Homeರಾಷ್ಟ್ರೀಯಬಿಜೆಪಿಯಿಂದ ಅಧಿಕೃತವಾಗಿ ದೂರವಾದ ಅಣ್ಣಾಮಲೈ, ಹೊಸ ಪಕ್ಷ ಕಟ್ಟಲು ತಯಾರಿ

ಬಿಜೆಪಿಯಿಂದ ಅಧಿಕೃತವಾಗಿ ದೂರವಾದ ಅಣ್ಣಾಮಲೈ, ಹೊಸ ಪಕ್ಷ ಕಟ್ಟಲು ತಯಾರಿ

Annamalai officially distances himself from BJP, prepares to form a new party

ನವದೆಹಲಿ, ಜೂ.5- ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಷ್ಟ್ರಾಧ್ಯಕ್ಷ ನಿತಿನ್‌ ನಬೀನ್‌ ಅವರು ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದರೊಂದಿಗೆ ಅಣ್ಣಾಮಲೈ ಅವರ ಬಿಜೆಪಿಯೊಂದಿಗಿನ ದೀರ್ಘಕಾಲದ ಸಂಬಂಧವು ಇಂದು ಅಧಿಕೃತವಾಗಿ ಕೊನೆಗೊಂಡಿದೆ.

ತಮಿಳುನಾಡು ರಾಜಕೀಯದಲ್ಲಿ ಹಲವು ದಿನಗಳಿಂದ ತೀವ್ರ ಊಹಾಪೋಹಗಳು ಹರಿದಾಡುತ್ತಿದ್ದ ವಿಷಯಕ್ಕೆ ಅಂತಿಮ ತೆರೆ ಬಿದ್ದಿದೆ. ಹಿರಿಯ ನಾಯಕ ಕೆ. ಅಣ್ಣಾಮಲೈ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಹೈಕಮಾಂಡ್‌ ದೃಢಪಡಿಸಿದೆ.
ರಾಜೀನಾಮೆ ಅಂಗೀಕೃತವಾದ ಬೆನ್ನಲ್ಲೇ ಅಣ್ಣಾಮಲೈ ಅವರು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ತಮ ಭವಿಷ್ಯದ ಯೋಜನೆಗಳನ್ನು ಪ್ರಕಟಿಸಲಿದ್ದಾರೆ. ಈ ಸಭೆಯಲ್ಲಿ ಅವರು ತಮ ಮುಂದಿನ ರಾಜಕೀಯ ಪಥವನ್ನು ಸ್ಪಷ್ಟಪಡಿಸುವ ಸಾಧ್ಯತೆ ಇದೆ.

ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿಯನ್ನು ಬಲಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಅವರ ನಾಯಕತ್ವದಲ್ಲಿ ಪಕ್ಷವು ರಾಜ್ಯದಲ್ಲಿ ಗಣನೀಯ ಬೆಳವಣಿಗೆ ಕಂಡಿತ್ತು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಪಕ್ಷದ ಒಳಗಿನ ಮತ್ತು ಹೈಕಮಾಂಡ್‌ನೊಂದಿಗಿನ ಅಸಮಾಧಾನಗಳು ಹೆಚ್ಚಾಗಿದ್ದವು ಎಂದು ಮೂಲಗಳು ತಿಳಿಸಿವೆ.

ಈ ರಾಜೀನಾಮೆಯು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಭೂಕಂಪವನ್ನು ಸೃಷ್ಟಿಸಿದೆ. ಬಿಜೆಪಿ ನಾಯಕರು ಈ ಬಗ್ಗೆ ಇನ್ನೂ ವಿವರವಾದ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಣ್ಣಾಮಲೈ ಅವರ ರಾಜೀನಾಮೆಯು ಪಕ್ಷದ ತಮಿಳುನಾಡು ಘಟಕದಲ್ಲಿ ಗೊಂದಲಕ್ಕೆ ಕಾರಣವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಅಣ್ಣಾಮಲೈ ಅವರು ಐಪಿಎಸ್‌‍ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಂತರ ರಾಜಕೀಯಕ್ಕೆ ಬಂದವರು. ಅವರ ಆಕ್ರಮಣಕಾರಿ ನಾಯಕತ್ವ ಮತ್ತು ನೇರ ಮಾತುಗಾರಿಕೆಗೆ ರಾಜ್ಯದಲ್ಲಿ ದೊಡ್ಡ ಬೆಂಬಲವಿದೆ. ರಾಜೀನಾಮೆಯ ನಂತರ ಅವರು ಸ್ವತಂತ್ರವಾಗಿ ಅಥವಾ ಬೇರೆ ಯಾವುದೇ ಪಕ್ಷದೊಂದಿಗೆ ಸೇರಿ ರಾಜಕೀಯವನ್ನು ಮುಂದುವರಿಸುವ ಸಾಧ್ಯತೆ ಇದೆ ಎಂದು ಊಹಿಸಲಾಗುತ್ತಿದೆ.

ಈ ಬೆಳವಣಿಗೆಯು 2026ರ ತಮಿಳುನಾಡು ರಾಜಕೀಯದಲ್ಲಿ ಹೊಸ ಸಮೀಕರಣಗಳನ್ನು ರೂಪಿಸುವ ಸಾಧ್ಯತೆ ಇದೆ. ಅಣ್ಣಾಮಲೈ ಅವರ ರಾಜೀನಾಮೆಗೆ ಕಾರಣ?: ಬಿಜೆಪಿಯು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಣ್ಣಾಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವುದು ಅಣ್ಣಾಮಲೈಗೆ ಇಷ್ಟವಿರಲಿಲ್ಲ. ಕಳೆದ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಬೇಕು ಎಂಬುದು ಅವರ ಆಶಯವಾಗಿತ್ತು. ಆದರೂ ಬಿಜೆಪಿ-ಅಣ್ಣಾ ಡಿಎಂಕೆ ಮೈತ್ರಿ ಮಾಡಿಕೊಂಡಿತು. ಅಲ್ಲಿಂದಲೇ ಬಿರುಕು ಆರಂಭವಾಯಿತು. ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರು. ಪಕ್ಷದಲ್ಲಿ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಇತ್ತೀಚೆಗೆ ಕೇಂದ್ರದ ತ್ರಿಭಾಷಾ ಸೂತ್ರವನ್ನೂ ಅವರು ವಿರೋಧಿಸಿ, ಬಿಜಿಪೆ ಜೊತೆಗಿನ ಮುನಿಸನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. ಅಣ್ಣಾಮಲೈ ಸದ್ಯ ರಾಜಕೀಯೇತರ ಚಳವಳಿಯೊಂದನ್ನು ಆರಂಭಿಸಲಿದ್ದಾರೆ. ರಾಷ್ಟ್ರೀಯತೆ ಮತ್ತು ತಮಿಳು ತತ್ವಶಾಸ್ತ್ರದ ಸಿದ್ಧಾಂತದ ಮೇಲೆ ಅದು ಕೆಲಸ ಮಾಡಲಿದೆ. ಮುಂದೆ ಅದನ್ನೇ ರಾಜಕೀಯ ಪಕ್ಷವಾಗಿ ಪರಿವರ್ತಿಸಲಿದ್ದಾರೆ ಎನ್ನಲಾಗಿದೆ.

RELATED ARTICLES

Latest News