ಬೆಂಗಳೂರು,ಜೂ.12- ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬಾಲಕಿ ವೆನ್ನಿಲಾ (6) ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ್ದ ಇನ್ಸ್ ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌್ಸಪೆಕ್ಟರ್ ರಂಗಸ್ವಾಮಿ, ಸಬ್ ಇನ್‌್ಸಪೆಕ್ಟರ್ ನಿಂಗರಾಜು, ಹಾಗೂ ಹೆಡ್ ಕಾನ್‌ಸ್ಟೇಬಲ್ ಹಾಲೇಶ್ ನಾಯಕ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
ಜೂ.4 ರಂದು ಬಾಲಕಿಯನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು. ಹಾಗಾಗಿ ಮೇಲ್ನೋಟಕ್ಕೆ ತನಿಖಾಧಿಕಾರಿಗಳಾಗಿದ್ದ
ಇನ್‌್ಸಪೆಕ್ಟರ್ ಹಾಗೂ ಸಬ್‌ಇನ್ಸ್ ಪೆಕ್ಟರ್ ಅವರ ಕರ್ತವ್ಯಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಪೂರ್ವವಲಯ ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರಿಗೆ ಸೂಚಿಸಲಾಗಿತ್ತು.
ರಮೇಶ್ ಬಾನೋತ್ ಅವರು ನೀಡಿದ ವರದಿ ಆಧಾರದ ಮೇರೆಗೆ ಈ ಮೂವರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಬಗ್ಗೆ ತನಿಖೆ ನಡೆಸಲು ಬಾಣಸವಾಡಿ ಉಪವಿಭಾಗದ ಎಸಿಪಿ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಆಯುಕ್ತರು ಹೇಳಿದರು.
ಸ್ವಂತ ಮಗಳನ್ನೇ ಕೊಂದ ತಾಯಿ:
ಆರಂಭದಲ್ಲಿ ಈ ಬಾಲಕಿಯನ್ನು ತಾಯಿಯೇ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬರುತ್ತಿತ್ತು. ನಂತರ ಒಂದೊಂದೇ ಕಥೆಗಳು ತೆರೆದುಕೊಂಡಿವೆ. ಮೊದಲು ಬಾಲಕಿಯ ಬಣ್ಣದ ವಿಷಯ ಎಂದು ಬಿಂಬಿಸಲಾಗಿತ್ತು. ನಂತರ ಪ್ರಿಯಕರನ ಪ್ರೀಮ ಕಥೆ ಬಯಲಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆದರೆ ಆರೋಪಿತೆ ಪ್ರಿಯಾಂಕಾ ಮಾತ್ರ ಪತ್ತೆಯಾಗಿರಲಿಲ್ಲ. ಪೊಲೀಸರ ವೈಲ್ಯವೇ ಇದಕ್ಕೆಲ್ಲಾ ಕಾರಣವಿರಬಹುದೇ ಎಂಬ ಅನುಮಾನ ಹುಟ್ಟಿಸಿತ್ತು.
ಹೆತ್ತ ಮಗಳನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಿಯಾಂಕಾಳಿಗಾಗಿ ಕಾಡುಗೋಡಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಸತತವಾಗಿ ಹುಡುಕಾಟ ನಡೆಸಿದ್ದರು. ನಗರದಿಂದ ಮೈಸೂರಿಗೆ, ನಂತರ ಅಲ್ಲಿಂದ ಹಾಸನದ ಸಕಲೇಶಪುರ ಹೋಗಿದ್ದ ಪ್ರಿಯಾಂಕಾ ಸ್ನೇಹಿತರ ಮನೆಯಲ್ಲಿದ್ದಳು.
ಕೊನೆಗೂ ಪ್ರಿಯಾಂಕಾಳ ಜಾಡು ಪತ್ತೆಹಚ್ಚಿದ ಪೊಲೀಸರು ಸಕಲೇಶಪುರದಲ್ಲಿ ಆಕೆಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.ಆರು ವರ್ಷದ ಬಾಲಕಿ ಕೊಲೆ ಪ್ರಕರಣದಲ್ಲಿ ಪೊಲೀಸರ ಕರ್ತವ್ಯಲೋಪ ಎಂಬ ಆರೋಪ ಕೇಳಿ ಬಂದಿತು.
ಬಾಲಕಿಯ ತಂದೆ ಪ್ರವೀಣ್ ಮಗಳ ಮರಣೋತ್ತರ ಪರೀಕ್ಷೆ ವರದಿಯನ್ನು ಕಾಡುಗೋಡಿ ಠಾಣೆಗೆ ನೀಡಿದ್ದರೂ ಸಹ ಕೊಲೆ ಪ್ರಕರಣ ದಾಖಲಿಸಿರಲಿಲ್ಲ. ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಿಸಿಟಿವಿಯನ್ನೂ ಪರಿಶೀಲಿಸಿರಲಿಲ್ಲ ಎಂಬ ಆರೋಪ ಪೊಲೀಸರ ಮೇಲಿತ್ತು.
ಮರಣೋತ್ತರ ಪರೀಕ್ಷೆ ದಿನವೇ ಮಗುವಿನ ಸಾವಿನ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರು. ವೈದ್ಯರು ವರದಿ ನೀಡಿದ ದಿನ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಮೋಹನ್ ಪೊಲೀಸರ ಮುಂದೆಯೇ ಇದ್ದರು. ಆದರೂ ಅವರಿಬ್ಬರನ್ನೂ ಸರಿಯಾಗಿ ವಿಚಾರಣೆ ಮಾಡದೆ ಬಿಟ್ಟು ಕಳಿಸಿದ್ದರು. ಪೊಲೀಸರ ನಿರ್ಲಕ್ಷ್ಯದಿಂದ ಸಾಕ್ಷ್ಯ ನಾಶಕ್ಕೆ ಸಹಾಯವಾಗಿದೆ ಎಂಬ ಆರೋಪ ಹಾಗೂ ಜಂಟಿ ಪೊಲೀಸ್ ಆಯುಕ್ತರು ನೀಡಿದ ವರದಿ ಆಧರಿಸಿ ಆಯುಕ್ತರು ಕಠಿಣ ನಿರ್ಧಾರಕ್ಕೆ ಬಂದು ಮೂವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಇನ್‌್ಸಪೆಕ್ಟರ್ ರಂಗಸ್ವಾಮಿ ಅವರು ವರ್ಗಾವಣೆಗೊಂಡಿದ್ದು, ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ನಿಂಗರಾಜು ಹಾಗೂ ಹಾಲೇಶ್ ನಾಯಕ್ ಕಾಡುಗೋಡಿ ಪೊಲೀಸ್ ಠಾಣೆಯಲ್ಲೇ ಸೇವೆ ಸಲ್ಲಿಸುತ್ತಿದ್ದರು. ಇದೀಗ ಈ ಮೂವರೂ ಅಮಾನತಾಗಿದ್ದಾರೆ.
