Homeರಾಷ್ಟ್ರೀಯಅಣ್ಣಾಮಲೈ ಆಂದೋಲನಕ್ಕೆ ಕೈಜೋಡಿಸಿದ ದಾಖಲೆಯ ಸುಮಾರು 14 ಲಕ್ಷ ಸದಸ್ಯರು

ಅಣ್ಣಾಮಲೈ ಆಂದೋಲನಕ್ಕೆ ಕೈಜೋಡಿಸಿದ ದಾಖಲೆಯ ಸುಮಾರು 14 ಲಕ್ಷ ಸದಸ್ಯರು

Annamalai's new movement draws 14 lakh sign-ups in 24 hours

ಚೆನ್ನೈ, ಜೂ.7- ಬಿಜೆಪಿ ತೊರೆದ ಅಣ್ಣಾಮಲೈ ಅವರಿಗೆ ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಜನಬೆಂಬಲ ದೊರಕಿದೆ. ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ ಕೇವಲ 24 ಗಂಟೆಗಳ ಅವಧಿಯಲ್ಲೇ ಅಣ್ಣಾಮಲೈ ಅವರು ಆರಂಭಿಸಿರುವ ಹೊಸ ರಾಜಕೀಯ ಆಂದೋಲನಕ್ಕೆ ಬರೋಬ್ಬರಿ 13,85,763 (ಸುಮಾರು 14 ಲಕ್ಷ) ನಾಗರಿಕರು ಸಕ್ರಿಯ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ.

ಅಣ್ಣಾಮಲೈ ಅವರ ಆಂದೋಲನಕ್ಕೆ ಯುವಕರು ಮತ್ತು ಸಾಮಾನ್ಯ ನಾಗರಿಕರು ಸ್ವಯಂಪ್ರೇರಿತವಾಗಿ ಹರಿದುಬರುತ್ತಿರುವುದು ದಕ್ಷಿಣ ಭಾರತದ ರಾಜಕಾರಣದಲ್ಲಿ ಹೊಸ ಪ್ರಜಾಪ್ರಭುತ್ವದ ಅಲೆಯ ಸಂಕೇತ ಎಂದೇ ಬಿಂಬಿಸಲಾಗುತ್ತಿದೆ.

ಸೌಹಾರ್ದಯುತ ನಿರ್ಗಮನ ಮತ್ತು ಹೊಸ ದೃಷ್ಟಿಕೋನ ಕಳೆದ 18 ತಿಂಗಳಿನಿಂದ ತಮಿಳುನಾಡಿನ ಸಾಂಸ್ಕೃತಿಕ ಹಾಗೂ ಪ್ರಗತಿಪರ ರಾಜಕೀಯದ ಕುರಿತು ಹೈಕಮಾಂಡ್‌ನೊಂದಿಗೆ ಚರ್ಚಿಸಿದ್ದ ಅಣ್ಣಾಮಲೈ, ಉನ್ನತ ನಾಯಕತ್ವಕ್ಕೆ ಯಾವುದೇ ಹೊರೆಯಾಗಬಾರದೆಂಬ ಕಾರಣಕ್ಕೆ ಮುಕ್ತವಾಗಿ ಹೊರಬಂದಿದ್ದಾರೆ.

ರಾಜೀನಾಮೆಯನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಗೌರವಯುತವಾಗಿ ಅಂಗೀಕರಿಸಿದ್ದಾರೆ.ತಮಿಳುನಾಡಿನ ಸರ್ವತೋಮುಖ ಬೆಳವಣಿಗೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ನನ್ನ ಆಲೋಚನೆಗಳಿಗಾಗಿ ಈ ಹೆಜ್ಜೆ ಇಟ್ಟಿದ್ದೇನೆ. ಉನ್ನತ ನಾಯಕರೊಂದಿಗೆ ಸಮಾಲೋಚಿಸಿಯೇ ಸೌಹಾರ್ದಯುತವಾಗಿ ಈ ಸ್ವತಂತ್ರ ಹಾದಿಯನ್ನು ಆಯ್ದುಕೊಂಡಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಅಣ್ಣಾಮಲೈ ಅವರ ಕರೆಗೆ ಸಿಕ್ಕ ಅಭೂತಪೂರ್ವ ಸ್ಪಂದನೆಯಿಂದಾಗಿ ಅವರ ಆಂದೋಲನದ ಅಧಿಕೃತ ವೆಬ್‌ಸೈಟ್‌ನಲ್ಲಿ ಕೇವಲ ಒಂದು ದಿನದಲ್ಲಿ 14 ಲಕ್ಷಕ್ಕೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ. ಸ್ವಯಂಸೇವಕರೇ ನಮ್ಮ ಜೀವಾಳ. ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಯುವ ನಾಯಕತ್ವದ ಮೂಲಕ ತಳಮಟ್ಟದಲ್ಲಿ ನಿಜವಾದ ಬದಲಾವಣೆ ತರುವುದು ನಮ್ಮ ಗುರಿ ಎಂದು ವೆಬ್‌ಸೈಟ್‌‍ ಸಂದೇಶ ಸಾರಿದೆ.

ತಮಿಳುನಾಡಿನಲ್ಲಿ ವಂಶಪಾರಂಪರ್ಯ ಮತ್ತು ಗಣ್ಯರ ರಾಜಕಾರಣಕ್ಕೆ ಮುಕ್ತಿ ಹಾಡಿ, ಶಾಶ್ವತ ಶಾಸಕರು ಮತ್ತು ಸಂಸದರ ಸಂಸ್ಕೃತಿಯನ್ನು ಕೊನೆಗೊಳಿಸುವುದಾಗಿ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಆಂದೋಲನವು ಸಕ್ರಿಯವಾಗಿ ಸ್ಪರ್ಧಿಸಲಿದ್ದು, ಜನಸಾಮಾನ್ಯರ ಮನೆಯ ಮಕ್ಕಳಿಗೆ ನಾಯಕತ್ವದ ಹಕ್ಕು ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

ರಾಜಕೀಯವು ಕೇವಲ ಆಯ್ದ ಕೆಲವರಿಗಷ್ಟೇ ಸೀಮಿತವಲ್ಲ, ಅದು ಸಾಮಾನ್ಯ ನಾಗರಿಕರ ಶಕ್ತಿ ಎಂಬುದನ್ನು ಸಾಬೀತುಪಡಿಸಲು ನನ್ನೊಂದಿಗೆ ಕೈಜೋಡಿಸಿ ಎಂಬ ಅವರ ಆಶಾವಾದಿ ಕರೆಗೆ ಇಡೀ ತಮಿಳುನಾಡು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಭವಿಷ್ಯದ ಪೀಳಿಗೆಗೆ ಭದ್ರ ಬುನಾದಿ ಸಿಕ್ಕಂತಾಗಿದೆ.

RELATED ARTICLES

Latest News