ಬೆಂಗಳೂರು, ಜೂ.8- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡದೆ ಬಿಜೆಪಿ ಅನ್ಯಾಯ ಮಾಡಿದೆ ಎಂಬುದಕ್ಕೆ ತಾವು ಸದ್ಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಸದ್ಯಕ್ಕೆ ನಾನು ಏನನ್ನು ಮಾತನಾಡುವುದಿಲ್ಲ. ನಮ ಪಕ್ಷ ಯಾವ ವಿಚಾರಗಳನ್ನು ಚಿಂತನೆ ಮಾಡಲಿದೆ ನಾನು ಅದನ್ನು ಪಾಲನೆ ಮಾಡುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ನಲ್ಲಿ ಐದನೇ ಅಭ್ಯರ್ಥಿ ಗೆಲುವಿಗೆ ರೂಪಿಸಲಾಗಿರುವ ರಣತಂತ್ರಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣದಲ್ಲಿ ಕಾರ್ಯತಂತ್ರಗಳ ಬಗ್ಗೆ ಯಾರಾದರೂ ಗುಟ್ಟು ಬಿಟ್ಟುಕೊಡುತ್ತಾರೆಯೇ ಎಂದರು.
ಇದೇ ವೇಳೆ ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು. ಯಾವುದೇ ಹುದ್ದೆ ಕೇಳದ ನಿಷ್ಠಾವಂತ ಕಾರ್ಯಕರ್ತ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲು ಚಿಂತನೆ ನಡೆದಿತ್ತು ಎಂದು ಶೋಕಿಸಿದರು. ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ತಿಳಿಸಿದರು.
