ಕೋಲ್ಕತ್ತಾ/ನವದೆಹಲಿ, ಜೂ. 8- ಮಹತ್ವದ ಬೆಳವಣಿಗೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದರ ಜೊತೆಗೆ ರಾಜ್ಯಸಭೆ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಬೆಳವಣಿಗೆಯು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಗಣಿಸಲಾಗಿದ್ದು, ಪಕ್ಷದೊಳಗಿನ ಅಸಮಾಧಾನ ಇದೀಗ ಸಂಸತ್ತಿನ ಸದಸ್ಯರ ಮಟ್ಟಕ್ಕೂ ವ್ಯಾಪಿಸುತ್ತಿರುವ ಸೂಚನೆ ನೀಡಿದೆ.
ಟಿಎಂಸಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿರುವ ಹಾಗೂ ಸಂಸತ್ತಿನಲ್ಲಿ ಪಕ್ಷದ ಪ್ರಮುಖ ಮುಖವಾಗಿದ್ದ ರಾಯ್, ಇಂಡಿಯಾ ಮೈತ್ರಿಕೂಟದ ಸಭೆ ನಡೆಯಲಿದ್ದ ಕೆಲವೇ ಗಂಟೆಗಳ ಮೊದಲು ನವದೆಹಲಿಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.ಈ ಸಭೆಯಲ್ಲಿ ಮಮತಾ ಬ್ಯಾನರ್ಜಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಭಾಗವಹಿಸಲಿದ್ದರು.
ರಾಯ್ ಅವರ ರಾಜೀನಾಮೆ, ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಪಕ್ಷದೊಳಗೆ ನಡೆದ ಅಪೂರ್ವ ಬಂಡಾಯದ ಕೆಲವೇ ದಿನಗಳ ಬಳಿಕ ಬಂದಿದೆ. 58 ಟಿಎಂಸಿ ಶಾಸಕರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಶೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ತಿರಸ್ಕರಿಸಿ ರಿತಬ್ರತಾ ಬ್ಯಾನರ್ಜಿಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬೆಂಬಲ ಸೂಚಿಸಿದ್ದರು.
ಈ ಬಂಡಾಯದ ಪರಿಣಾಮವಾಗಿ ವಿಧಾನಸಭಾಧ್ಯಕ್ಷರು ರಿತಬ್ರತ ಬ್ಯಾನರ್ಜಿ ಅವರನ್ನು ಅಧಿಕೃತವಾಗಿ ವಿರೋಧ ಪಕ್ಷದ ನಾಯಕರಾಗಿ ಮಾನ್ಯತೆ ನೀಡಿದ್ದು, ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿದ್ದವು. ತಮ ರಾಜೀನಾಮೆ ಪತ್ರದಲ್ಲಿ ರಾಯ್, ಪಕ್ಷದ ಸಂಘಟನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನೆಲೆಸಿದೆ ಎಂದು ಆರೋಪಿಸಿದ್ದಾರೆ. ಪಕ್ಷದ ವಿರುದ್ಧ ಸಾರ್ವಜನಿಕ ಅಸಮಾಧಾನ ಅಪಾಯಕಾರಿ ಮಟ್ಟಕ್ಕೆ ತಲುಪಿದೆ ಎಂದೂ ಅವರು ಹೇಳಿದ್ದಾರೆ.
