ಚಿಕ್ಕಮಗಳೂರು, ಜೂ.11- ಉದ್ಯಮಿಯೊಬ್ಬರ ಪತ್ನಿ ಗುಂಡು ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಕಾಫಿನಾಡಿನ ಹಾಲೇನಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಸುಮ (55) ಆತಹತ್ಯೆ ಮಾಡಿಕೊಂಡ ಮಹಿಳೆ.
ಉದ್ಯಮಿ ರಾಜೇಶ್ ಅವರ ಪತ್ನಿ ನಿನ್ನೆ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಅವರು ಆತಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶ್ರೀಮಂತ ಕುಟುಂಬದ ಗೃಹಿಣಿಯ ಈ ದಿಢೀರ್ ಸಾವು ತೀವ್ರ ಆಘಾತ ಮತ್ತು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ.
ಘಟನಾ ಸ್ಥಳದಲ್ಲಿ ಸುಮ ಅವರು ಬರೆದಿದ್ದಾರೆನ್ನಲಾದ ಡೆತ್‌ನೋಟ್ ಪತ್ತೆಯಾಗಿದ್ದು, ಸಾವಿನ ಹಿಂದಿರುವ ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರಿಗೆ ಇದು ಪ್ರಮುಖ ಸಾಕ್ಷಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಸವನಹಳ್ಳಿ ಠಾಣೆಯ ಪೊಲೀಸರು, ಸೋಕೋ ತಂಡ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ರಿವಾಲ್ವರ್ ಮತ್ತು ಡೆತ್ ನೋಟ್ ಸೇರಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೃತರ ಪುತ್ರ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಇದು ಪಿಸ್ತೂಲಿನಿಂದ ಮಾಡಿಕೊಂಡ ಆತಹತ್ಯೆಯಂತೆ ಕಂಡುಬರುತ್ತಿದೆ ಎಂದು ತಿಳಿಸಿದ್ದು ತನಿಖೆಯ ನಂತರವಷ್ಟೇ ಈ ನಿಗೂಢ ಸಾವಿನ ಹಿಂದಿನ ನಿಜವಾದ ಸತ್ಯಾಂಶ ಹೊರಬರಬೇಕಿದೆ.ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
