ಬೆಂಗಳೂರು.9- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಕೇಳಿರಲಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.ಜಿಲ್ಲೆಯ ತಗ್ಗಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಬಗ್ಗೆ ಕಾಂಗ್ರೆಸ್ನವರಿಗೆ ಈಗ ಅನುಕಂಪ ಬಂದಿದೆ ಎಂದು ವ್ಯಂಗ್ಯವಾಡಿದರು.
ದೇವೇಗೌಡರು ಹೋರಾಟದ ಬದುಕನ್ನು ನಡೆಸಿಕೊಂಡು ಬಂದಿದ್ದು, ಅಧಿಕಾರಕ್ಕಾಗಿ ಯಾರ ಮನೆಬಾಗಿಲಿಗೂ ಹೋಗಿಲ್ಲ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟುಬಂದರು ಎಂದು ಹೇಳಿದರು.
ಕಾಂಗ್ರೆಸ್ನವರು ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಬಿರುಕು ತರುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.2020 ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಮತ್ತೊಬ್ಬ ಅಭ್ಯರ್ಥಿ ಸ್ಪರ್ಧಿಸುವ ಅವಕಾಶವಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಬೆಂಬಲದೊಂದಿಗೆ ಅವಿರೋಧ ಆಯ್ಕೆಯಾಗಿತ್ತು ಎಂದು ಹೇಳಿದರು.
ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನೂತನ ಮುಖ್ಯಮಂತ್ರಿ ಏನು ಮಾಡುತ್ತಾರೆ ಎಂಬುದನ್ನು ಎರಡು ತಿಂಗಳು ಕಾದುನೋಡೋಣ. ಮುಖ್ಯಮಂತ್ರಿಗೆ ನಾನೇನು ಸಲಹೆ ನೀಡಲಿ ಎಂದ ಅವರು, ಕುಮಾರಸ್ವಾಮಿಯವರು 2 ಬಾರಿ ಮುಖ್ಯಮಂತ್ರಿಯಾಗಿ ಏನು ಸಾಧನೆ ಮಾಡಿದ್ದಾರೆ ಎಂದು ಈಗಿನ ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. ಎಲ್ಲದಕ್ಕೂ ಸಾಕ್ಷಿಗುಡ್ಡೆ ಕೇಳುವ ಅವರಿಗೆ ನನ್ನಿಂದ ಏನು ಸಲಹೆ ನಿರೀಕ್ಷೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು. ನಾನು ಮತ್ತೆ ಮುಖ್ಯಮಂತ್ರಿಯಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಜನರ ರಕ್ಷಣೆ ಮಾಡಬೇಕಿದೆ. ಆ ಶಕ್ತಿ ಮೈತ್ರಿಪಕ್ಷಗಳಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಮೇಲನೆ ಚುನಾವಣೆ ; ಗೇಮ್ಪ್ಲ್ಯಾನ್ ಇಲ್ಲ :
ವಿಧಾನಸಭೆಯಿಂದ ವಿಧಾನಪರಿಷತ್ನ 7 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಜೆಡಿಎಸ್ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ನಮಗೂ 2 ಮತಗಳ ಕೊರತೆಯಿದೆ. ಕಾಂಗ್ರೆಸ್ನ 5ನೇ ಅಭ್ಯರ್ಥಿಗೂ 2 ಮತಗಳ ಕೊರತೆಯಿದೆ. ಈ ಚುನಾವಣೆಯಲ್ಲಿ ಯಾವುದೇ ಗೇಮ್ ಪ್ಲ್ಯಾನ್ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮತವನ್ನು ಕೇಳುತ್ತೇವೆ. ಕಾಂಗ್ರೆಸ್ನವರಿಗೆ ಹಣಬಲವಿದೆ. ಮುಂದೇನಾಗುತ್ತದೋ ಕಾದು ನೋಡೋಣ ಎಂದರು.
ಎಲ್ಲಾ ದೇಶಗಳಲ್ಲೂ ಏರಿಕೆ :
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಬಿಕ್ಕಟ್ಟಿನಿಂದಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿಕೆಯಾಗಿದೆ. ಇದು ಕೇವಲ ಭಾರತದಲ್ಲಿ ಮಾತ್ರ ಆಗಿಲ್ಲ. ವಿಶ್ವದ ಎಲ್ಲಾ ದೇಶಗಳಲ್ಲೂ ಇಂಥ ಪರಿಸ್ಥಿತಿ ಎದುರಾಗಿದೆ. ಕಾಂಗ್ರೆಸ್ನವರು ಎಲ್ಲವುಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಏನು ಮಾಡುತ್ತಿದ್ದರು? ಎಂದು ಕಾಂಗ್ರೆಸ್ನವರನ್ನೇ ಪ್ರಶ್ನಿಸಿದರು. ಮಂಡ್ಯ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ 54 ಕೋಟಿ ರೂ. ಅನುದಾನ ದೊರೆತಿದೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
