ಬೆಂಗಳೂರು, ಜೂ.9- ಸಿಎಂ ಹಾಗೂ ಸಚಿವರು ಪ್ರಮಾಣವಚನ ಸ್ವೀಕರಿಸಿ ವಾರವಾಗುತ್ತಿದ್ದರೂ ಖಾತೆ ಹಂಚಿಕೆ ಬಿಕ್ಕಟ್ಟು ಮಾತ್ರ ಬಗೆಹರಿದಿಲ್ಲ. ಬದಲಾಗಿ ಈ ಬಿಕ್ಕಟ್ಟು ಬೆಂಗಳೂರಿನಿಂದ ದೆಹಲಿಗೆ ಸ್ಥಳಾಂತರಗೊಂಡಿದೆ.
ಸಿಎಂ ಡಿ.ಕೆ.ಶಿವಕುಮಾರ್ ಹಂಚಿಕೆ ಮಾಡಿರುವ ಖಾತೆಯ ಬಗ್ಗೆ ಒಬ್ಬರ ಹಿಂದೆ ಮತ್ತೊಬ್ಬರು ಎಂಬಂತೆ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಬೆಂಗಳೂರು ನಗರಾಭಿ ವೃದ್ಧಿ ಖಾತೆಯನ್ನು ಪೂರ್ಣ ಪ್ರಮಾಣದಲ್ಲಿ ನೀಡಿಲ್ಲ ಎಂದು ಅಸಮಾಧಾನಗೊಂಡಿರುವ ಸಚಿವ ಕೃಷ್ಣಭೈರೇಗೌಡ ದೆಹಲಿಗೆ ತೆರಳಿದ್ದಾರೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಮನಕ್ಕೆ ತಂದು ಖಾತೆ ಬದಲಾವಣೆಯ ಬೇಡಿಕೆ ಮುಂದಿಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ನೇರವಾಗಿ ಖಾತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸದಿದ್ದರೂ ಕೃಷ್ಣಭೈರೇಗೌಡ ಅವರು ತಮಗೆ ವಹಿಸಿರುವ ಖಾತೆಯ ಕೆಲಸವನ್ನೇ ಆರಂಭಿಸಿಲ್ಲ. ಬಿಡಿಎ ಮತ್ತು ಬಿಎಂಆರ್‌ಡಿಎ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ನೀಡದಿದ್ದರೆ ಈ ಖಾತೆಯೇ ಬೇಡ ಎಂಬುದನ್ನು ಹೈಕಮಾಂಡ್ ಗಮನಕ್ಕೆ ಅವರು ತಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಸಚಿವ ಕೆ.ಜೆ.ಜಾರ್ಜ್ ಮತ್ತು ರಾಮಲಿಂಗಾರೆಡ್ಡಿಯವರು ಆಸಕ್ತಿ ತೋರಿದ್ದರು. ಬೇಕಿದ್ದರೆ ಅವರಿಗೇ ಈ ಖಾತೆ ನೀಡಲಿ ಎಂಬ ಅಭಿಪ್ರಾಯವನ್ನು ಭೈರೇಗೌಡ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಕಂದಾಯ ಇಲಾಖೆಯಲ್ಲಿ ಮಾಡಿರುವ ಕೆಲಸದ ಬಗ್ಗೆ ಅವರಿಗೆ ಅಭಿಮಾನವಿದೆ. ಜಲಸಂಪನೂಲ ಸಚಿವ ರಾಮಲಿಂಗಾರೆಡ್ಡಿಯವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿ ವರಿಷ್ಠರ ಮನವರಿಕೆ ನಂತರ ವಾಪಸ್ ಪಡೆದಿದ್ದಾರೆ. ಈಗ ಬೆಂಗಳೂರು ಖಾತೆ ಕೊಟ್ಟರೂ ಬೇಡ ಎಂದು ಹೇಳುತ್ತಿದ್ದಾರೆ.
ಸಚಿವ ಮುನಿಯಪ್ಪ ಕೂಡಾ ಖಾತೆ ಬದಲಾವಣೆ ಮಾಡುವಂತೆ ಮೊರೆ ಇಡುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಿರುವುದಕ್ಕೆ ಅವರು ಅಸಮಾಧಾನಗೊಂಡಿದ್ದಾರೆ. ಈ ಹಿಂದೆ ಇದೇ ಖಾತೆಯನ್ನು ಅವರು ವಹಿಸಿಕೊಂಡಿದ್ದರು. ಈಗ ಬೇರೊಂದು ಖಾತೆಗಾಗಿ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಈಗಾಗಲೇ ಹಂಚಿಕೆಯಾಗಿರುವ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡದ ಮುಖ್ಯಮಂತ್ರಿ ಪಕ್ಷದ ನಾಯಕರು, ವರಿಷ್ಠರ ಮೂಲಕ ವಹಿಸಿರುವ ಖಾತೆಗಳಲ್ಲಿಯೇ ಮುಂದುವರೆಯುವಂತೆ ಮನವೊಲಿಕೆ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಖಾತೆ ಬಗೆಗಿನ ಅಸಮಾಧಾನ ಮಾತ್ರ ತಣ್ಣಗಾದಂತೆ ಕಾಣುತ್ತಿಲ್ಲ.
ಈ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲದೆ ರಾಜಕೀಯವಾಗಿಯೂ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಸಂಪುಟ ಸೇರಲು ಶಾಸಕರು ಹರಸಾಹಸ ಪಡುತ್ತಿದ್ದಾರೆ. ಪಕ್ಷದ ನಾಯಕರು, ವರಿಷ್ಠರನ್ನು ಸಂಪರ್ಕಿಸಿ ಸಚಿವ ಸ್ಥಾನ ನೀಡುವಂತೆ ಮೊರೆ ಇಡುತ್ತಿದ್ದಾರೆ.ಸಚಿವ ಕೃಷ್ಣಭೈರೇಗೌಡ ಅವರಲ್ಲದೆ ಸಚಿವಾಕಾಂಕ್ಷಿ ಹಲವು ಶಾಸಕರು ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಿ ತಮ ಮನವಿಗಳನ್ನು ಸಲ್ಲಿಸಲಿದ್ದಾರೆ.
ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ ಸಂಪುಟವನ್ನು ವಿಸ್ತರಣೆ ಮಾಡಲಿದ್ದು, ಆ ಸಂದರ್ಭದಲ್ಲಿ ತಮಗೂ ಅವಕಾಶ ಕಲ್ಪಿಸಬೇಕು ಎಂದು ಸಚಿವಾಕಾಂಕ್ಷಿ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನವನ್ನು ನಿರಂತರವಾಗಿ ಮಾಡತೊಡಗಿದ್ದಾರೆ.
