೆ ನಕಲಿಯಾಗಿ ಎಡಿಟ್ ಮಾಡಿರುವುದನ್ನು ತೋರಿಸಿದೆ.
ಇವರಿಬ್ಬರ ನಂಬಿಕೆ ಗಳಿಸಲು ಆರ್‌ಬಿಐ ಹೆಸರಿನ ನಕಲಿ ಪತ್ರಗಳನ್ನು ಕಳುಹಿಸಿದ್ದಾರೆ. ನಂತರ ಜಿಎಸ್‌ಟಿ , ಟಿಡಿಎಸ್ ಆದಾಯ ತೆರಿಗೆ ಪಾವತಿಸುವಂತೆ ಹೇಳಿ ಹಂತ ಹಂತವಾಗಿ ಲಕ್ಷಾಂತರ ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಹಿಸಿಕೊಂಡು ನಂತರ ಇವರಿಬ್ಬರ ಸಂಪರ್ಕಕ್ಕೆ ಸಿಕ್ಕಿಲ್ಲ.
ತದ ನಂತರ ತಾವು ಮೋಸ ಹೋಗಿರುವುದಾಗಿ ಅರಿತು ನಗರದ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.ಎಚ್ಚರಿಕೆ: ಕರ್ನಾಟಕದಲ್ಲಿ ಈಗಾಗಲೇ ಲಾಟರಿಯನ್ನು ನಿಷೇಧಿಸಿದ್ದರೂ ನಾಗರಿಕರಿಗೆ ಲಾಟರಿ ವ್ಯಾಮೋಹ ಹೋಗಿಲ್ಲ.
ಕೇರಳ ಸರ್ಕಾರದ ಲಾಟರಿ ಟಿಕೆಟ್‌ಗಳು ಕಾಗದದ ರೂಪದಲ್ಲಿರುತ್ತವೆ. ಎಂದಿಗೂ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಿಲ್ಲ. ಹೀಗಾಗಿ ಇಂತಹ ಆನ್‌ಲೈನ್ ಲಾಟರಿ ಆಮಿಷಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕೆಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.
