ಬೆಂಗಳೂರು,ಜೂ.9- ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಒಕ್ಕೂಟ ಕೂಡ ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ 7ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಎಲ್ಲಾ ಪಕ್ಷಗಳಲ್ಲೂ ಅಡ್ಡ ಮತದಾನದ ಭೀತಿ ಎದುರಾಗಿದೆ.
ಅಗತ್ಯವಿರುವ ಬಲದ ಕೊರತೆ ಇರುವ ಕಡೆಗಳಲ್ಲಿ ಪಕ್ಷಗಳು ಇತರ ಪಕ್ಷದ ಶಾಸಕರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿವೆ. ಶಾಸಕರಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆ ನಡೆಯುವುದರಿಂದ, ಪ್ರತಿ ಮತವೂ ನಿರ್ಣಾಯಕವಾಗಿರುತ್ತದೆ. ಹೀಗಾಗಿ ತಮ ಶಾಸಕರನ್ನು ಪಕ್ಷದ ಹೈಕಮಾಂಡ್ ಒಂದೆಡೆ ಸೇರಿಸಿ, ಮತದಾನದ ವಿಧಾನದ ಬಗ್ಗೆ ಜಾಗೃತಿ ವಹಿಸುವ ಸಾಧ್ಯತೆಯೂ ಇದೆ.
ಇದು ರಹಸ್ಯ ಮತದಾನದ ಪದ್ಧತಿಯಾಗಿರುವುದರಿಂದ, ಪಕ್ಷದ ಆಂತರಿಕ ಭಿನ್ನಮತ ಅಥವಾ ಅಡ್ಡ ಮತದಾನದ ಭೀತಿಯನ್ನು ಎಲ್ಲಾ ಪಕ್ಷಗಳೂ ಎದುರಿಸುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ಈ ಸ್ಥಾನ ಪ್ರತಿಷ್ಠೆಯ ವಿಷಯವಾಗಿದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಚುನಾವಣೆ ಅನಿವಾರ್ಯವಾಗಿದೆ.
ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಗೆಲುವಿಗಾಗಿ ರೆಸಾರ್ಟ್ ರಾಜಕೀಯ ಅಥವಾ ಶಾಸಕರನ್ನು ಒಗ್ಗೂಡಿಸುವ ತಂತ್ರಗಳನ್ನು ಬಳಸುತ್ತಿದ್ದರೆ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ತಂತ್ರಗಳನ್ನು ಹೆಣೆಯುತ್ತಿವೆ.
ಈ ಚುನಾವಣೆಯು ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನ ಮತ್ತು ವಿರೋಧ ಪಕ್ಷಗಳ ಒಗ್ಗಟ್ಟಿನ ಪರೀಕ್ಷೆಯಾಗಿ ಪರಿಣಮಿಸಿದೆ. ಇದು ಕೇವಲ ಸಂಖ್ಯೆಗಳ ಆಟವಾಗಿ ಉಳಿಯದೆ, ಆಯಾ ಪಕ್ಷಗಳ ಆಂತರಿಕ ಒಗ್ಗಟ್ಟು ಮತ್ತು ರಾಜಕೀಯ ಚಾಣಾಕ್ಷತೆಯ ಪರೀಕ್ಷೆಯಾಗಿ ಪರಿಣಮಿಸಿದೆ.
ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವಿಲ್ಲದ ಅಥವಾ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ, ಗೆಲ್ಲಲು ಅಗತ್ಯವಿರುವ ಮತಗಳನ್ನು ಪಡೆಯಲು ಇತರ ಪಕ್ಷಗಳ ಶಾಸಕರ ಬೆಂಬಲ ಅನಿವಾರ್ಯವಾಗುತ್ತದೆ. ಇದುವೇ ಅಡ್ಡ ಮತದಾನದ ಚರ್ಚೆಗೆ ದಾರಿ ಮಾಡಿಕೊಡುತ್ತದೆ.
ಕಾಂಗ್ರೆಸ್ ಈಗಾಗಲೇ 4 ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. 5ನೇ ಸ್ಥಾನವನ್ನು ಗೆಲ್ಲಲು ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷಗಳು ಇತರ ಪಕ್ಷಗಳ ಅಸಮಾಧಾನಿತ ಶಾಸಕರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಬಹುದು. ವಿಧಾನಪರಿತ್‌ನ ಸಭಾಪತಿ, ಉಪಸಭಾಪತಿ ಹುದ್ದೆಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿರುವ ಕಾರಣ ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಪ್ರತಿಷ್ಠೆಯ ವಿಷಯವಾಗಿದೆ.
ಕಾಂಗ್ರೆಸ್: ತನ್ನ ಬಲವನ್ನು ಬಳಸಿಕೊಂಡು 5 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಈಗಾಗಲೇ ನಾಲ್ಕು ಅಭ್ಯರ್ಥಿಗಳ ಜತೆಗೆ 5ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್, ಬಿಜೆಪಿ ಬೆಂಬಲದೊಂದಿಗೆ 7ನೇ ಸ್ಥಾನವನ್ನು ಗೆಲ್ಲುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಗೋವಿಂದರಾಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಬಿಜೆಪಿ ತನ್ನ ಬಲಕ್ಕೆ ಅನುಗುಣವಾಗಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಶಾಸಕರ ಅನರ್ಹತೆ ಮತ್ತು ಅಕಾಲಿಕ ನಿಧನದ ಕಾರಣ, ಪ್ರಸ್ತುತ 222 ಶಾಸಕರು ಮತ ಚಲಾಯಿಸಲಿದ್ದಾರೆ. ಒಬ್ಬ ಅಭ್ಯರ್ಥಿ ಗೆಲ್ಲಲು 28 ಪ್ರಥಮ ಪ್ರಾಶಸ್ತ್ಯ ಮತಗಳ ಅಗತ್ಯವಿದೆ. ಕಾಂಗ್ರೆಸ್ 135 ಶಾಸಕರನ್ನು ಹೊಂದಿದ್ದು, ಸ್ವತಂತ್ರರು ಮತ್ತು ಇತರರ ಬೆಂಬಲದೊಂದಿಗೆ 140 ಮತಗಳನ್ನು ತಲುಪುವ ಸಾಧ್ಯತೆ ಇದೆ. ಇದು 5 ಸ್ಥಾನಗಳನ್ನು ಗೆಲ್ಲಲು ಸಾಕಾಗಬಹುದು ಎಂಬುದು ಲೆಕ್ಕಾಚಾರ.
ಜೆಡಿಎಸ್ ತನ್ನ 18 ಮತಗಳೊಂದಿಗೆ ಬಿಜೆಪಿಯ ಹೆಚ್ಚುವರಿ 6 ಮತಗಳನ್ನು ಪಡೆದರೆ ಒಟ್ಟು 24 ಮತಗಳು ಲಭ್ಯವಾಗುತ್ತವೆ. ಇದರೊಂದಿಗೆ ಅತೃಪ್ತ ಅಥವಾ ಬಂಡಾಯ ಶಾಸಕರ ಬೆಂಬಲ ಪಡೆಯಲು ಪ್ರಯತ್ನಿಸುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ತಮ ಬಲವನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ತನ್ನ ಬಹುಮತವನ್ನು ಉಳಿಸಿಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ತಂತ್ರಗಾರಿಕೆಯಲ್ಲಿ ತೊಡಗಿದೆ.
ಮತದಾನದ ಪ್ರಕ್ರಿಯೆ :
ಜೂನ್ 18ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ, ಮತ ಎಣಿಕೆ ಸಂಜೆ 5 ಗಂಟೆಗೆ ಪ್ರಾರಂಭವಾಗಿ ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಅಡ್ಡಮತದಾನ :
ಇದು ಅಸಮಾಧಾನಿತ ಶಾಸಕರು ಬಳಸುವ ಅತ್ಯಂತ ಪ್ರಬಲವಾದ ಅಸ್ತ್ರ. ತಮ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕುವ ಬದಲು, ಪಕ್ಷದ ಸೂಚನೆಯನ್ನು ಉಲ್ಲಂಘಿಸಿ ಬೇರೆ ಪಕ್ಷದ ಅಥವಾ ಪಕ್ಷೇತರ ಅಭ್ಯರ್ಥಿಗೆ ಮತ ಚಲಾಯಿಸುವುದನ್ನು ಅಡ್ಡಮತದಾನ ಎನ್ನುತ್ತಾರೆ.
ತಮ ಪಕ್ಷದ ಅಭ್ಯರ್ಥಿ ಅಥವಾ ನಿರ್ಧಾರದ ಬಗ್ಗೆ ಅಸಮಾಧಾನವಿದ್ದಾಗ, ಶಾಸಕರು ಅನಾರೋಗ್ಯದ ಕಾರಣ ಅಥವಾ ಬೇರೆ ನೆಪ ಹೇಳಿ ಮತದಾನ ಪ್ರಕ್ರಿಯೆಗೆ ಗೈರುಹಾಜರಾಗಬಹುದು. ಇದು ಪರೋಕ್ಷವಾಗಿ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯನ್ನು ಉಂಟುಮಾಡುತ್ತದೆ.
ಪಕ್ಷಾಂತರ ನಿಷೇಧ ಕಾಯ್ದೆ :
ವಿಧಾನ ಪರಿಷತ್ ಚುನಾವಣೆಯು ಮುಕ್ತ ಮತದಾನ ಮಾದರಿಯಲ್ಲಿ ನಡೆಯುತ್ತದೆ. ಅಂದರೆ, ಶಾಸಕರು ತಮ ಪಕ್ಷದ ಅಧಿಕೃತ ಏಜೆಂಟ್‌ಗೆ ತಾವು ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ತೋರಿಸಬೇಕು.
ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದರೆ ಅಥವಾ ವಿರುದ್ಧವಾಗಿ ಮತ ಹಾಕಿದರೆ, ಆ ಶಾಸಕರ ಮೇಲೆ ಪಕ್ಷವು ಶಿಸ್ತುಕ್ರಮ ಕೈಗೊಳ್ಳಬಹುದು. ಇದು ಶಾಸಕತ್ವವನ್ನೇ ಕಳೆದುಕೊಳ್ಳುವ ಮಟ್ಟಿಗೆ ಹೋಗಬಹುದು.
ಶಾಸಕರು ತಾಂತ್ರಿಕವಾಗಿ ಅಡ್ಡಮತದಾನ ಮಾಡುವ ಸಾಮರ್ಥ್ಯ ಹೊಂದಿದ್ದರೂ, ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿರುವ ಕಠಿಣ ನಿಯಮಗಳು ಅವರನ್ನು ನಿಯಂತ್ರಿಸುತ್ತವೆ. ಹೀಗಾಗಿ ಬಹಿರಂಗವಾಗಿ ಬಂಡಾಯ ಏಳುವ ಬದಲಿಗೆ ಆಂತರಿಕವಾಗಿ ಅಸಮಾಧಾನ ವ್ಯಕ್ತಪಡಿಸುವುದು ಅಥವಾ ಪಕ್ಷದ ನಾಯಕರೊಂದಿಗೆ ಸಂಧಾನ ನಡೆಸುವುದೇ ಶಾಸಕರಿಗೆ ಸುರಕ್ಷಿತ ಮಾರ್ಗವಾಗಿರುತ್ತದೆ.
