ಹಾಸನ,ಜೂ.8- ನಗರದ ಚನ್ನಪಟ್ಟಣದಲ್ಲಿರುವ ಜಿಲ್ಲಾ ನ್ಯಾಯಾಲಯದ ಎದುರೇ ತಡರಾತ್ರಿ ರೌಡಿಶೀಟರ್ನನ್ನು ದುಷ್ಕರ್ಮಿಗಳು ಮಾರಕಾಸಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ನಿವಾಸಿ ಮಂಜೇಶ್ ಕುಮಾರ್ (43) ಕೊಲೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದೆ. ಮೂಲತಃ ಹಾಸನ ಜಿಲ್ಲೆಯವರಾದ ಮಂಜೇಶ್ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದು, ಅಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ರೌಡಿಶೀಟರ್ ಆಗಿ ದಾಖಲಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಜೇಶ್ ಕೆಲಸದ ನಿಮಿತ್ತ ಹಾಸನಕ್ಕೆ ಬಂದಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿ, ಜಿಲ್ಲಾ ನ್ಯಾಯಾಲಯದ ಎದುರು ಒಂಟಿಯಾಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ್ದಾರೆ. ಹರಿತವಾದ ಮಾರಕಾಸಗಳಿಂದ ಮಂಜೇಶ್ನ ತಲೆ, ಹೊಟ್ಟೆ, ಸೊಂಟ ಹಾಗೂ ಕೈಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹಾಸನ ಉಪವಿಭಾಗದ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಜಿಲ್ಲಾ ನಿಸ್ತಂತು ಕೊಠಡಿಯಿಂದ ಮಾಹಿತಿ ಪಡೆದ ಬಳಿಕ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಸಮೀಪ ಸಿಕ್ಕ ದಾಖಲೆಗಳ ಆಧಾರದ ಮೇಲೆ ಮೃತನ ಗುರುತು ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಹಳೇ ದ್ವೇಷ ಅಥವಾ ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಾರ್ವಜನಿಕರ ಸಂಚಾರ ಹೆಚ್ಚಿರುವ ನ್ಯಾಯಾಲಯದ ಎದುರೇ ನಡೆದ ಈ ಭೀಕರ ಹತ್ಯೆ ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ.
